ಹೊನ್ನಾವರ ಗೋಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧನ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು
ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಕ್ರೌರ್ಯ ಮೆರೆದಿದ್ದರು. ಹೊಟ್ಟೆಯಲ್ಲಿದ್ದ ಭ್ರೂಣ ಹೊರಗೆಸೆದು ಹಸುವಿನ ಮಾಂಸ ಕದ್ದೊಯ್ದಿದ್ದರು. ರಾಕ್ಷಸೀ ಕೃತ್ಯ ಮೆರೆದು, ಪೊಲೀಸರ ಮೇಲೆಯೇ ಕೈಇಟ್ಟವನ ಕಾಲೇ ಈಗ ಪಂಕ್ಚರ್ ಆಗಿದೆ. ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ವಿವರಗಳಿಗೆ ಮುಂದೆ ಓದಿ.
ಕಾರವಾರ, ಜನವರಿ 27: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಹಸುವಿನ ತಲೆಯನ್ನು ಕತ್ತರಿಸಿ ಎಸೆದಿದ್ದ ದುಷ್ಕರ್ಮಿಗಳು, ದೇಹದ ಮಾಂಸವನ್ನು ಭಟ್ಕಳದಲ್ಲಿ ನಡೆದಿದ್ದ ಮದುವೆ ಊಟಕ್ಕೆ ನೀಡಿದ್ದರು. ಗೋಹತ್ಯೆಯ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು 400ಕ್ಕೂ ಅಧಿಕ ಜನರನ್ನೂ ವಿಚಾರಣೆ ನಡೆಸಿದ್ದರು. ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್, ಕಾಸರಗೋಡಿನ ಫೈಝನ್ನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದರಿಂದ, ಆರೋಪಿ ಫೈಝನ್ನನ್ನು ಸ್ಥಳ ಮಹಜರುಗೆ ಕರೆದೊಯ್ದಿದ್ದರು.
ಕತ್ತಿಯಿಂದಲೇ ಪೊಲೀಸರ ಮೇಲೆ ದಾಳಿ: ಬಿತ್ತು ಕಾಲಿಗೆ ಗುಂಡೇಟು
ಹಸುವನ್ನು ಕತ್ತರಿಸಿ ಎಸೆದಿದ್ದ ಜಾಗದಲ್ಲಿ ಮಹಜರು ನಡೆಸುವಾಗ, ಆರೋಪಿ ಫೈಝನ್ ಗೋಹತ್ಯೆಗೆ ಬಳಸಿದ್ದ ಕತ್ತಿಯಿಂದಲೇ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ನಾಲ್ವರು ಪೊಲೀಸರಿಗೆ ಗಾಯವಾಗಿದ್ದು, ಪ್ರಾಣರಕ್ಷಣೆಗಾಗಿ ಪಿಸ್ತೂಲ್ನಿಂದ ಸಿಪಿಐ ಸಿದ್ದರಾಮೇಶ್ ಆರೋಪಿ ಫೈಝನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಗರ್ಭ ಧರಿಸಿದ್ದ ಹಸುವನ್ನೂ ಕತ್ತರಿಸಿದ್ದ ಪಾಪಿಗಳು, ಗೋ ಮಾಂಸವನ್ನು ಕೇವಲ 7500 ರೂಪಾಯಿಗೆ ಮಾರಿದ್ದಾರಂತೆ. ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಫೈಝನ್ ಪಾರ್ಟಿ ಮಾಡಿದ್ದ ಎನ್ನಲಾಗಿದೆ. ಇನ್ನು, ಪ್ರಕರಣದ ಆರೋಪಿಗಳಾಗಿರುವ ಹೊನ್ನಾವರದ ವಾಸಿಮ್ ಹಾಗೂ ಮುಜಾಮಿಲ್ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಹಿಂದೂ ಸಮಾಜದ ಇಬ್ಬರು ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಬಂಧನಕ್ಕೆ 6 ತಂಡಗಳನ್ನು ರಚಿಸಲಾಗಿದ್ದು ಪೊಲೀಸರು ಬಲೆ ಬೀಸಿದ್ದಾರೆ. ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭ ಧರಿಸಿದ್ದ ಹಸು ಕಡಿದ ಕೇಸ್: ಗೋಹಂತಕರ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ
ಹಸುವನ್ನು ರುಂಡ ಚೆಂಡಾಡಿ ಮಾಂಸ ಕದ್ದೊಯ್ದಿದ್ದಲ್ಲದೆ ಪೊಲೀಸರ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿ ಪರಾರಿಯಾಗಲು ಮುಂದಾದ ಆರೋಪಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಉಳಿದ ಆರೋಪಿಗಳಿಗೂ ಬಲೆ ಬೀಸಲಾಗಿದೆ. ಕೃತ್ಯದಲ್ಲಿ ಇನ್ಯಾರ ಕೈವಾಡ ಇದೆ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ