
ಉತ್ತರ ಕನ್ನಡ, ನವೆಂಬರ್ 08: ಸಾಮಾನ್ಯವಾಗಿ ಬಾವಿ ನೀರನ್ನು ಬೆಂಕಿ ನಂದಿಸಲು ಬಳಸುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಬಾವಿ ನೀರಿಗೆ ಬೆಂಕಿ ಕಡ್ಡಿ ಗೀರಿದರೆ ಸಾಕು, ನೀರೇ ಧಗಧಗನೆ ಉರಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದ ಓಂಕಾರ ನಗರದಲ್ಲಿ ಇಂತಹ ವಿಚಿತ್ರ ಹಾಗೂ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ಇಲ್ಲಿನ ಸುಮಾರು ಆರು ಬಾವಿಗಳ ನೀರಿನಲ್ಲಿ ಆಯಿಲ್ ಮಿಶ್ರಣವಾಗಿದ್ದು, ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಅಷ್ಟೇ ಅಲ್ಲ, ಬಾವಿ ನೀರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ವಾಸನೆ ಬರುತ್ತಿದ್ದು, ಬೆಂಕಿ ತಾಗಿಸಿದರೆ ಹೊತ್ತಿ ಉರಿಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ದೊಡ್ನಳ್ಳಿ ಗ್ರಾಮದ ಓಂಕಾರ ನಗರದ ಹಲವು ಬಾವಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಬಾವಿಯ ನೀರಿನ ಮೇಲೆ ಎಣ್ಣೆಯ ಪದರ ತೇಲುತ್ತಿದ್ದು, ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಬಾವಿಯ ನೀರನ್ನು ಖಾಲಿ ಮಾಡಿದರೂ ಮತ್ತೆ ಆಯಿಲ್ ಮಿಶ್ರಿತ ನೀರು ತುಂಬಿಕೊಳ್ಳುತ್ತಿದೆ ಎನ್ನಲಾಗಿದೆ. ನೀರಿನಲ್ಲಿ ಪೇಪರ್ ಅದ್ದಿ ಬೆಂಕಿ ಹಚ್ಚಿದಾಗ ಪೇಪರ್ ಹೊತ್ತಿ ಉರಿಯುತ್ತಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡವೂ ನೀರಿನಲ್ಲಿ ಆಯಿಲ್ ತೇಲುತ್ತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದೆ. ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಗ್ರಾಮ ಪಂಚಾಯತ್ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಮುಂದಾಗಿದೆ.
ಓಂಕಾರ ನಗರದ ಪಕ್ಕದಲ್ಲೇ ಬೃಹತ್ ವಿದ್ಯುತ್ ಪ್ರಸರಣ ಪವರ್ ಗ್ರಿಡ್ ಇದೆ. ಇಲ್ಲಿನ ಟ್ರಾನ್ಸ್‌ಫಾರ್ಮರ್‌ಗಳಿಂದ ಆಯಿಲ್ ಸೋರಿಕೆಯಾಗಿ ಭೂಮಿಯೊಳಗೆ ಸೇರಿ ಅಂತರ್ಜಲ ಕಲುಷಿತಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ತಜ್ಞರ ತಂಡ ಪವರ್ ಗ್ರಿಡ್ ಆವರಣಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆದರೆ ಬಾವಿಗಳ ನೀರಿಗೆ ಆಯಿಲ್ ಸೇರುತ್ತಿರುವ ನಿಖರ ಮೂಲ ಇನ್ನೂ ಪತ್ತೆಯಾಗಿಲ್ಲ. ಪ್ರಯೋಗಾಲಯದ ಸಂಪೂರ್ಣ ವರದಿ ಬಂದ ಬಳಿಕವಷ್ಟೇ ನೀರಿನಲ್ಲಿ ಮಿಶ್ರಣವಾಗಿರುವ ವಸ್ತುವಿನ ಸ್ವರೂಪ ಮತ್ತು ಅದರ ಮೂಲದ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಸದ್ಯ ಕುಡಿಯುವ ನೀರಿನ ಸುರಕ್ಷತೆ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ