ವಿಜಯಪುರ: ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ; ಬಿಇಒ ಅಮಾನತಿಗೆ ಆದೇಶಿಸಿದ ಎಂಬಿ ಪಾಟೀಲ್
ವಿಜಯಪುರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆದಿದ್ದು, ಈ ವೇಳೆ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಬಿಇಒ ಅಮಾನತಿಗೆ ಸಚಿವ ಎಂ.ಬಿ ಪಾಟೀಲ್ ಆದೇಶಿಸಿದ್ದಾರೆ.
ವಿಜಯಪುರ: ಜಿಲ್ಲೆಯ ಯರನಾಳ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ(Library) ನಿರ್ಮಾಣಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ಬಿಇಒ(BEO) ಶೇಖರ್ ಬಳಬಟ್ಟಿಯವರನ್ನ ಅಮಾನತು ಮಾಡಲು ಸಚಿವ ಎಂ.ಬಿ ಪಾಟೀಲ್ ಆದೇಶಿಸಿದ್ದಾರೆ. ಹೌದು ಇಂದು(ಜೂ.23) ವಿಜಯಪುರ ಜಿಲ್ಲಾ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಇಒ ವಿರುದ್ಧ ಸಚಿವ ಶಿವಾನಂದ ಪಾಟೀಲ್ ವಿಚಾರ ಪ್ರಸ್ತಾಪಿಸಿದ್ದರು. ಪರವಾನಗಿ ನೀಡದೇ ಬಿಇಒ ಶೇಖರ್ ಬಳಬಟ್ಟಿ ಉದ್ಧಟತನ ಮಾಡಿರುವ ಆರೋಪ ಕೇಳಿಬಂದಿದ್ದು, ತಕ್ಷಣವೇ ಬಿಇಒ ಸಸ್ಪೆಂಡ್ ಮಾಡಲು ಡಿಡಿಪಿಐಗೆ ಎಂ.ಬಿ.ಪಾಟೀಲ್ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯತಿ ಕಛೇರಿ ಹೊರಗಡೆ ರೈತರಿಂದ ಪ್ರತಿಭಟನೆ
ಇನ್ನು ವಿಜಯಪುರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದು, ಇತ್ತ ಜಿಲ್ಲಾ ಪಂಚಾಯತಿ ಕಛೇರಿ ಹೊರಗಡೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಹೌದು, ಜಮೀನುಗಳ ದಾರಿ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ಸೇರಿ ಜಂಟಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸಚಿವರು ಹಾಗೂ ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಇನ್ನು ಇದೇ ವೇಳೆ ತಮ್ಮ ಭೇಡಿಕೆಗಳಾದ ‘ಜಿಲ್ಲೆಯನ್ನ ಬರಗಾಲ ಪೀಡಿತವೆಂದು ಘೋಸಿಬೇಕು, ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಬೇಕು, ನಕಲಿ ಬೀಜ, ಗೊಬ್ಬರ, ಕ್ರಿಮಿನಾಶಕ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:ಕರ್ನಾಟಕ ಸೂಕ್ತ ಆಯ್ಕೆ; ಟೆಸ್ಲಾ ಘಟಕ ಸ್ಥಾಪಿಸುವಂತೆ ಎಲಾನ್ ಮಸ್ಕ್ಗೆ ಎಂಬಿ ಪಾಟೀಲ್ ಮನವಿ
ಜಿಲ್ಲಾ ವಿವಿಧ ಇಲಾಖಾ ಮಟ್ಟದ 1 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಇನ್ನು ವಿಜಯಪುರ ಜಿಲ್ಲಾ ವಿವಿಧ ಇಲಾಖಾ ಮಟ್ಟದ 1 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದಾಗಿದ್ದು, ಬೃಹತ್ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಈ ವೇಳೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ವಿಜಯಪುರ ನಗರದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದು ಆರೋಪಿಸಿದರು. ನೀರು ಪೂರೈಕೆ, ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಯುಜಿಡಿ ಕೆಲಸ ಕುರಿತಂತೆ ವಾರ್ಡುಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ದಾನಮ್ಮನವರ್ ಮೌನ ವೀಕ್ಷಕರಾಗಿದ್ದೀರಿ, ಬೇಕಿದ್ದರೆ ಈ ಬಗ್ಗೆ ದಾಖಲಾತಿ ಅಂಕಿ-ಅಂಶಗಳನ್ನ ತರಿಸಿ ನಾನಿಲ್ಲಿ ಮಾತನಾಡಬಲ್ಲೆ, ಇಂಥದ್ದನ್ನೆಲ್ಲ ನಮ್ಮ ಕಾಂಗ್ರೆಸ್ ಸರಕಾರ ಸಹಿಸುವುದಿಲ್ಲ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಎಂ ಬಿ ಪಾಟೀಲ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ