ಹೊನ್ನಾವರ: ಗೋಮಾಂಸ ಕದ್ದೊಯ್ದ ಕೇಸ್​ಗೆ ತಿರುವು, ವರ್ಷದಲ್ಲಿ 100 ಹಸುಗಳ ಕದ್ದು ಮಾರಾಟ ಮಾಡಿದ ಶಂಕೆ

| Updated By: Ganapathi Sharma

Updated on: Jan 28, 2025 | 7:02 AM

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದಿದ್ದ ಪ್ರಕರಣದ ತನಿಖೆ ವೇಳೆ ಒಂದೊಂದೇ ಶಾಕಿಂಗ್ ವಿಚಾರ ಹೊರಬರುತ್ತಿದೆ. ಕಳೆದೊಂದು ವರ್ಷದಲ್ಲಿ 100 ಹಸುಗಳು ನಿಗೂಢವಾಗಿ ಕಣ್ಮರೆ ಆಗಿದ್ದು ಹಸುಗಳು ಗೋಕಳ್ಳರ ಕೈಗೆ ಸಿಕ್ಕಿ ಬಲಿಯಾದವೇ ಎಂಬ ಅನುಮಾನ ಮೂಡಿದೆ.

ಹೊನ್ನಾವರ: ಗೋಮಾಂಸ ಕದ್ದೊಯ್ದ ಕೇಸ್​ಗೆ ತಿರುವು, ವರ್ಷದಲ್ಲಿ 100 ಹಸುಗಳ ಕದ್ದು ಮಾರಾಟ ಮಾಡಿದ ಶಂಕೆ
ಉತ್ತರಕನ್ನಡ ಜಿಲ್ಲೆಯ ಸಾಲ್ಕೋಡು ಪ್ರದೇಶ
Follow us on

ಕಾರವಾರ, ಜನವರಿ 28: ಉತ್ತರಕನ್ನಡ ಜಿಲ್ಲೆಯ ಸಾಲ್ಕೋಡು ಪಂಚಾಯಿತಿ ವ್ಯಾಪ್ತಿಯ ದಟ್ಟಾರಣ್ಯದ ಅಂಚಿನಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳಿವೆ. ಪ್ರತಿಯೊಬ್ಬರೂ ಮನೆಯಲ್ಲಿ ಐದಾರು ಹಸುಗಳನ್ನು ಸಾಕಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಕಾಡಲ್ಲಿ ಮೇಯಲು ಬಿಡುತ್ತಾರೆ. ಆದರೆ ಕಳೆದವಾರ ಹೀಗೆ ಕಾಡಿನ ಬಿಟ್ಟಿದ್ದ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಮಾಂಸವನ್ನು ದುರುಳರು ಕದ್ದೊಯ್ದಿದ್ದರು. ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದೆ. ಕಳೆದ 1 ವರ್ಷದಲ್ಲಿ ಸಾಲ್ಕೋಡ ಸುತ್ತಮುತ್ತ 100ಕ್ಕೂ ಹೆಚ್ಚು ಹಸುಗಳು ನಿಗೂಢವಾಗಿ ನಾಪತ್ತೆ ಆಗಿದ್ದು, ಗೋಕಳ್ಳರು ಇದರ ಹಿಂದಿರುವ ಸಂಶಯ ಮೂಡಿದೆ.

4 ಪ್ರಕರಣ ದಾಖಲು: ಮೂವರ ಬಂಧನ

ಮತ್ತೊಂದು ವಿಷ್ಯವೆಂದರೆ, ಇಲ್ಲಿ ಚಿರತೆ ಕಾಟವೂ ಇದೆ. ಇಷ್ಟು ದಿನ ಚಿರತೆಯೇ ಹಸುಗಳನ್ನು ಬೇಟೆ ಆಡುತ್ತಿದೆ ಎಂದು ಜನರು ಭಾವಿಸಿದ್ದರು. ಹೀಗಾಗಿ ಸಂಜೆ 5 ಗಂಟೆ ಒಳಗೆ ಹಸುಗಳನ್ನು ಮನೆಯತ್ತ ಹೊಡೆದುಕೊಂಡು ಬರುತ್ತಿದ್ದರು. ಆದರೆ ಈಗ, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ ಪ್ರಕರಣದ ಬಳಿಕ ಕಣ್ಮರೆ ಆಗಿರುವ ಹಸುಗಳ ಹಿಂದೆ ಗೋಕಳ್ಳರ ಕೈವಾಡ ಇರುವ ಅನುಮಾನ ಉಂಟಾಗಿದೆ. ಹೀಗಾಗಿ 2 ವಾರಗಳಲ್ಲಿ ನಾಪತ್ತೆ ಆಗಿರುವ ಹಸುಗಳ ಮಾಲೀಕರು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ 4 ಕೇಸ್​ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡು ವಾರಗಳಲ್ಲಿ 5 ಹೆಚ್ಚು ಹತ್ಯೆ: ಕದ್ದು ಮಾಂಸ ಮಾರಾಟ

ಎರಡು ವಾರಗಳಲ್ಲಿ 5 ಹೆಚ್ಚು ಹಸುಗಳನ್ನು ಮಾಂಸಕ್ಕಾಗಿ ಕದ್ದು ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಉತ್ತರಕನ್ನಡ ಜಿಲ್ಲೆಯ ಸಾಲ್ಕೋಡು ಪ್ರದೇಶ

ಗೋಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ವಿಷ್ಯ ಬಯಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ ನೂರಾರು ಹಸುಗಳ ವಧೆ ನಡೆದಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರ ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ: ಹೊನ್ನಾವರ ಗೋಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು

ಏತನ್ಮಧ್ಯೆ, ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣದ ಆರೋಪಿ ಸ್ಥಳ ಮಹಜರಿನ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಿದ್ದರಿಂದ ಆತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆಯೂ ಭಾನುವಾರ ಸಂಜೆ ನಡೆದಿತ್ತು. ಗರ್ಭ ಧರಿಸಿದ್ದ ಹಸುವನ್ನು ಕೊಲೆ ಮಾಡಿದ್ದ ಆರೋಪಿಗಳು, ಮಾಂಸವನ್ನು 7500 ರೂಪಾಯಿಗೆ ಮಾರಿದ್ದರು ಎನ್ನಲಾಗಿದೆ. ಆ ನಂತರ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆರೋಪಿ ಪಾರ್ಟಿ ಮಾಡಿದ್ದ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ