Accident: ಕ್ರೂಸರ್ ಹಾಗೂ ಬೈಕ್ ಮಧ್ಯೆ ಡಿಕ್ಕಿ: ತಂದೆ, ಮಗಳು ಸಾವು, ತಾಯಿಗೆ ಗಂಭೀರ ಗಾಯ
ಕ್ರೂಸರ್ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿಯ ಸಾತಿಹಾಳ ರಸ್ತೆಯಲ್ಲಿ ನಡೆದಿದೆ.
ವಿಜಯಪುರ: ಕ್ರೂಸರ್ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿಯ ಸಾತಿಹಾಳ ರಸ್ತೆಯಲ್ಲಿ ನಡೆದಿದೆ. ರಮೇಶ್ ನಾಟಿಕಾರ (35), ಪುತ್ರಿ ಖುಷಿ (8) ಮೃತ ದುರ್ದೈವಿಗಳು. ತಾಯಿ ಶ್ರೀದೇವಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಮತ್ತು ಗಾಯಳು ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತದ ಬಳಿಕ ಕ್ರೂಸರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಗರದ ಹೊರವಲಯ ಹುಬ್ಬಳ್ಳಿ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಶವದ ಮುಖದಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್ಪಿ ಆನಂದಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖಾಸಗಿ ಬಸ್ನಲ್ಲಿ ಲೇಡಿ ಡಾಕ್ಟರ್ ಜತೆ ಅಸಭ್ಯ ವರ್ತನೆ
ಮಂಗಳೂರು: ಖಾಸಗಿ ಬಸ್ನಲ್ಲಿ ಲೇಡಿ ಡಾಕ್ಟರ್ ಪ್ರಯಾಣಿಕರೊಬ್ಬರ ಜತೆ ಖಾಸಗಿ ಬಸ್ (private bus) ಕ್ಲೀನರ್ ಮಹಮ್ಮದ್ ಇಮ್ರಾನ್ (26) ಅಸಭ್ಯ ವರ್ತನೆ (harassment) ತೋರಿದ್ದು, ಆತನನ್ನು ಬಂಧಿಸಲಾಗಿದೆ (arrest). ಬಂಧಿತ ಆರೋಪಿ, ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ವೈದ್ಯೆ ಜತೆ ದುರ್ವತನೆ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲುಗೊಂಡಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು.
ಆರೋಪಿ ಇಮ್ರಾನ್ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ. ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ಸಂತ್ರಸ್ತೆ, ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ. ದೂರುದಾರ ಮಹಿಳಾ ಪ್ರಯಾಣಿಕರು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪೊಲೀಸ್ ದೂರು ನೀಡುವ ವಿಚಾರ ಗೊತ್ತಾಗಿ ಆರೋಪಿ ಇಮ್ರಾನ್ ಮಹಿಳೆಗೆ ಬೆದರಿಕೆಯನ್ನು ಹಾಕಿದ್ದ ಎಂದು ತಿಳಿದುಬಂದಿದೆ.
ಸಾಲಬಾಧೆಗೆ ಮನನೊಂದು ರೈತ ಸಾವು
ಮೈಸೂರು: ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಸಾಲಬಾಧೆಗೆ ಮನನೊಂದು ರೈತ ಕೆ.ಬಿ.ರಾಮು(38) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ ಕೈ ಸಾಲ, ಪತ್ನಿ ಹೆಸರಲ್ಲಿ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿದ್ದ ರಾಮು ಸಾಲಗಾರರ ಕಾಟ ತಾಳದೆ ನೇಣಿಗೆ ಶರಣಾಗಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಜಾರಿ ಬಾವಿಯಲ್ಲಿ ಬಿದ್ದು ಬಾಲಕಿ ಸಾವು
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕುಣೆ ಕೆಲ್ಲೂರಿನಲ್ಲಿ 30 ಅಡಿ ಆಳದ ಬಾವಿಯಲ್ಲಿ ಬಿದ್ದು ಬಾಲಕಿ ಮೇಘಾ (17) ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಬಾವಿಯೊಳಗಿನ ಮೀನು ನೋಡಲು ಹೋಗಿ ಘಟನೆ ಸಂಭವಿಸಿದೆ. ಘಟನೆ ಬಳಿಕ ನಿನ್ನೆ ತಡ ರಾತ್ರಿವರೆಗೂ ಮೃತದೇಹ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಸ್ಥಳಕ್ಕೆ ಮಸ್ಕಿ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಬಂದಿದ್ದು ಕಾರ್ಯಾಚರಣೆ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 pm, Thu, 10 November 22