ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಕೋರನನ್ನೇ ಕಿಡ್ನಾಪ್! 1 ಲಕ್ಷಕ್ಕೆ ತಿಂಗಳಿಗೆ 30 ಸಾವಿರ ರೂ. ಬಡ್ಡಿ ಪಡೆಯುತ್ತಿದ್ದ ಆಸಾಮಿ

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಯ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಇಂಥ ಸಂದರ್ಭದಲ್ಲೇ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆ ಮಾಡಿಸುತ್ತಿದ್ದವನನ್ನೇ ಅಪಹರಿಸಿ 32 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ಸದ್ಯ ಆರೋಪಿಗಳನ್ನು ಬಂದಿಸಲಾಗಿದ್ದು, ಮೀಟರ್ ಬಡ್ಡಿ ದಂಧೆಯ ಹಿಂದಿನ ಅಸಲಿ ಕಥೆ ಬಯಲಾಗಿದೆ. ವಿವರಗಳಿಗೆ ಮುಂದೆ ಓದಿ.

ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಕೋರನನ್ನೇ ಕಿಡ್ನಾಪ್! 1 ಲಕ್ಷಕ್ಕೆ ತಿಂಗಳಿಗೆ 30 ಸಾವಿರ ರೂ. ಬಡ್ಡಿ ಪಡೆಯುತ್ತಿದ್ದ ಆಸಾಮಿ
ಮುಂಡಗೋಡ ಪೊಲೀಸ್ ಠಾಣೆ
Edited By:

Updated on: Jan 29, 2025 | 10:31 AM

ಕಾರವಾರ, ಜನವರಿ 29: ಸರಳವಾಗಿ ಸಾಲ ಸಿಗುತ್ತದೆ ಎಂಬ ಆಶಯದಲ್ಲಿ, ಲಕ್ಷ ಲಕ್ಷ ರೂಪಾಯಿ ಹಣ ಸಾಲ ಪಡೆದು ಸಾಲದ ಸುಳಿಗೆ ಸಿಕ್ಕು ನಿತ್ಯ ಒದ್ದಾಡುತ್ತಿರುವವರ ರೋದನೆ ಒಂದು ಕಡೆ. ಇನ್ನೊಂದು ಕಡೆ ತನಗೆ ಬೇಕಾದಷ್ಟು ಸಾಲ ಕೊಡಲಿಲ್ಲ ಎಂದು ಸಾಲ ಕೊಡುವನನ್ನೇ ಅಪಹರಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಜನವರಿ 9 ರ ರಾತ್ರಿ 10 ಗಂಟೆ ಸುಮಾರಿಗೆ ಮನೆ ಕಡೆ ಹೊರಟಿದ್ದ ಮುಂಡಗೋಡ ನಿವಾಸಿ ಜಮೀರ್ ದರ್ಗಾವಲೆಯನ್ನು ಆತನ ಬೈಕ್​ಗೆ ಗುದ್ದಿ ಬಳಿಕ ಸಿನೀಮಯ ರೀತಿಯಲ್ಲಿ ಕಾರಿನಲ್ಲಿ ಹೊತ್ತೊಯ್ದಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆ ವೇಳೆ ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ ಸುಮಾರು 32 ಲಕ್ಷ ರೂಪಾಯಿ ಹಣ ಕೊಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಹೆದರಿದ ಕುಟುಂಬಸ್ಥರು ಕೂಡಲೇ 18 ಲಕ್ಷ ರೂಪಾಯಿ ಹಣವನ್ನು ಅವರು ಕೇಳಿದ ಸ್ಥಳಕ್ಕೆ ತಲುಪಿಸಿದ್ದರು. ಬಳಿಕ ಜಮೀರ್​​ನನ್ನು ಹಾವೇರಿಯಲ್ಲಿ ಬಿಟ್ಟು ಪರಾರಿ ಆಗಿದ್ದ ಗ್ಯಾಂಗ್​​ನ ನಾಲ್ಕು ತಂಡವನ್ನು ಹಂತ ಹಂತವಾಗಿ ಪೊಲೀಸರು ಮಟ್ಟ ಹಾಕಿದ್ದಾರೆ. ಈವರೆಗೆ ಒಟ್ಟು ಹದಿಮೂರು ಜನರನ್ನು ಬಂಧಿಸಿದ್ದಾರೆ.

ಮುಂಬೈಗೆ ಪರಾರಿಯಾಗಿದ್ದ ಕಿಡ್ನಾಪರ್ಸ್

ಪ್ರಮುಖ ಕಿಂಗ್ ಪಿನ್ ಕಳೆದ ಇಪ್ಪತ್ತು ದಿನಗಳಿಂದ ಮುಂಬೈನಲ್ಲಿ ತಲೆ ಮರಿಸಿಕೊಂಡಿದ್ದ ಎಂಬುದು ಪೊಲೀಸರ ಅರಿವಿಗೆ ಬಂದಿತ್ತು. ಬಳಿಕ ಮುಂಬೈಗೆ ಹೋಗಿದ್ದ ಮುಂಡಗೋಡ ಪಿಎಸ್​ಐ ಪರಶುರಾಮ್, ಪಿಸಿ ಅನ್ವರ್ ಖಾನ್ ಹಾಗೂ ಕೊಟ್ರೇಶ್ ಒಂದೆರಡು ವಾರಗಳ ಕಾಲ ನಿರಂತರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ಹೊರಬಂತು ಅಸಲಿ ಸತ್ಯ

ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಭಯಾನಕ ಸತ್ಯಗಳು ಹೊರ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿಯಾಗಿರುವ ಜಮೀರ್ ದರ್ಗಾವಲೆ ಕಳೆದ ಮೂರು ವರ್ಷಗಳಿಂದ ಮರಳು ದಂಧೆಯ ಜೊತೆಗೆ ಮೀಟರ್ ಬಡ್ಡಿ ದಂಧೆಯ ವ್ಯವಹಾರ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಕೊಟ್ಯಂತರ ರೂಪಾಯಿ ಹಣ ಸಂಪಾದಿಸಿದ್ದ. ಹುಬ್ಬಳ್ಳಿ, ಹಾವೇರಿ ಹಾಗೂ ಮುಂಡಗೋಡ ವ್ಯಾಪ್ತಿಯಲ್ಲಿ ಯಾರಾದರೂ ಕೊಲೆ, ಸುಲಿಗೆ ಕೇಸ್​ನಲ್ಲಿ ಜೈಲಿಗೆ ಹೋದ್ರೆ ಅವರಿಗೆ ಆರ್ಥಿಕ ಸಹಾಯ ಮಾಡಿ ಬಿಡಿಸಿಕೊಂಡು ಬರುತ್ತಿದ್ದ. ಅವರನ್ನ ತನ್ನ ಜೊತೆ ಇಟ್ಕೊಂಡು ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

1 ಲಕ್ಷ ರೂ. ಸಾಲಕ್ಕೆ ತಿಂಗಳಿಗೆ 30 ಸಾವಿರ ರೂ, ಬಡ್ಡಿ!

ಜಮೀರ್ ದರ್ಗಾವಲೆ 1 ಲಕ್ಷ ರೂ. ಸಾಲ ಕೊಟ್ಟರೆ ಅದಕ್ಕೆ ತಿಂಗಳಿಗೆ 30,000 ರೂಪಾಯಿ ಬಡ್ಡಿ ಕಟ್ಟಬೇಕಿತ್ತು. ಒಂದು ವೇಳೆ ಅಸಲು ಕಟ್ಟಲು ಹೋದರೆ ಅದನ್ನು ಸ್ವಿಕರಿಸದೆ, ಕೇವಲ ಬಡ್ಡಿ ಮಾತ್ರ ತಿಂಗಳಿಗೆ ಕೊಡುವಂತೆ ಅವಾಜ್ ಹಾಕಿಸುತ್ತಿದ್ದ. 30 ಪ್ರತಿಶತ ಬಡ್ಡಿಯಲ್ಲಿ 15 ಪ್ರತಿಶತ ತಾನು ಪಡೆದು ಇನ್ನುಳಿದ 15 ಪ್ರತಿಶತ ಹಣವನ್ನು ಬಡ್ಡಿ ವಸೂಲಿ ಮಾಡಿದ ಹುಡುಗರಿಗೆ ಕೊಡುತ್ತಿದ್ದ ಎನ್ನಲಾಗಿದೆ. ಸುಮಾರು 150 ಕ್ಕೂ ಹೆಚ್ಚು ಹುಡುಗರ ಸಹಾಯದಿಂದ ಈತ ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಸಾಲ ನೀಡುವಾಗ ಖಾಲಿ ಚೆಕ್ ಪಡಯುವ ಜಮೀರ್

ಜಮೀರ್ ದರ್ಗಾವಲೆ ಸಾಲ ನೀಡುವಾಗ ಖಾಲಿ ಚೆಕ್ ಪಡೆಯುತ್ತಾನೆ. ಅಲ್ಲದೆ ದೊಡ್ಡ ಹುಡುಗರ ಗ್ಯಾಂಗ್ ಈತನ ಜೊತೆಗೆ ಇರುವುದರಿಂದ ಯಾರೂ ಕೂಡ ಈತನ ವಿರುದ್ದ ದೂರು ಕೊಡಲು ಕೂಡ ಹೋಗುತ್ತಿರಲಿಲ್ಲ. ಈ ವಿಷಯ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ಸಭೆ ನಡೆಸಿದ ಉತ್ತರ ಕನ್ನಡ ಎಸ್​ಪಿ ಎಂ.ನಾರಾಯಣ ಸ್ಥಳಿಯರಿಂದ ಖಚಿತ ಮಾಹಿತಿ ಪಡೆದು, ಆತನ ಆಪ್ತ ನವಲೆ ಎಂಬುವವನ ಮನೆ ಮೇಲೆ ದಾಳಿ ಮಾಡಿದಾಗ ಸುಮಾರು 250 ಖಾಲಿ ಚೆಕ್ ಆತನ ಮನೆಯಲ್ಲಿ ಪತ್ತೆ ಆಗಿದೆ.

ಇದನ್ನೂ ಓದಿ: ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ

ಜಮೀರ್ ದರ್ಗಾವಾಲೆ ಜೊತೆಗೆ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾನೇ ಆತನನ್ನು ಅಪಹರಣ ಮಾಡಿದ್ದ! ಖ್ವಾಜಾಗೆ ಸಾಲ ಬೇಕಿತ್ತು. ಆದರೆ ಸಾಲ ಕೊಡಲು ಜಮೀರ್ ಒಪ್ಪಿರಲಿಲ್ಲ. ತನಗೆ ಹಣ ಕೊಟ್ಟಿಲ್ಲ ಎಂಬ ಕೋಪದಲ್ಲಿದ್ದ ಖ್ವಾಜಾ ಹಣಕ್ಕಾಗಿ ಏನಾದರೂ ಮಾಡಬೇಕೆಂದುಕೊಂಡಿದ್ದ. ಜಮೀರ್ ಕಳೆದ ಎರಡು ವರ್ಷಗಳಿಂದ ಕೇವಲ ಮೀಟರ್ ಬಡ್ಡಿ ದಂಧೆಯಲ್ಲಿ ಕೊಟ್ಯಂತರ ರೂಪಾಯಿ ಹಣ ಮಾಡಿರುವುದು ಖ್ವಾಜಾ ಹಾಗೂ ಆತನ ಸ್ನೇಹಿತರಿಗೆ ಗೊತ್ತಿತ್ತು. ಹಾಗಾಗಿ ಆತನನ್ನು ಅಪಹರಿಸಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ