ಮೈಸೂರು ರಾಜಮಾತೆಗೂ ವಿಕ್ಟೋರಿಯಾಗೂ ಇದೆ ನಂಟು! ಅರಮನೆ ಅಗ್ನಿದುರಂತ ಹುಟ್ಟುಹಾಕಿದ ಆಸ್ಪತ್ರೆಯ ರೋಚಕ ಇತಿಹಾಸ ಇಲ್ಲಿದೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಬಗ್ಗೆ ಬಜೆಟ್​ನಲ್ಲಿ ಘೋಷಣೆಯಾಗಿದೆ. ಅದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆದರೆ, ಈ ಆಸ್ಪತ್ರೆಗೆ ರೋಚಕ ಇತಿಹಾಸವಿದೆ ಎಂದರೆ ನೀವು ನಂಬಲೇಬೇಕು. ಮೈಸೂರು ರಾಜಮನೆತನದ ಕಾರ್ಯಕ್ರಮದಲ್ಲಿ ಸಂಭವಿಸಿದ ಒಂದು ಮಹಾ ಅಗ್ನಿ ದುರಂತ ಈ ಆಸ್ಪತ್ರೆಯ ಹುಟ್ಟಿಗೆ ಕಾರಣ ಆಗಿದ್ಹೇಗೆ? ಅಷ್ಟಕ್ಕೂ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರು ಬಂದಿದ್ಹೇಗೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.

ಮೈಸೂರು ರಾಜಮಾತೆಗೂ ವಿಕ್ಟೋರಿಯಾಗೂ ಇದೆ ನಂಟು! ಅರಮನೆ ಅಗ್ನಿದುರಂತ ಹುಟ್ಟುಹಾಕಿದ ಆಸ್ಪತ್ರೆಯ ರೋಚಕ ಇತಿಹಾಸ ಇಲ್ಲಿದೆ
ವಿಕ್ಟೋರಿಯಾ ಆಸ್ಪತ್ರೆ
Image Credit source: TV9 Network
Edited By:

Updated on: Mar 15, 2026 | 11:55 AM

ಮೈಸೂರು, ಬೆಂಗಳೂರು, ಮಾರ್ಚ್ 15: ವಿವಾದಿತ ನಿರ್ಧಾರಗಳನ್ನು ತೆಗೆದುಕೊಂಡು ನಂತರ ಕಣ್ಣೊರೆಸುವ ನಾಟಕವಾಡುವುದು ಸರ್ಕಾರ ಮಟ್ಟದಲ್ಲಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಈಗ ಮತ್ತೊಂದು ಹೊಸ ಸೇರ್ಪಡೆ ಕರ್ನಾಟಕ ರಾಜಧಾನಿ ಬೆಂಗಳೂರಿನ (Bangalore) ಬಡ ಮಧ್ಯಮ ವರ್ಗದವರ ಪಾಲಿನ ಕಾಮಧೇನುವಾಗಿರುವ ವಿಕ್ಟೋರಿಯಾ ಸರ್ಕಾರಿ (Victoria Hospital) ಆಸ್ಪತ್ರೆ. ಹೌದು, ಶತಮಾನಗಳ ಇತಿಹಾಸದ ಆಸ್ಪತ್ರೆ ಹೆಸರು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2026ರ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರು ಕರ್ನಾಟಕದ ಮಹಾನ್ ಸಮಾಜವಾದಿ ನಾಯಕರು. ದೀನ ದಲಿತರ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅಂತಹ ಮಹಾನ್ ನಾಯಕರ ಹೆಸರಿಡುವುದರ ಬಗ್ಗೆ ಯಾರ ತಕರಾರು ಸಹ ಇಲ್ಲ. ಆದರೆ ಜನರಲ್ಲಿ ಈಗ ಕೇಳಿಬರುತ್ತಿರುವ ಪ್ರಶ್ನೆ ಒಂದೇ, ಹೊಸ ಹೆಸರಿಗಾಗಿ ಹಳೆಯ ಇತಿಹಾಸವನ್ನೇ ಅಳಿಸಬೇಕೇ ? ಇದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ವಿಕ್ಟೋರಿಯಾ ಆಸ್ಪತ್ರೆಗೂ ಮೈಸೂರು ರಾಜಮನೆತನಕ್ಕೂ ನಂಟಿದೆ. ಅಷ್ಟೇ ಅಲ್ಲದೆ, ಒಂದು ಅಗ್ನಿದುರಂತವೇ ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣಕ್ಕೆ ಕಾರಣವಾಯಿತು ಎಂದರೆ ನಂಬಲೇಬೇಕು.

ವಿಕ್ಟೋರಿಯ ಆಸ್ಪತ್ರೆ ರೂವಾರಿ ಕೆಂಪನಂಜಮ್ಮಣ್ಣಿ

ಕೆಂಪನಂಜಮ್ಮಣ್ಣಿ ಮೈಸೂರು ರಾಜಮಾತೆ. ಪತಿಯನ್ನು ಕಳೆದುಕೊಂಡ ಬಳಿಕ ಅಪ್ರಾಪ್ತ ವಯಸ್ಸಿನ ಐವರು ಮಕ್ಕಳ ಪಾಲನೆ, ಪೋಷಣೆ ಜೊತೆಗೆ ರಾಜ್ಯಭಾರವನ್ನು ಹೊತ್ತು ಯಶಸ್ವಿಯಾಗಿ ಮುನ್ನಡೆಸಿದ ದಿಟ್ಟ ಮಹಿಳೆ. ಮಗನಿಗೆ ಪಟ್ಟಾಭಿಷೇಕ ಮಾಡುವವರೆಗೂ ನಿರಂತರವಾಗಿ ಮನೆವಾರ್ತೆ, ಆಡಳಿತಗಳನ್ನು ಒಟ್ಟಿಗೇ ನಿಭಾಯಿಸಿದ ರಾಜತಂತ್ರಜ್ಞೆ. ಮಕ್ಕಳ ಜೊತೆ ಜೊತೆಗೆ ರಾಜ್ಯದ ಜನತೆಯನ್ನೂ ಮಕ್ಕಳೆಂದು ಸಾಕಿ ಸಲುಹಿದ ಮಾತೆ. ಆಧುನಿಕ ಮೈಸೂರು ಚರಿತ್ರೆಯಲ್ಲಿ ವೈವಿಧ್ಯಮಯ ಅಧ್ಯಾಯ. ಪುತ್ರ ವಾತ್ಸಲ್ಯ ಮತ್ತು ಪ್ರಜಾವಾತ್ಸಲ್ಯವೆರಡೂ ಏಕಕಾಲಕ್ಕೆ ಮೇಲೈಸಿ ಸನ್ನಿಧಾನ ಪದಕ್ಕೆ ಗೌರವ ತಂದುಕೊಟ್ಟವರು. ಇದೇ ಕಾರಣಕ್ಕೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಎಂಬ ಹೆಸರಿಗಿಂತಲೂ ಎಲ್ಲರಿಗೂ ವಾಣಿ ವಿಲಾಸ ಸನ್ನಿಧಾನ ಎಂಬ ಹೆಸರು ಗೌರವಯುತವಾಗಿತ್ತು. 31ರ ಹರೆಯದ ಚಾಮರಾಜ ಒಡೆಯ‌ರ್ ಡಿಪ್ತಿರಿಯಾದಿಂದ ಮೃತಪಟ್ಟಾಗ, ಮಹಾರಾಣಿಗೆ ಕೇವಲ 26 ವರ್ಷ ವಯಸ್ಸು. ಅದು ದಿಢೀರ್ ಆಘಾತ. ಆದರೂ ಕುಗ್ಗದೆ ಜಗ್ಗದೆ ಬಗ್ಗದೆ ಸವಾಲುಗಳನ್ನು ಎದುರಿಸಿ. ಸಮಸ್ಯೆಗಳನ್ನು ಮೆಟ್ಟಿ ಯದುವಂಶವನ್ನು ಅಜರಾಮರವನ್ನಾಗಿಸಿದ ಮಹಾತಾಯಿ.

ವಿಕ್ಟೋರಿಯಾ ಆಸ್ಪತ್ರೆ…

ಬೆಂಗಳೂರಿನ ಹೃದಯಭಾಗದಲ್ಲಿ ನಿಂತಿರುವ ಒಂದು ದೊಡ್ಡ ಕಟ್ಟಡ. ಇದು ಕೇವಲ ಆಸ್ಪತ್ರೆಯಲ್ಲ. ಅದು ನೂರಾರು ವರ್ಷಗಳ ನೆನಪುಗಳನ್ನು ಹೊತ್ತ ಮನೆ. ಅದು ಸಾವಿರಾರು ಜೀವಗಳನ್ನು ಉಳಿಸಿದ ಪವಿತ್ರ ಸ್ಥಳ. ಅದುವೆ ವಿಕ್ಟೋರಿಯಾ ಆಸ್ಪತ್ರೆ. ಈ ಹೆಸರು ಇನ್ನು ನೆನಪು ಮಾತ್ರ. ವಿಕ್ಟೋರಿಯಾ ಹೆಸರು ಕೆಲವೇ ದಿನಗಳಲ್ಲಿ ಬದಲಾಗುತ್ತಿದೆ. ರಾಜ್ಯ ಸರ್ಕಾರ ವಿಕ್ಟೋರಿಯಾ ಹೆಸರು ಬದಲಾಯಿಸಲು ಎಲ್ಲಾ ತಯಾರಿ ನಡೆಸಿದೆ. ಈ ಆಸ್ಪತ್ರೆಯ ಹೆಸರನ್ನು ಬದಲಿಸುವುದು ಅಂದರೆ ಕೇವಲ ಒಂದು ಫಲಕ ಬದಲಿಸುವುದಲ್ಲ ಬದಲಿಗೆ ಒಂದು ಇತಿಹಾಸದ ಪುಟವನ್ನೇ ಮುಚ್ಚುವುದಾಗಿದೆ.

ಅರಮನೆಯ ಅಗ್ನಿದುರಂತ ಹುಟ್ಟಿಸಿದ ಮಹಾ ಸೇವೆ!

ಈ ವಿಕ್ಟೋರಿಯಾ ಆಸ್ಪತ್ರೆಯ ಹುಟ್ಟಿನ ಕಥನವೇ ಅದ್ಬುತ, ರೋಚಕ. ಅದು 1897ರ ಫೆಬ್ರವರಿ 28. ಮೈಸೂರು ಗಂಧದ ಅರಮನೆಯಲ್ಲಿ ಮದುವೆಯ ಸಂಭ್ರಮ. ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹದ ಸಂಭ್ರಮದಲ್ಲಿ ಅರಮನೆ ಕಂಗೊಳಿಸುತ್ತಿತ್ತು. ಸಂಗೀತ, ನಗು, ಸಂತೋಷ ಎಲ್ಲೆಡೆ ಹರಡಿತ್ತು. ಆದರೆ ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ವಿವಾಹ ಮಂಟಪದ ತೆರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು‌. ಕಣ್ಣು ಮುಚ್ಚುವಷ್ಟರಲ್ಲಿ ಬೆಂಕಿ ಅರಮನೆಯ ದೊಡ್ಡ ಭಾಗವನ್ನೇ ಆವರಿಸಿತು. ಎರಡು ದಿನಗಳ ಕಾಲ ಅಗ್ನಿ ತನ್ನ ರೌದ್ರ ತಾಂಡವವಾಡಿತು. ಸುಮಾರು 30 ಸಾವಿರ ಚದರ ಅಡಿ ಅರಮನೆ ಬೆಂಕಿಯಲ್ಲಿ ಬೆಂದು ಭಸ್ಮವಾಯಿತು. ಅಷ್ಟೊಂದು ಅಗ್ನಿ ಅನಾಹುತವಾದರೂ ಅದೃಷ್ಟವಶಾತ್ ಅಪಾರ ಸಾವು ನೋವು ಸಂಭವಿಸಲಿಲ್ಲ. ಆದರೆ ಅರಮನೆಯ ಒಂದು ಹಿರಿಯ ಜೀವ ತನ್ನ ಜೀವವನ್ನೇ ಬಲಿ ನೀಡಿ ಇತಿಹಾಸದ ಸೃಷ್ಟಿಗೆ ಕಾರಣವಾದಳು. ಆಕೆಯೇ ಅರಮನೆಯ ಪರಿಚಾರಿಕೆ ಹೊನ್ನವ್ವೆ. ಆಕೆ ಸಾಮಾನ್ಯ ಮಹಿಳೆ. ಆದರೆ ಆಕೆಯ ಹೃದಯ ಅಸಾಮಾನ್ಯ. ಯದುವಂಶದ ಬಗ್ಗೆ ಇದ್ದ ಗೌರವ ಅಪಾರ. ರಾಜ ಮನೆತನದವರಿಗೂ ಆಕೆಯನ್ನು ಕಂಡರೇ ಅದೇನೂ ವಿಶೇಷ ಪ್ರೀತಿ, ಅಕ್ಕರೆ, ಮಮಕಾರ. ಹೊನ್ನವ್ವೆ ಸಾಹಸಿ. ಅಗ್ನಿ ಜ್ವಾಲೆಗಳು ರುದ್ರ ನರ್ತನವಾಡುತ್ತಿದ್ದ ವೇಳೆ ಆ ಅಗ್ನಿಯ ನಡುವೆ ನಿಂತು ವಧು ವರರನ್ನು ರಕ್ಷಿಸಿದವಳು. ಅರಮನೆಯ ಅಮೂಲ್ಯ ಆಭರಣಗಳನ್ನು ಉಳಿಸಿದವಳು. ಎಲ್ಲಕ್ಕಿಂತ ಹೆಚ್ಚಾಗಿ ಯದುವಂಶ ಕುಲದೇವತೆ ತಾಯಿ ಚಾಮುಂಡೇಶ್ವರಿಯ ಪಚ್ಚೆ ವಿಗ್ರಹವಿದ್ದ ಸಂದೂಕವನ್ನೂ ಕಾಪಾಡಿದವಳು. ಆದರೆ ಎಲ್ಲವನ್ನೂ ರಕ್ಷಿಸಿದ ಹಿರಿಯ ಜೀವ ಮಾತ್ರ ಉಳಿಯಲಿಲ್ಲ. ಇದೆಲ್ಲವನ್ನೂ ರಕ್ಷಿಸುವ ಅಷ್ಟರಲ್ಲಾಗಲೇ ಹೊನ್ನವ್ವೆಯ ದೇಹಕ್ಕೆ ಬೆಂಕಿ ತಗುಲಿತ್ತು. ತೀವ್ರ ಗಾಯಗಳಿಂದ ನರಳುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಜೀವನ್ಮರಣ ಹೋರಾಟ ನಡೆಸಿದ ಮಹಾತಾಯಿ ಕೊನೆಗೆ ಮೌನವಾಗಿ ಈ ಲೋಕವನ್ನೇ ತೊರೆದಳು. ಆ ಸಮಯದಲ್ಲಿ ಪ್ರಖ್ಯಾತ ವೈದ್ಯರಾಗಿದ್ದ ಮೆಗ್ಗಾನ್ ರಾಜಮಾತೆಗೆ ಒಂದು ಮಾತು ಹೇಳಿದರು. ಅದೇನೆಂದರೆ, ‘‘ಇನ್ನಷ್ಟು ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ ಈ ತಾಯಿಯ ಜೀವವನ್ನು ಉಳಿಸಬಹುದಿತ್ತು’’. ಆ ಮಾತು ರಾಜಮಾತೆ ಕೆಂಪನಂಜಮ್ಮಣಿ ಹೃದಯವನ್ನು ಕದಡಿತು.

ಕೆಂಪನಂಜಮ್ಮಣ್ಣಿ ಮಾತೃ ಹೃದಯದಾಕೆ. ಅವರ ಮನಸು ಸದಾ ಪ್ರಜೆಗಳ ಹಿತ ಸಮಾಜಮುಖಿ ಚಿಂತನೆ ಕಡೆಗೆ ತುಡಿಯುತಿತ್ತು. ಅದಕ್ಕೆ ಸಾಕ್ಷಿ ಗುಡ್ಡೆಯಾಗಿ ನಮ್ಮ ಮೈಸೂರಿನಲ್ಲಿ ಅನೇಕಾನೇಕ ಕುರುಹುಗಳು ಶತ ಶತಮಾನ ಕಳೆದರು ಜೀವಂತವಾಗಿವೆ. ಹೊನ್ನವ್ವೆಯ ಸಾವು ರಾಜಮಾತೆಯ ಮನದಲ್ಲಿ ಒಂದು ಸಂಕಲ್ಪ ಹುಟ್ಟಿ ಹಾಕಿತು. ಮುಂದೆಂದೂ ನಮ್ಮ ಪ್ರಜೆಗಳು ಚಿಕಿತ್ಸೆ ಇಲ್ಲದೆ ಸಾಯಬಾರದು. ಯಾವಾಗ ರಾಜಮಾತೆ ಧೃಡ ನಿರ್ಧಾರ ಮಾಡಿದರೋ ಅಲ್ಲಿಗೆ ರಾಜ್ಯದ ಮಹಾನ್ ಆಸ್ಪತ್ರೆಯೊಂದಕ್ಕೆ ನಾಂದಿ ಶುರುವಾಯಿತು.

ವಿಕ್ಟೋರಿಯಾ ಹೆಸರಿಗಿದೆ ರೋಚಕ ಇತಿಹಾಸ

ಹೌದು, ವಿಕ್ಟೋರಿಯಾ ಹೆಸರು ಸುಖಾಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ನಮ್ಮ ಮೈಸೂರು ಸಾಮ್ರಾಜ್ಯದ ಮಹಿಳೆಯರ ಬುದ್ದಿ ಚಾತುರ್ಯದ ಇತಿಹಾಸವಿದೆ. ಸರ್ವಕಾಲಕ್ಕೂ ‘‘ಹೆಣ್ಮಕ್ಳೇ ಸ್ಟ್ರಾಂಗು ಗುರು’’ ಎಂಬುದಕ್ಕೆ ಸಾಕ್ಷಿಭೂತವಾಗಿದೆ‌. ನಮ್ಮ ಮನೆಯ ಹೆಣ್ಣು ಮಕ್ಕಳ ಬುದ್ದಿಶಕ್ತಿ ದೂರದೃಷ್ಟಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜಮಾತೆ ಕೆಂಪನಂಜಮ್ಮಣ್ಣಿ ಬ್ರಿಟಿಷರಂತಹ ಬ್ರಿಟಿಷರನ್ನೇ ಮಂಕಾಗಿಸಿ ಚಾಣಾಕ್ಷತನದಿಂದ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಸ್ವಾಮಿ ಕಾರ್ಯ ಸ್ವಕಾರ್ಯ ಮಾಡಿಕೊಂಡು ಬಿಟ್ಟರು. ಅದರ ರೋಚಕ ಕಥೆ ಎಲ್ಲರಿಗೂ ಸ್ಪೂರ್ತಿ. ಹೊನ್ನವ್ವೆ ದಾರುಣ ಸಾವಿನ ನಂತರ ರಾಜಮಾತೆ ಆಸ್ಪತ್ರೆ ಕಟ್ಟಿಸುವ ಸಂಕಲ್ಪ ಮಾಡಿ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಲು ಆರಂಭಿಸಿದರು. ಆದರೆ ಅದು ಸಂಕಲ್ಪ ಮಾಡಿದಷ್ಟು ಸುಲಭವಾಗಿರಲಿಲ್ಲ. ಹೇಳಿ ಕೇಳಿ ಮೈಸೂರು ಸಂಸ್ಥಾನ ಬ್ರಿಟಿಷರ ಅಡಿಯಲ್ಲಿತ್ತು. ಕಡ್ಡಿ ಅಲ್ಲಾಡಬೇಕಾದರೂ ಅವರ ಅನುಮತಿ ಬೇಕಿತ್ತು. ಹೀಗಿರುವಾಗಲೇ ಮತ್ತೊಂದು ಸವಾಲು ಮೈಸೂರು ಅರಸರಿಗೆ ಎದುರಾಯ್ತು. ಅದೇ ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ 60ನೇ ವರ್ಷದ ಹುಟ್ಟುಹಬ್ಬ‌.

ಅಧಿನಾಯಕಿ ವಿಕ್ಟೋರಿಯಾ ಅವರ ಹುಟ್ಟುಹಬ್ಬವನ್ನು ಭಾರತ ಎಲ್ಲಾ ಸಾಮ್ರಾಜ್ಯದವರು ಅದ್ದೂರಿಯಾಗಿ ಆಚರಿಸಬೇಕು ಅಂತಾ ಬ್ರಿಟಿಷ್ ಕಂಪನಿ ಕಟ್ಟಪ್ಪಣೆ ಮಾಡಿತು. ಅಷ್ಟೇ ಅಲ್ಲ ಎಲ್ಲರೂ ತಮ್ಮ ಶಕ್ತಿಗೂ ಮೀರಿ ವಿಕ್ಟೋರಿಯಾ ರಾಣಿಗೆ ಅತ್ಯಮೂಲ್ಯ ಉಡುಗೊರೆ ನೀಡಲೇಬೇಕೆಂಬ ಆದೇಶವನ್ನು ಹೊರಡಿಸಲಾಯ್ತು. ಮೊದಲೇ ಆಸ್ಪತ್ರೆ ನಿರ್ಮಾಣಕ್ಕೆ ಹರಸಾಹಸಪಡುತ್ತಿದ್ದ ರಾಜಮಾತೆಗೆ ಇದೊಂದು ರೀತಿ ಸಂದಿಗ್ಧ ಪರಿಸ್ಥಿತಿ. ಆರಂಭದಲ್ಲಿ ರಾಜಮಾತೆಗೆ ದಿಕ್ಕೇ ತೋಚದಂತಾಯ್ತು. ಆದರೂ ಧೃತಿಗೆಡದ ರಾಜಮಾತೆ ಸಮಯೋಚಿತವಾದ ಉಪಾಯ ಮಾಡಿದರು. ಅದುವೇ ಬ್ರಿಟಿಷ್ ರಾಣಿ ಹುಟ್ಟುಹಬ್ಬಕ್ಕೆ ಉಚಿತ ಸರ್ಕಾರಿ ಆಸ್ಪತ್ರೆಯನ್ನೇ ಉಡುಗೊರೆಯಾಗಿ ಕೊಡುವುದಾಗಿ ಘೋಷಣೆ ಮಾಡಿದರು. ರಾಜಮಾತೆಯ ಈ ಕೊಡುಗೆ ವಿಶ್ವದ ಅತ್ಯುತ್ತಮ ಉಡುಗೊರೆಯಾಗಿ ಹೊರಹೊಮ್ಮಿತು. ಬ್ರಿಟಿಷರಂತೂ ರಾಜಮಾತೆಯನ್ನು ಹಾಡಿ ಹೊಗಳಿ ಅವರ ಕೊಡುಗೆಯನ್ನು ಮನದುಂಬಿ ಸ್ಮರಿಸಿದರು. ಈ ಮೂಲಕ ರಾಜಮಾತೆ ತಮ್ಮ ಬುದ್ದಿ ಚಾತುರ್ಯದಿಂದ ಶತಮಾನಗಳೇ ಕಳೆದರು ಸಮಾಜಕ್ಕೆ ಉಪಯೋಗವಾಗುವ ಮಹತ್ವದ ಆಸ್ಪತ್ರೆಯನ್ನೂ ನೀಡಿದರು.

ಅದು 1897ರ ಜೂನ್ 22ರಂದು ಸರಿ ಸುಮಾರು 129 ವರ್ಷದ ಹಿಂದೆ 7 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಒಂದು ಬೃಹತ್ ಸಾರ್ವಜನಿಕ ಆಸ್ಪತ್ರೆಯ ಅಡಿಗಲ್ಲು ಇಡಲಾಯಿತು. ಅದು ಕೇವಲ ಕಟ್ಟಡವಾಗಿ ಅಲ್ಲ. ಅದು ಮಾನವೀಯತೆಯ ಸ್ಮಾರಕವಾಗಿ ರೂಪುಗೊಳ್ಳಬೇಕಿತ್ತು. ಮೂರು ವರ್ಷಗಳ ನಂತರ 1900ರ ಡಿಸೆಂಬರ್ 3 ರಂದು ಭಾರತದ ವೈಸ್ ರಾಯ್ ಲಾರ್ಡ್ ಕರ್ಜನ್ ಅದನ್ನು ಉದ್ಘಾಟಿಸಿದರು. ಆ ದಿನದಿಂದ ವಿಕ್ಟೋರಿಯ ಆಸ್ಪತ್ರೆ ಸಾವಿರಾರು ಬಡವರ ಆನಾರೋಗ್ಯಕ್ಕೆ ಸಂಜೀವಿನಿ ಆಗಿದೆ. ಲಕ್ಷಾಂತರ ಬಡ ಜೀವಗಳಿಗೆ ಜೀವನಾಡಿಯಾಗಿದೆ. ಈ ಆಸ್ಪತ್ರೆಯಲ್ಲಿ ಬಡವರು, ರೈತರು, ಕಾರ್ಮಿಕರು, ಅನಾಥರು, ನಿರ್ಗತಿಕರು ಅಷ್ಟೇ ಅಲ್ಲ ಗೊತ್ತು ಗುರಿಯಿಲ್ಲದವರ ನೋವಿಗೂ ಇಲ್ಲಿ ಔಷಧ ಸಿಕ್ಕಿದೆ. ಅವರ ಕಣ್ಣೀರಿಗೆ ಪರಿಹಾರ ಸಿಕ್ಕಿದೆ. ಎಷ್ಟೋ ತಾಯಂದಿರು ಇಲ್ಲಿ ಹೊಸ ಜೀವಕ್ಕೆ ಜನ್ಮ ನೀಡಿದ್ದಾರೆ. ಎಷ್ಟೋ ಮಕ್ಕಳಿಗೆ ಇಲ್ಲಿ ಬದುಕಿನ ಮೊದಲ ಉಸಿರು ದೊರಕಿದೆ. ಇದು ಬೆಂಗಳೂರಿನ ಜನರ ನಾಡಿಮಿಡಿತ, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವ ನೆನಪುಗಳ ಭಾಗ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ !

ಒಟ್ಟಿನಲ್ಲಿ, ಶತಮಾನಗಳ ಕಾಲ ಜನರ ನೆನಪಿನಲ್ಲಿ ಉಳಿದಿರುವ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರು ಕೇವಲ ಫಲಕದಲ್ಲಿರುವ ಅಕ್ಷರಗಳಲ್ಲ. ಅದು ಜನರ ಹೃದಯದಲ್ಲಿ ಬರೆಯಲ್ಪಟ್ಟಿರುವ ಇತಿಹಾಸ. ಹೆಸರು ಬದಲಾಗಬಹುದು, ಫಲಕಗಳು ಹೊಸದಾಗಬಹುದು. ಆದರೆ ಈ ಆಸ್ಪತ್ರೆಯ ಗೋಡೆಗಳಲ್ಲಿ ಉಳಿದಿರುವ ಸಾವಿರಾರು ಜೀವಗಳ ಕಥೆಗಳು ಎಂದಿಗೂ ಬದಲಾಗುವುದಿಲ್ಲ. ಏಕೆಂದರೆ, ಆಸ್ಪತ್ರೆಗಳು ಕೇವಲ ಕಟ್ಟಡಗಳಲ್ಲ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us