ವಿಡಿಯೋ ಕಾಲ್ ವಂಚನೆ: ನಕಲಿ ಸಿಬಿಐ ಅಧಿಕಾರಿಗಳ ಬಲೆಯಿಂದ ಪಾರಾದ ಸಂಗೀತ ಕಲಾವಿದ!

Video Call Scam: ಸಂಗೀತ ಕಲಾವಿದ ರೊನಾಲ್ಡ್ ಅವರಿಗೆ ಅಪರಿಚಿತ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬುಕ್ ಆಗಿರುವ ಪಾರ್ಸೆಲ್‌ನಲ್ಲಿ ಡ್ರಗ್ ಸಹಿತ ನಿಷೇಧಿತ ವಸ್ತು ಸಿಕ್ಕಿದೆ. ಈ ಬಗ್ಗೆ ಸಿಬಿಐ ಕಚೇರಿಯಲ್ಲಿ ಎಫ್.ಐ.ಆರ್. ಆಗಿದೆ ಎಂದು ಬೆದರಿಸಿದ್ದಾನೆ. ರೊನಾಲ್ಡ್ ಅವರು ಅನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದು, ಪ್ರಾರಂಭದಲ್ಲಿ ಇದರಿಂದಲೇ ಏನೋ ಸಮಸ್ಯೆಯಾಗಿದೆ ಎಂದು ಅಂದುಕೊಂಡಿದ್ದರು.

ವಿಡಿಯೋ ಕಾಲ್ ವಂಚನೆ: ನಕಲಿ ಸಿಬಿಐ ಅಧಿಕಾರಿಗಳ ಬಲೆಯಿಂದ ಪಾರಾದ ಸಂಗೀತ ಕಲಾವಿದ!
ನಕಲಿ ಸಿಬಿಐ ಅಧಿಕಾರಿಗಳ ಬಲೆಯಿಂದ ಪಾರಾದ ಸಂಗೀತ ಕಲಾವಿದ!
Follow us
| Updated By: ಸಾಧು ಶ್ರೀನಾಥ್​

Updated on: May 21, 2024 | 8:56 AM

ಪಾರ್ಸೆಲ್ ಹೆಸರಿನಲ್ಲಿ ಬೆದರಿಸಿ ಜನರಿಂದ ಹಣ ಲೂಟಿ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಕೆಲದಿನಗಳ ಹಿಂದಷ್ಟೇ ಕಡಲನಗರಿ ಮಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಇಂಜಿನಿಯರೊಬ್ಬರಿಂದ ಕೋಟಿ ಹಣ ಪೀಕಿಸಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ಆದರೆ ಈ ಬಾರಿ, ನಕಲಿ ಸಿಬಿಐ ಅಧಿಕಾರಿಗಳ (Fake CBI) ಬಲೆಯಿಂದ ಸಂಗೀತ ಕಲಾವಿದರೊಬ್ಬರು ಪಾರಾಗಿದ್ದಾರೆ. ಹೌದು.. ಒಟಿಪಿ ಪಡೆದು ಹಣ ಲಪಟಾಯಿಸುವುದು ಸೈಬರ್ ಖದೀಮರ ಹಳೆ ಐಡಿಯಾ. ಆದ್ರೆ ಇದೀಗ ಕ್ರೈ ಬ್ರಾಂಚ್, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಹಣ ಕೀಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಡಲ ನಗರಿ ಮಂಗಳೂರಿನಲ್ಲಿ (Mangalore) ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದೆ. ಅದೃಷ್ಟವಶಾತ್ ಈ ನಕಲಿ ಸಿಬಿಐ ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ರೊನಾಲ್ಡ್ ವಿನ್ಸೆಂಟ್ ಕ್ರಾಸ್ತಾ ಅವರು ಪಾರಾಗಿದ್ದಾರೆ (Video Call Scam).

ರೊನಾಲ್ಡ್ ಅವರಿಗೆ ಅಪರಿಚಿತನೊಬ್ಬ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬುಕ್ ಆಗಿರುವ ಪಾರ್ಸೆಲ್‌ನಲ್ಲಿ ಡ್ರಗ್ ಸಹಿತ ನಿಷೇಧಿತ ವಸ್ತು ಸಿಕ್ಕಿದೆ. ಈ ಬಗ್ಗೆ ಸಿಬಿಐ ಕಚೇರಿಯಲ್ಲಿ ಎಫ್.ಐ.ಆರ್. ಆಗಿದೆ ಎಂದು ಬೆದರಿಸಿದ್ದಾನೆ. ರೊನಾಲ್ಡ್ ಅವರು ಅನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದು, ಪ್ರಾರಂಭದಲ್ಲಿ ಇದರಿಂದಲೇ ಏನೋ ಸಮಸ್ಯೆಯಾಗಿದೆ ಎಂದು ಅಂದುಕೊಂಡಿದ್ದರು.

ಆದ್ರೆ ವಂಚಕರು ಸಿಬಿಐ ಅಧಿಕಾರಿಗಳ ಹೆಸರಲ್ಲಿ ಮತ್ತೆ ವಿಡಿಯೋ ಕಾಲ್ ಮಾಡಿ ಕೂಡಲೇ ಅಗತ್ಯ ಮಾಹಿತಿ ನೀಡಿ ಇದನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿದ್ದಾರೆ. ತಮ್ಮನ್ನು ನಂಬುವಂತೆ ಮಾಡೋದಕ್ಕೆ ನಕಲಿ ಐಡಿ ಕಾರ್ಡ್, ರೋನಾಲ್ಡ್ ಅವರ ಹೆಸರಿಗೆ ಬಂದಿರುವ ಸಿಬಿಐ ನೋಟಿಸ್, ಕೋರ್ಟ್ ನೋಟಿಸ್ ಸಹ ಕಳುಹಿಸಿಕೊಟ್ಟಿದ್ದಾರೆ. ನಿರಂತರ ಪ್ರಶ್ನೆಗಳನ್ನು ಕೇಳಿ, ಮನೆಗೆ ಸಿಬಿಐ ದಾಳಿಯಾಗುವುದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅನುಮಾನ ಬಂದು ಸ್ನೇಹಿತರೊಬ್ಬರಿಗೆ ಈ ವಿಚಾರ ಹೇಳಿದಾಗ ಇದು ವಂಚನೆಯ ಜಾಲ ಎಂದು ರೋನಾಲ್ಡ್ ಅವರಿಗೆ ಗೊತ್ತಾಗಿದೆ.

ಪೊಲೀಸರೆಂದು ನಂಬುವಂತೆ ಮಾಡಲು ವಂಚಕರು ವಿಡಿಯೋ ಕಾಲ್ ಸಂದರ್ಭ ಪೊಲೀಸ್ ಕಚೇರಿಯಲ್ಲಿ ಮಾತನಾಡುವ ರೀತಿ ವಾಕಿಟಾಕಿಯ ಸೌಂಡ್‌ಗಳನ್ನು ಸಹ ಹಾಕಿದ್ದರು. ಆದ್ರೆ ಯಾವುದೇ ಒಟಿಪಿ ನೀಡದಿರುವುದರಿಂದ, ಹಣ ವರ್ಗಾವಣೆ ಮಾಡದಿರುವುದರಿಂದ ರೋನಾಲ್ಡ್ ವಂಚನೆಗೊಳಗಾಗದೆ ಪಾರಾಗಿದ್ದಾರೆ.

Also Read: ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಹಳೆಯ ಕಳ್ಳ, ಈ ಸಿನಿಮೀಯ ಸ್ಟೋರಿ ಓದಿ

ಇನ್ನು ಕೆಲ ದಿನಗಳ ಹಿಂದೆಯು ಇದೇ ರೀತಿ ಫೆಡೆಕ್ಸ್ ಕಂಪೆನಿಯ ಪಾರ್ಸೆಲ್ ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ನ್ನು ಬೆದರಿಸಿ 1 ಕೋಟಿ 60 ಲಕ್ಷ ರೂಪಾಯಿ ಹಣವನ್ನು ಸೈಬರ್ ವಂಚಕರು ಲಪಟಾಯಿಸಿದ್ದರು. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ. ಈ ಬಗ್ಗೆ ಮುಂಬೈ ಕ್ರೈ ಬ್ರಾಂಚ್ ಸಹ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವಂಚಕ ಹೇಳಿದ್ದನು. ನೀವು ತನಿಖೆಗೆ ಸಹಕರಿಸದಿದ್ದರೆ ವಿದೇಶದಲ್ಲಿರುವ ನಿಮ್ಮ ಮಗ ಮತ್ತು ಮಗಳನ್ನು ಇಂಟರ್‌ಪೋಲ್ ಮೂಲಕ ಬಂಧಿಸಬೇಕಾಗುತ್ತದೆ ಎಂದು ನಿವೃತ್ತ ಇಂಜಿನೀಯರ್‌ಗೆ ಬೆದರಿಕೆಯೊಡ್ಡಿದ್ದನು.

ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್ ರೂಪದಲ್ಲಿ ಹಣ ಪಾವತಿಸುವಂತೆ ಬ್ಲ್ಯಾಕ್ ಮೇಲ್ ಮಾಡಿ 1 ಕೋಟಿ 60 ಲಕ್ಷ ರೂಪಾಯಿ ಹಣ ಪೀಕಿಸಿದ್ದರು. ಹೀಗಾಗಿ ಈ ವಂಚನೆಯ ಬಗ್ಗೆ ಜಾಗರೂಕರಾಗಿರುವುಂತೆ ಮಂಗಳೂರು ಡಿಸಿಪಿ ಸಿದ್ದಾರ್ಥ್ ಗೋಯಲ್ ಎಚ್ಚರಿಸಿದ್ದಾರೆ.

ಈ ಹೊಸ ವಂಚನೆ ಪ್ರಕರಣದಲ್ಲಿ ಖದೀಮರು ಈ ಬಗ್ಗೆ ಬೇರೆಯವರೊಂದಿಗೆ ಚರ್ಚೆ ಮಾಡೋದಕ್ಕೆ ಬೇಕಾದ ಸಮಯವನ್ನೇ ನೀಡೋದಿಲ್ಲ. ಹಲವು ಪ್ರಶ್ನೆಗಳನ್ನು ಕೇಳಿ, ನಮ್ಮ ಆಧಾರ್ ನಂಬರ್ ಸಹಿತ ಕೆಲ ಮಾಹಿತಿಗಳನ್ನು ಅವರೇ ಹೇಳಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಬಂಧನವಾಗುತ್ತದೆ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಒಟ್ಟಿನಲ್ಲಿ ಇನ್ನಾದರೂ ಈ ಮೋಸದ ಕರೆಗಳ ಬಗ್ಗೆ ಜನ ಜಾಗರೂಕತೆಯಿಂದ ಇರಬೇಕಾದ ಅಗತ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ