ಎಸ್​ಟಿ ನಿಗಮದ ಹಗರಣ: ಡಿಕೆಶಿ ಸಮ್ಮುಖದಲ್ಲೇ ಸಿಎಂಗೆ ರಾಜೀನಾಮೆ ಪತ್ರ ನೀಡಿದ ನಾಗೇಂದ್ರ

|

Updated on: Jun 06, 2024 | 9:21 PM

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಒಂದು ವಿಕೆಟ್ ಪತನವಾಗಿದೆ. ನಾಗೇಂದ್ರ ಅವರು ಕೊನೆಗೂ ಅಧಿಕೃತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಖುದ್ದು ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.

ಎಸ್​ಟಿ ನಿಗಮದ ಹಗರಣ:  ಡಿಕೆಶಿ ಸಮ್ಮುಖದಲ್ಲೇ ಸಿಎಂಗೆ ರಾಜೀನಾಮೆ ಪತ್ರ ನೀಡಿದ ನಾಗೇಂದ್ರ
Follow us on

ಬೆಂಗಳೂರು, (ಜೂನ್ 06): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಭ್ರಷ್ಟಾಚಾರ  ಆರೋಪಗಳು ಕೇಳಿಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಅಧಿಕೃತವಾಗಿ ರಾಜೀನಾಮೆ ನೀಡಿದರು. ಇಂದು (ಜೂನ್ 06) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್‌ ಪತನವಾದಂತಾಗಿದೆ.

ನಾಗೇಂದ್ರ ಅವರು ಡಿಕೆ ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಿದರು. ಈ ವೇಳೆ ಸಚಿವ ಜಮೀರ್ ಅಹಮದ್ ಖಾನ್ ಸಹ ಉಪಸ್ಥಿತರಿದ್ದರು. ಇನ್ನು ನಾಗೇಂದ್ರ ಅವರು ರಾಜೀನಾಮೆ ಪತ್ರದಲ್ಲಿ ಒಂದೇ ಸಾಲು ಬರೆದಿರುವುದು ಕಂಡುಬಂದಿದ್ದು, ನನ್ನ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಎಸ್​ಟಿ ನಿಗಮದ ಹಗರಣ: ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ ನಾಗೇಂದ್ರ

ಈ ರಾಜೀನಾಮೆಗೂ ಮುನ್ನ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಗೇಂದ್ರ ಅವರು, ರಾಜೀನಾಮೆ ನೀಡುವುದು ನನ್ನ ಸ್ವ ನಿರ್ಧಾರವಾಗಿದೆ. ಇದಕ್ಕಾಗಿ ಯಾರೂ ಒತ್ತಡ ಹಾಕಿಲ್ಲ. ಆತ್ಮ ಸಾಕ್ಷಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ನಿರ್ದೋಷಿ. ಪ್ರಕರಣದಲ್ಲಿ ತನಿಖೆ ನಡೆದು ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ತಿಳಿಸಿದ್ದರು.

ಕಳೆದ ಹತ್ತು ದಿನಗಳಿಂದ ವಾಲ್ಮೀಕಿ ನಿಗಮ ಅಕ್ರಮದ (Valmiki Corporation Scam) ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಕೂಡ ನನ್ನ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.