
ಬಳ್ಳಾರಿ, ಜೂನ್ 11: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆಗೆ (Illegal Money Transfer) ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ED) ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಇಡಿ ಅಧಿಕಾರಿಗಳು ಈ ಬಾರಿ ಸಂಸದರನ್ನು ಒಳಗೊಂಡಂತೆ ಕಾಂಗ್ರೆಸ್‌ನ ಬಳ್ಳಾರಿ ಜಿಲ್ಲೆಯ ನಾಲ್ಕು ಶಾಸಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಗರಣ ಸಂಬಂಧ ಇಡಿ ಈ ಹಿಂದೆ ಕೂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಇಂದು (ಜೂ.11) ಮತ್ತೆ ದಾಳಿ ನಡೆದಿದೆ ಎನ್ನಲಾಗಿದೆ.
ಇಡಿ ಅಧಿಕಾರಿಗಳು ಈ ಹಿಂದೆ ವಶಪಡಿಸಿಕೊಂಡಿದ್ದ ದಾಖಲೆಗಳಲ್ಲಿ ನಿಗಮದ ಹಣ ಅಕ್ರಮವಾಗಿ ಹೇಗೆ ವರ್ಗಾವಣೆಯಾಗಿದೆ ಎಂಬುವುದು ಬಹಿರಂಗವಾಗಿದೆ. ಯಾರ್ಯಾರ ಮೂಲಕ ಯಾವ ದಿನಾಂಕದಂದು ಹಣ ವಹಿವಾಟು ಆಗಿತ್ತು? ಯಾರ್ಯಾರಿಗೆ ಎಷ್ಟು ಹಣ ನೀಡಲಾಗಿತ್ತು? ಎಂಬುವುದು ಇಡಿ ವಶಪಡಿಸಿಕೊಂಡಿರುವ ದಾಖಲೆಯಲ್ಲಿ ಅಡಕವಾಗಿದೆ.
ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾಯಿಸಿಕೊಂಡ ಹಣದಲ್ಲಿ 21 ಕೋಟಿಯಷ್ಟು ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯ ನಾಲ್ಕು ಕ್ಷೇತ್ರಕ್ಕೆ 21 ಕೋಟಿ ರೂಪಾಯಿಷ್ಟು ಹಣದ ಹೊಳೆ ಹರಿದಿತ್ತು.
ಹಗರಣದ ಆರೋಪಿ ಸತ್ಯನಾರಾಯಣ ವರ್ಮಾ ತನ್ನ ಬಳಿ ಇದ್ದ 4.2 ಕೋಟಿ ರೂ. ಹಣದಲ್ಲಿ 1.5 ಕೋಟಿಯಷ್ಟು ಸಾಲ ತೀರಿಸಿದ್ದಾನೆ. 1.2 ಕೋಟಿ ರೂ. ಬೆಲೆ ಬಾಳುವ ಬೆಂಝ್ ಕಾರ್ ಖರೀದಿಸಿದ್ದಾನೆ. ಉಳಿದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿದ್ದಾನೆ ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ, ಮೂರು ಕಂತುಗಳಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭನಿಗೆ ಕೊಟ್ಟಿದ್ದಾನೆ.
ಆರೋಪಿ ನೆಕ್ಕಂಟಿ ನಾಗರಾಜ್ ಐ ಫೋನ್ನಲ್ಲಿ 20 ರೂ. ನೋಟಿನ ಫೋಟೋ ಪತ್ತೆಯಾಗಿದೆ. ಹವಾಲಾ ವ್ಯವಹಾರಕ್ಕೆ ಈ 20 ರೂ. ನೋಟ್ ಬಳಸಲಾಗಿದೆ. ನಾಗರಾಜ ನೆಕ್ಕಂಟಿ ತನ್ನ ಸಹೋದರ ನೆಕ್ಕಂಟಿ ರಮೇಶ್ಗೆ 20 ರೂ. ನೋಟ್ ಕೊಟ್ಟಿದ್ದನು.ಸತ್ಯನಾರಾಯಣ ವರ್ಮಾಗೆ ಈ ನೋಟ್ ಕೊಟ್ಟರೆ 1.5 ಕೋಟಿ ಹಣ ಕೊಡುತ್ತಾನೆ ಅಂತ ನೆಕ್ಕಂಟಿ ನಾಗರಾಜ್ ಹೇಳಿದ್ದನು. ಅದರಂತೆ, ನೆಕ್ಕಂಟಿ ರಮೇಶ್ 300042317 ನಂಬರ್ನ 20 ರೂ. ಕೊಟ್ಟು 1.5 ಕೋಟಿ ಹಣ ಪಡೆದಿದ್ದನು. ಈ ಎಲ್ಲ ಹಣದ ವಹಿವಾಟುಗಳು ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರಗೆ ಗೊತ್ತಿತ್ತು. ಮತ್ತು ಬಿ. ನಾಗೇಂದ್ರ ಸೂಚನೆ ಮೇರೆಗೆ ಇದೆಲ್ಲವೂ ನಡೆದಿತ್ತು ಎಂದು ಗೊತ್ತಾಗಿದೆ.
21 ಕೋಟಿ ದುಡ್ಡಿನ ಫೋಟೋವನ್ನು ಇಡಿ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ನಾಗೇಂದ್ರ ಪಿ ಎ ಗೋವರ್ಧನ ಮೂಲಕ ಹವಾಲ ಹಣ ನೀಡಲಾಗಿದೆ. ಹವಾಲಕ್ಕೆ ಬಳಸಿದ್ದ 20 ರೂಪಾಯಿ ನೋಟಿನ ಫೋಟೋ ಮತ್ತು ಹವಾಲಾ ಮೂಲಕ ಪಡೆದ ಕಂತೆ ಕಂತೆ ಹಣದ ಫೋಟೋ ಇಡಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಂಸದ, ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರ: ಸಿಎಂ ಸೇರಿ ಯಾರೆಲ್ಲಾ ಏನಂದ್ರು?
ಕಾಂಗ್ರೆಸ್ ಶಾಸಕರು, ಸಂಸದರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಸಂಸದ ಇ.ತುಕಾರಾಂ, ಶಾಸಕಿ ಅನ್ನಪೂರ್ಣ ಅವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಶಾಸಕರಾದ ಭರತ್ ರೆಡ್ಡಿ, ಜೆ.ಎನ್.ಗಣೇಶ್ ಮೊಬೈಲ್ ಸಹ ವಶಕ್ಕೆ ಪಡೆದು, ಪರಿಶೀಲಿಸುತ್ತಿದ್ದಾರೆ.
ವರದಿ: ವಿಕಾಸ್
Published On - 3:10 pm, Wed, 11 June 25