Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಜಿಲ್ಲೆಯ 2 ಕಡೆ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.9 ರಷ್ಟು ತೀವ್ರತೆ ದಾಖಲು

ವಿಜಯಪುರ ಜಿಲ್ಲೆಯಲ್ಲಿ ಪದೆ ಪದೇ ಭೂಕಂಪನವಾಗುತ್ತಿರುತ್ತದೆ. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ. ಹೌದು ವಿಜಯಪುರ ನಗರ ಮತ್ತು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ರಾತ್ರಿ 12.22 ನಿಮಿಷಕ್ಕೆ ಹಾಗೂ ರಾತ್ರಿ‌ 1.20 ನಿಮಿಷಕ್ಕೆ ಎರಡು ಬಾರಿ ಭೂಕಂಪನದ ಅನುಭವವಾಗಿದೆ.

ವಿಜಯಪುರ ಜಿಲ್ಲೆಯ 2 ಕಡೆ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.9 ರಷ್ಟು ತೀವ್ರತೆ ದಾಖಲು
ಭೂಕಂಪ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on:Jan 29, 2024 | 7:44 AM

ವಿಜಯಪುರ, ಜನವರಿ 29: ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನವಾಗಿದೆ. ವಿಜಯಪುರ (Vijayapura) ನಗರ ಮತ್ತು ಬಸವನಬಾಗೇವಾಡಿ (Basavan Bagewadi) ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಿನ್ನೆ (ಜ.28) ತಡರಾತ್ರಿ 12.22 ನಿಮಿಷಕ್ಕೆ ಹಾಗೂ ರಾತ್ರಿ‌ 1.20 ನಿಮಿಷಕ್ಕೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ (Earthquake) ತೀರ್ವತೆಯನ್ನು ರಿಕ್ಟರ್​ ಮಾಪಕದಲ್ಲಿ 2.9 ಎಂದು ಅಳೆಯಲಾಗಿದೆ. ಭೂಮಿಯ 5 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿನ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿವೆ. ಪದೇ ಪದೆ ಭೂಕಂಪನದಿಂದ ಜನತೆ ಆತಂಕಗೊಂಡಿದ್ದಾರೆ.

ವಿಜಯಪುರದಲ್ಲಿ ಪದೇಪದೆ ಭೂಕಂಪನ ಅನುಭವವಾಗುತ್ತಿದ್ದು, ಕಳೆದ ವರ್ಷವಂತೂ ಸುಮಾರು ಹತ್ತಕ್ಕೂ ಹೆಚ್ಚು ಸಲ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿದ್ದವು. ಇದೀಗ ಹೊಸ ವರ್ಷದಲ್ಲಿ ಮೊದಲ ಭೂಕಂಪನದ ಅನುಭವವಾಗಿದೆ ಎನ್ನುತ್ತಾರೆ ಸ್ಥಳೀಯರು.

ಮನಗೂಳಿಯಲ್ಲಿ 2023ರಲ್ಲೂ ಭೂಕಂಪನ

2023ರ ಜು.25 ರಂದು ಬೆಳಿಗ್ಗೆ 9:55ಕ್ಕೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಮನಗೂಳಿ ಪಟ್ಟಣದಿಂದ 2.9 ಕಿ.ಮೀ ದೂರದಲ್ಲಿ ಭೂಕಂಪವಾಗಿತ್ತು. ಭೂಕಂಪನದ ‘ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್’ ಪ್ರಕಾರ, ತೀವ್ರತೆಯು ತುಂಬಾ ಕಡಿಮೆ ಇದೆ. ಭೂಮಿಯ 15 ರಿಂದ 20 ಕಿಮೀ ಆಳದಲ್ಲಿ ಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು

ಉಕಿಮನಾಳ ಗ್ರಾಮದಲ್ಲಿ ಭೂಕಂಪನ

ಕಳೆದ ವರ್ಷ 2023ರ ಡಿಸೆಂಬರ 8 ರಂದು ವಿಜಯಪುರ ತಾಲೂಕಿನ ಉಕಿಮನಾಳ ಗ್ರಾಮದಲ್ಲಿ ಭೂಕಂಪವಾಗಿತ್ತು. ಬೆಳಗ್ಗೆ ಉಕಿಮನಾಳ ಗ್ರಾಮದಲ್ಲಿ 3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ದೃಢಪಡಿಸಿದ್ದರು.

ಹುಮ್ನಾಬಾದ್​ನಲ್ಲಿ ಭೂಕಂಪನ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ ಮದರಗಾಂವ್ ಗ್ರಾಮದಲ್ಲಿ 2023ರ ನವೆಂಬರ್​ 6 ರಂದು ಬೆಳಗಿನ‌ 4:28ರ ಸುಮಾರಿಗೆ ಭೂಕಂಪನ ಆಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಘಟಕದಲ್ಲಿ 1.9 ರಷ್ಟು ತಿವ್ರತೆ ದಾಖಲಾಗಿತ್ತು. ಭೂಕಂಪ ಪ್ರಮಾಣ ಕಡಿಮೆಯಿರುವ ಕಾರಣ ಭಯಗೊಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ವಡ್ಡನಕೇರಾ ಗ್ರಾಮದ 1.7 ಕಿಮೀ ಎನ್‌ಎನ್‌ಇ, ಮದರಗಾಂವ್ ಜಿಪಿ, ಹುಮ್ನಾಬಾದ್ ತಾಲೂಕಿನಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆ ಆಗಿತ್ತು.

ಭೂಕೇಂದ್ರದಿಂದ ಮೇಲಿನ ಭೂಕಂಪಗಳ ತೀವ್ರತೆಯ ನಕ್ಷೆಯ ಪ್ರಕಾರ, ಗಮನಿಸಲಾದ ತೀವ್ರತೆಯು ತೀರಾ ಕಡಿಮೆಯಾಗಿತ್ತು. ಭೂಕಂಪನವು ಕೇಂದ್ರ ಬಿಂದುದಿಂದ 20-25 ಕಿಲೋಮೀಟರ್ ದೂರದವರೆಗೆ ಅನುಭವ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:27 am, Mon, 29 January 24