ವಿಜಯನಗರದಲ್ಲಿ ಎರಡು ಆಟೋ-ಲಾರಿ ನಡುವೆ ಡಿಕ್ಕಿ ಪ್ರಕರಣ; ಮೃತರ ಸಂಖ್ಯೆ 9ಕ್ಕೆ ಏರಿಕೆ
ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ 2 ಆಟೋಗೆ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ವಿಷಯ ತಿಳಿದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ವಿಜಯನಗರ: ಜಿಲ್ಲೆಯ ಹೊಸಪೇಟೆ(Hosapete) ತಾಲೂಕಿನ ವಡ್ಡರಹಳ್ಳಿ ಬಳಿ ಎರಡು ಆಟೋಗೆ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಜೂ.29ರಂದು ಬಕ್ರೀದ್ ಹಬ್ಬವನ್ನು ಮುಗಿಸಿಕೊಂಡ ಬಳಿಕ ಬಳ್ಳಾರಿಯ ಕೌಲ್ಬಜಾರ್ನಿಂದ 2 ಆಟೋಗಳಲ್ಲಿ 19 ಜನರು ತುಂಗಭದ್ರಾ ಡ್ಯಾಮ್ಗೆ ತೆರಳುತ್ತಿದ್ದರು. ಈ ವೇಳೆ ಎರಡು ಆಟೋಗಳಿಗೂ ಲಾರಿ ಡಿಕ್ಕಿಯಾಗಿದ್ದು, 7 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಕಲಾಗಿತ್ತು. ಇದೀಗ ಮತ್ತಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ವಿಷಯ ತಿಳಿದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಬಳಿಕ ವಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ ಬಕ್ರೀದ್ ಹಬ್ಬದ ನಂತರ ಎಲ್ಲರೂ ಟಿಬಿ ಡ್ಯಾಂ ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 9 ಜನರು ಸಾವನ್ನಪ್ಪಿರುವುದು ದುರದೃಷ್ಟಕರ. ಮೃತರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರು.
ರಸ್ತೆ ಕಿರಿದಾದ ಪರಿಣಾಮ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಜೊತೆಗೆ ಗಾಯಾಳುಗಳ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕಳೆದ 10 ವರ್ಷದಿಂದ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ. ರಸ್ತೆ ಕಾಮಗಾರಿ ವಿಳಂಬದ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡುವೆ ಎಂದಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ