
ಹೊನ್ನಾವರ, ಅಕ್ಟೋಬರ್ 02: ದೇಶಾದ್ಯಂತ ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ’ ಅಭಿಯಾನದಡಿ ಕಸ ಗುಡಿಸಿ ನೈರ್ಮಲ್ಯ ಮೆರೆಯುವುದು ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನೂರಾರು ವರ್ಷಗಳಿಂದಲೂ ಮನೆ ಕಸವನ್ನು ಸಂಪೂರ್ಣವಾಗಿ ಹೊರಹಾಕಿ, ಅದನ್ನು ದೇವಿಗೆ ಅರ್ಪಿಸುವ ವಿಶಿಷ್ಟ ಹಾಗೂ ಧಾರ್ಮಿಕ ಆಚರಣೆಯೊಂದು ನಡೆದುಕೊಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ‘ವಡಗಲಮ್ಮ’ದೇವಿಗೆ ಹಳೆಯ ಮತ್ತು ಅನಗತ್ಯ ವಸ್ತುಗಳನ್ನು ಅರ್ಪಿಸುವ ಸಂಪ್ರದಾಯ ಜೀವಂತವಾಗಿದೆ. ‘ವಡಗು’ ಎಂದರೆ ಉತ್ತರ ಕನ್ನಡದ ಉಪಭಾಷೆಯಲ್ಲಿ ‘ಕಸ ಗುಡಿಸು’ ಎಂದರ್ಥ.
ಗ್ರಾಮಸ್ಥರು ತಮ್ಮ ಮನೆಗಳಲ್ಲಿರುವ ಹಳೆಯ ವಸ್ತುಗಳು, ಮುರಿದ ಚತ್ರಿ, ಹರಿದ ಬಟ್ಟೆಗಳು, ಕೃಷಿ ಉಪಕರಣಗಳು, ಪೊರಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಗುಡಿಸಿ ಸಂಗ್ರಹಿಸುತ್ತಾರೆ. ಈ ಎಲ್ಲ ಕಸದ ಮೂಟೆಗಳನ್ನು ರಾಷ್ಟ್ರೀಯ ಹೆದ್ದಾರಿ-66 ರ ಬದಿಯಲ್ಲಿ ಪ್ರತಿಷ್ಠಾಪಿಸಲಾಗುವ ವಡಗಲಮ್ಮ ದೇವಿಯ ಬಳಿ ತಂದು ಸುರಿಯಲಾಗುತ್ತದೆ. ಇದರೊಂದಿಗೆ ಅರಿಶಿನ-ಕುಂಕುಮ, ಸೀರೆ, ತೆಂಗಿನಕಾಯಿ ಹಾಗೂ ಕೋಳಿಗಳನ್ನು ನೀಡಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಆಚರಣೆಯ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ. ಹಳೆಯ ವಸ್ತುಗಳನ್ನು ಮನೆಯಲ್ಲೇ ಇಟ್ಟುಕೊಂಡರೆ ಕಾಲರಾ, ಸಾಂಕ್ರಾಮಿಕ ಜ್ವರ ಹಾಗೂ ಇನ್ನಿತರ ರೋಗಗಳು ಹರಡುತ್ತವೆ ಎಂಬ ನಂಬಿಕೆ ಇತ್ತು. ಮನೆ ಕಸವನ್ನು ದೇವಿಗೆ ಅರ್ಪಿಸುವುದರಿಂದ ಗ್ರಾಮಕ್ಕೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಮತ್ತು ದೇವಿಯೇ ಕಸದೊಂದಿಗೆ ರೋಗ-ರುಜಿನಗಳನ್ನು ಹೊತ್ತೊಯ್ಯುತ್ತಾಳೆ ಎಂಬುದು ಸ್ಥಳೀಯರ ಬಲವಾದ ವಿಶ್ವಾಸ.
ಪ್ರತಿ ವರ್ಷ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಚರಿಸುವ ಈ ವಡಗಲಮ್ಮನ ಮೂರ್ತಿಯು ಮಹಾಲಯ ಅಮಾವಾಸ್ಯೆಯವರೆಗೆ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತದೆ. ಬಳಿಕ ಎಲ್ಲ ಕಸದ ರಾಶಿಯನ್ನು ಬೇರೊಂದು ಗ್ರಾಮಕ್ಕೆ ಹಸ್ತಾಂತರಿಸಿ, ಅಂತಿಮವಾಗಿ ಜಿಲ್ಲೆಯ ಗಡಿ ದಾಟಿಸಿ ನಿರ್ಜನ ಪ್ರದೇಶದಲ್ಲಿ ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ. ಸ್ವಚ್ಛತೆಗೆ ದೈವಿಕ ಸ್ಪರ್ಶ ನೀಡಿದ ಈ ವಿಶಿಷ್ಟ ಆಚರಣೆ ಉತ್ತರ ಕನ್ನಡದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ