AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ಹಗರಣ: ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ!

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆಯ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿರುವ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್​​​ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದು. ಇದೀಗ ಹೈಕೋರ್ಟ್​, ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ತಡೆ ನೀಡಿದೆ.

ವಾಲ್ಮೀಕಿ ಹಗರಣ: ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ!
ಹೈಕೋರ್ಟ್​
ರಮೇಶ್ ಬಿ. ಜವಳಗೇರಾ
|

Updated on:Jul 23, 2024 | 5:37 PM

Share

ಬೆಂಗಳೂರು, (ಜುಲೈ 23): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆ ವೇಳೆ ಅಧಿಕಾರಿಗೆ ಒತ್ತಡ ಹೇರಿದ ಆರೋಪದ ಮೇಲೆ ಇಡಿ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ಕೋರ್ಟ್​ ತಡೆ ನೀಡಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆಯ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿರುವ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್​​​ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದು. ಇದೀಗ ಹೈಕೋರ್ಟ್​, ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಇಸಿಐಆರ್ ದಾಖಲಿಸಿದ ನಂತರ ತನಿಖೆಯಾಗುತ್ತಿದೆ. ಪಿಎಂಎಲ್‌ಎ‌ ಕಾಯ್ದೆ ಪ್ರಕಾರವೇ ತನಿಖೆ ನಡೆಯುತ್ತಿದೆ. ಇಸಿಐಆರ್ ದಾಖಲಿಸಿದ ಬಳಿಕವೇ ಸಮನ್ಸ್ ನೀಡಲಾಗಿದೆ. ಇದೆಲ್ಲವೂ ತಮ್ಮ ಕರ್ತವ್ಯದ ಭಾಗವಾಗಿಯೇ ಮಾಡಿದ್ದಾರೆ. ಹೀಗಾಗಿ ಎಫ್ಐಆರ್ ದಾಖಲಿಸಿದರೆ ಅದು ದುರುಪಯೋಗವಾಗಲಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.

ಮಾಜಿ ಸಚಿವ ಬಿ.ನಾಗೇಂದ್ರ ಒತ್ತಡದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಹಾಗೂ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್.ಬಿ ದೂರು ನೀಡಿದ್ದರು. ಸೋಮವಾರವಷ್ಟೇ (ಜುಲೈ 22ರಂದು) ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸರು, ಇಡಿ ಅಧಿಕಾರಿಗಳಾದ ಕಣ್ಣನ್ ಹಾಗೂ ಮಿತ್ತಲ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಈ ಅಧಿಕಾರಿಗಳು ಮಂಗಳವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು (ಜುಲೈ 23) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ತಡೆ ನೀಡಿ ಆದೇಶಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಇಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ಕಲ್ಲೇಶ್​ ವಾಲ್ಮೀಕಿ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ

ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಡಿ ತನ್ನ ಅರ್ಜಿಯಲ್ಲಿ ಹೇಳಿತ್ತು. ಯಾವುದೇ ಪ್ರಾಥಮಿಕ ವಿಚಾರಣೆಯಿಲ್ಲದೆ ಕರ್ನಾಟಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ ಇದಕ್ಕೆ ತಡೆ ನೀಡಬೇಕೆಂದು ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಈ ಅರ್ಜಿ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಕೋರ್ಟ್​ಗೆ ಮನವಿ ಮಾಡಿದ್ದರು.

ಇಡಿ ವಿರುದ್ಧ ಕಾಂಗ್ರೆಸ್​​ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಮಾಜಿ ಸಚಿವ ನಾಗೇಂದ್ರ ಹೆಸರೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು (ಜುಲೈ 23) ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಎಂದು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಾಲ್ಮೀಕಿ ಹಗರಣ: ಅಧಿಕಾರಿಗೆ ಒತ್ತಡ ಹೇರಿರುವ ಆರೋಪ, ಇಬ್ಬರು ಇಡಿ ಆಫೀಸರ್​ ವಿರುದ್ಧ ಎಫ್​ಐಆರ್​

ಇನ್ನು ಇಡಿ ವಿಚಾರವಾಗಿ ಸದನದಲ್ಲೂ ಪ್ರಸ್ತಾಪವಾಗಿದ್ದು, ಈ ಸಂಬಂಧ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರವೇ ನಡೆದಿದೆ. ಈ  ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಡಳಿತರೂಢ ಕಾಂಗ್ರೆಸ್​ ಸ್ಪೀಕರ್​ಗೆ ಮನವಿ ಮಾಡಿದ್ದರೆ, ಇದನ್ನು ಚರ್ಚೆಗೆ ಕೊಡಲು ಬರುವುದಿಲ್ಲ. ಇದರಿಂದ ಜನರಿಗೆ ಏನು ಲಾಭವಿಲ್ಲ. ಹೀಗಾಗಿ ಇದನ್ನು ಚರ್ಚೆಗೆ ಅವಕಾಶ ನೀಡಬಾರದು ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿದ್ದಾರೆ. ಇದರಿಂದ ಕೆಲ ಕಾಲ ಗಲಾಟೆಗೆ ಕಾರಣವಾಯ್ತು.​

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನಾಗೇಂದ್ರ, ಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇಳಿದ್ದಾರೆ. ಅಲ್ಲದೇ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ಅವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಎನ್​​ಸಿಆರ್​ (NCR) ವಿಲ್ಸನ್ ಗಾರ್ಡನ್ ಠಾಣೆಗೊಂಡು ಎಫ್​ಐಆರ್​ ದಾಖಲಾಗಿತ್ತು.

ಇಡಿ ವಿರುದ್ಧದ ದೂರಿನಲ್ಲೇನಿದೆ?

ಎಂ.ಜಿ.ರೋಡ್ ಬ್ಯಾಂಕ್​ ಖಾತೆಗೆ ಅನುದಾನ ಜಮಾಮಾಡಲು ನಾಗೇಂದ್ರ, ಎಫ್​ಡಿ ಇಲಾಖೆಯಿಂದ ಸೂಚನೆ ಇತ್ತೆಂದು ಒಪ್ಪಿಕೊಂಡ್ರೆ ಮಾತ್ರ ನಿನ್ನ ಬಿಡುತ್ತೇವೆ. ನಂತರ ಮಿತ್ತಲ್ ಎಂಬ ಅಧಿಕಾರಿ ಬಂದು ನನಗೆ ಬೈದಿದ್ದರು. ನೀನೊಬ್ಬ ಅಪರಾಧಿ, ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ. ಇಡಿ ಬಗ್ಗೆ ನಿನಗೆ ಗೊತ್ತಿಲ, 2-3 ವರ್ಷ ನಿನಗೆ ಬೆಲ್ ಸಿಗಲ್ಲ. ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ, ಪ್ರಯೋಜನಕ್ಕೆ ಬರಲ್ಲ. ನಿನಗೆ ಇಡಿ ಸಹಾಯ ಮಾಡಬೇಕೆಂದ್ರೆ ಬರೆದು ಕೊಡಬೇಕು. ಸಿಎಂ, ನಾಗೇಂದ್ರ ನಿರ್ದೇಶನದಂತೆ ಎಂ.ಜಿ.ರೋಡ್ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ ಎಂದು ಬರೆದುಕೊಡಲು ಒತ್ತಡ ಹೇರಿದ್ದಾರೆಂದು ಕಲ್ಲೇಶ್ ದೂರಿನಲ್ಲಿ ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:11 pm, Tue, 23 July 24