ವಿಜಯಪುರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್, ಕಲಬುರಗಿಯಲ್ಲಿ ಆಕ್ಸಿಜನ್ ಘಟಕ ಸ್ಫೋಟ

ಕಳೆದ ವರ್ಷ ಓರ್ವ ಕಾರ್ಮಿಕನ ಸಾವಿಗೆ ಕಾರಣವಾಗಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್​ ಮತ್ತೆ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಮುಂದಿನ ಅವಧಿಗೆ ​ಕಬ್ಬು ನುರಿಸಲು ಕಾರ್ಖಾನೆ ಸಿದ್ದ ಮಾಡುತ್ತಿರುವ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ.

ವಿಜಯಪುರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್, ಕಲಬುರಗಿಯಲ್ಲಿ ಆಕ್ಸಿಜನ್ ಘಟಕ ಸ್ಫೋಟ
ವಿಜಯಪುರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on:Jul 07, 2024 | 1:26 PM

ವಿಜಯಪುರ, ಜುಲೈ 07: ಬಬಲೇಶ್ವರ (Babaleshwar) ತಾಲೂಕಿನ ಕೃಷ್ಣಾನಗರದಲ್ಲಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡಿದೆ (Nandi Cooperative Sugar Factory Boiler Blast). ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಖಾನೆಯಲ್ಲಿದ್ದ 15 ಕಾರ್ಮಿಕರು ನಸುಕಿನ ಜಾವ ಚಹಾ ಕುಡಿಯಲು ಹೊರಗೆ ತೆರಳಿದ್ದ ವೇಳೆ ಬಾಯ್ಲರ್​ ಬ್ಲಾಸ್ಟ್​ ಆಗಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಮುಂದಿನ ಅವಧಿಗೆ ​ಕಬ್ಬು ನುರಿಸಲು ಕಾರ್ಖಾನೆ ಸಿದ್ದ ಮಾಡುತ್ತಿರುವ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ.

2023ರ ಮಾ.4ರಂದು ಇದೇ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟವಾಗಿತ್ತು. ಆಗ ಓರ್ವ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದವು. ಕಳಪೆ ಬಾಯ್ಲರ್ ನಿರ್ಮಾಣದಿಂದ ಅವಘಡ ಸಂಭವಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ರೈತರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖಾ ತಂಡಕ್ಕೆ ಸಿಎಂ ಮೆಚ್ಚುಗೆ

50 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಯ್ಲರ್ ನಿರ್ಮಾಣ ಮಾಡಿಸಲಾಗಿದೆ. ಆದರೆ, ಕಳಪೆ ಗುಣಮಟ್ಟದ ಬಾಯ್ಲರ್ ನಿರ್ಮಾಣ ಮಾಡಲಾಗಿದೆ. ಈ‌ ಹಿಂದೆ ಇದ್ದ ಆಡಳಿತ ಮಂಡಳಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಅವರು ಪೂನಾ ಮೂಲದ ಎಸ್​ಎಸ್ ಇಂಜಿನಿಯರಿಂಗ್ ಕಂಪನಿ​ಗೆ ಬಾಯ್ಲರ್ ನಿರ್ಮಾಣ ಕಾಮಗಾರಿ ನೀಡಿದ್ದರು. ಆದರೆ, ಈ ಕಂಪನಿಗೆ ನಿರ್ಮಾಣನ ಅನುಭವ ಇರಲಿಲ್ಲ. ಹೀಗಾಗಿ ಶಶಿಕಾಂತಗೌಡ ಪಾಟೀಲ್ ಅಧ್ಯಕ್ಷತೆ ಅವಧಿಯ ಕಾಮಗಾರಿಗಳು ಹಾಗೂ ಬಾಯ್ಲರ್ ಬ್ಲಾಸ್ಟ್ ಕುರಿತು ತನಿಖೆಯನ್ನು ಸಿಐಡಿ ಅಥವಾ ಸಿಬಿಐಗೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಆಕ್ಸಿಜನ್ ಘಟಕ ಸ್ಫೋಟ

ಕಲಬುರಗಿ: ಚಿಂಚೋಳಿ ತಾಲೂಕು ಆಸ್ಪತ್ರೆ ಹಿಂಬಾಗದ ​ಆಕ್ಸಿಜನ್ ಘಟಕ ಭಾನುವಾರ (ಜು.07) ಸ್ಫೋಟಗೊಂಡಿದೆ. ಸ್ಫೋಟದಿಂದ ಭಾರಿ ಸದ್ದು ಬಂದಿದ್ದು, ಆಮ್ಲಜನಕದ ವಾಸನೆ ಆಸ್ಪತ್ರೆ ಮತ್ತು ಸುತ್ತಲಿನ ಪ್ರದೇಶಕ್ಕೆ ಹಬ್ಬಿದೆ. ಇದರಿಂದ ಭೀತಿಗೊಳಗಾದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಆಸ್ಪತ್ರೆ ಖಾಲಿ ಮಾಡಿ ಆವರಣದಲ್ಲಿ ಕುಳಿತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ರತಿಕಾಂತ್ ಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಆಕ್ಸಿಜನ್​ ಘಟಕದಲ್ಲಿ ನಿರಂತರ ಸೋರಿಕೆಯಾಗುತ್ತಿದೆ. ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಸೋರಿಕೆ ತಡೆಯುವ ಪ್ರಯತ್ನ ನಡೆಯುತ್ತಿದೆ. ಆಸ್ಪತ್ರೆ ಸುತ್ತಮುತ್ತಲಿನ ಬಡಾವಣೆಯ ಜನರು ಜಾಗೃತಿ ವಹಿಸಲು ಪೊಲೀಸರು ಸೂಚನೆ ನೀಡಿದ್ದಾರೆ.

ಘಟನೆ ಸಂಬಂಧ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ರತಿಕಾಂತ ಸ್ವಾಮಿ ಮಾತನಾಡಿ, ಎರಡು ದಿನಗಳ ಹಿಂದೆ ಆಮ್ಲಜನಕ ತುಂಬಿಸಲಾಗಿತ್ತು. ತುಂಬಿಸಿದಾಗ ಸಹಜವಾಗಿ ಒತ್ತಡ ಹೆಚ್ಚಾಗುತ್ತೆ. ಹೆಚ್ಚಾದ ಆಮ್ಲಜನಕ ಎ.ಬಿ.ಸಿ ಎಂಬ ವಾಲ್ ಮೂಲಕ ಹೊರಗೆ ಹೋಗುತ್ತದೆ. ಇದೊಂದು ಸಾಮನ್ಯ ಪ್ರಕ್ರಿಯೆ. ಯಾರು ಆತಂಕ ಪಡಬೇಕಿಲ್ಲ. ಬ್ಲಾಸ್ಟ್ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:25 pm, Sun, 7 July 24