- Kannada News Karnataka Vijayapura Dry grapes rates fall in vijayapura district growers want to include it in mid day meal bisi uta across karnataka
ಏಷ್ಯಾದಲ್ಲೇ ಉತೃಷ್ಟ ಒಣ ದ್ರಾಕ್ಷಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಾರೆ, ಆದರೆ ಬೆಳೆಗಾರರ ಪಾಲಿಗೆ ಅದು ಕಹಿ ಕಹಿ, ಬಿಸಿಯೂಟಕ್ಕೆ ಸೇರಿಸಲು ಮನವಿ
ಏಷ್ಯಾ ಖಂಡದಲ್ಲೇ ಉತೃಷ್ಟ ಗುಣಮಟ್ಟದ ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ತವರೂರು ಎಂದು ಕರೆಯಲಾಗುತ್ತದೆ. ಇಲ್ಲಿ ಬೆಳೆಯೋ ದ್ರಾಕ್ಷಿ ಇಡೀ ಏಷ್ಯಾದಲ್ಲೇ ಉತೃಷ್ಟ ಗುಣಮಟ್ದ ದ್ರಾಕ್ಷಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ತಯಾರಾಗೋ ಒಣದ್ರಾಕ್ಷಿ ದೇಶದಲ್ಲಿ ಅಷ್ಟೇ ಅಲ್ಲಾ ವಿವಿಧ ವಿದೇಶಗಳಿಗೂ ರಫ್ತಾಗುತ್ತದೆ ಎಂಬುದು ವಿಜಯಪುರ ಜಿಲ್ಲೆಯ ಹೆಮ್ಮೆ ಸಂಗತಿ. ಆದರೆ ಈ ಬಾರಿ ದ್ರಾಕ್ಷಿ ಬೆಳೆಗಾರರ ಪಾಲಿಗೆ ಕಹಿಯಾಗಿದೆ. ಬೆಳೆಗಾರರ ಪಾಲಿಗೆ ಸಿಹಿಯಾಗಬೇಕಿದ್ದ ದ್ರಾಕ್ಷಿ ಕಹಿಯಾಗಿದ್ದು ಸಂಕಷ್ಟ ತಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರೋ ಬೆಳೆಗಾರರು ಇದೀಗ ಬೀದಿಗೆ ಬಿದ್ದಂತಾಗಿದೆ. ಉತ್ತಮ ಫಸಲು ಬಂದರೂ, ಒಣ ದ್ರಾಕ್ಷಿ ತಯಾರಿಸಿದರೂ ಸಹ ನಷ್ಟ ಅನುಭವಿಸುವಂತಾಗಿದೆ.
Updated on: Jun 23, 2023 | 12:12 PM

ಹೆಚ್ಚಾಗುತ್ತಿದೆ ದ್ರಾಕ್ಷಿ ಬೆಳೆಯೋ ಪ್ರದೇಶ: ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಕಳೆದ ಮೂರು ವರ್ಷಗಳ ಪ್ರಮಾಣವನ್ನು ನೋಡಲಾಗಿ ಪ್ರತಿ ವರ್ಷ 2 ರಿಂದ 3 ಸಾವಿರ ಹೆಕ್ಟೇರ್ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. 2020 ರಲ್ಲಿ 17000 ಹೆಕ್ಟೇರ್, 2021 ರಲ್ಲಿ 21000 ಹೆಕ್ಟೇರ್ 2022 ರಲ್ಲಿ 25000 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ.

ರಾಜ್ಯದಲ್ಲಿ 36.371 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿಯೇ 25.575 ಹೆಕ್ಟರ್ ಪ್ರದೇಶದಲ್ಲಿಯೇ ದ್ರಾಕ್ಷಿ ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ದ್ರಾಕ್ಷಿಯಲ್ಲಿ ಶೇಕಡಾ 70.32ರಷ್ಟು ದ್ರಾಕ್ಷಿ ವಿಜಯಪುರದಲ್ಲಿಯೇ ಬೆಳೆಯಲಾಗುತ್ತಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಪ್ರದೇಶ ಹೆಚ್ಚಳವೂ ತೀವ್ರ ಪರಿಣಾಮ ಬೀರುತ್ತಿದೆ.

ಪ್ರಸಕ್ತ ವರ್ಷದಲ್ಲಿ ಹಸಿ ಹಾಗೂ ಒಣ ದ್ರಾಕ್ಷಿ ಸವಾಲು: ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಗಾರರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದು ಖುಷಿಯ ವಿಚಾರವಾಗಿದೆ. ಆದರೆ ಈ ಬಾರಿ ಹಸಿ ಹಾಗೂ ಒಣದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಹಸಿ ದ್ರಾಕ್ಷಿಯನ್ನು ಮಾರಾಟಕ್ಕೆ ಮುಂದಾಗಿದ್ದವರಿಗೆ ಸೈಕ್ಲೋನ್ ಶಾಪವಾಗಿ ಕಾಡಿ ಹಸಿ ದ್ರಾಕ್ಷಿ ಬೆಲೆಯನ್ನು ಕುಗ್ಗಿಸಿತ್ತು. ಕಡಿಮೆ ದರಕ್ಕೆ ಹಸಿ ದ್ರಾಕ್ಷಿ ಮಾರಾಟ ಮಾಡಲು ಒಪ್ಪದೇ ಅದನ್ನು ಒಣದ್ರಾಕ್ಷಿ ಮಾಡಲು ರೈತರು ಮುಂದಾದರು.

ಕಾರಣ ಹಸಿ ದ್ರಾಕ್ಷಿ 20 ರಿಂದ 30 ರೂಪಾಯಿಗೆ ಪ್ರತಿ ಕೆಜಿಗೆ ಬೇಡಿಕೆಯಾಗಿದ್ದ ಕಾರಣ ಹಸಿ ದ್ರಾಕ್ಷಿ ಮಾರಾಟ ಮಾಡದೇ ಅದನ್ನು ಒಣ ದ್ರಾಕ್ಷಿ ಮಾಡಲು ಬೆಳೆಗಾರರು ಮುಂದಾದರು. ಆದರೆ ಒಣ ದ್ರಾಕ್ಷಿ ಮಾಡುವಾಗಲೂ ಸಹ 25 ದಿನಗಳ ಕಾಲ ಹಸಿ ದ್ರಾಕ್ಷಿಯನ್ನು ಒಣ ದ್ರಾಕ್ಷಿ ಮಾಡುವ ಪ್ರಕ್ರಿಯೆಗೆ ರ್ಯಾಕ್ ಗಳು ಸಿಗದೇ ಬೆಳೆಗಾರರು ನಷ್ಟವನ್ನು ಅನುಭವಿಸಿದರು. ಹಾಗೂ ಹೀಗೂ ಮಾಡಿ ಒಣದ್ರಾಕ್ಷಿ ಮಾಡಿ ಮಾರಾಟ ಮಾಡಲು ಹೋದರೆ ಮಾರುಕಟ್ಟೆಯನ್ನು ಒಣದ್ರಾಕ್ಷಿಗೆ ಬೆಲೆಯೇ ಇಲ್ಲವಾಗಿದೆ.


ಒಣದ್ರಾಕ್ಷಿ ಸಮಸ್ಯೆ: ಹಸಿ ದ್ರಾಕ್ಷಿಯನ್ನು ಒಣದ್ರಾಕ್ಷಿಯನ್ನಾಗಿ ಮಾಡಿದರೆ ಅದನ್ನು ಕೋಲ್ಡ್ ಸ್ಟೋರೇಜ್ ನಲ್ಲೇ ಇಡಬೇಕು. 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕು. ಜಿಲ್ಲೆಯಲ್ಲಿ ಬಹುತೇಕ ಜನ ದ್ರಾಕ್ಷಿ ಬೆಳೆಗಾರರ ಸ್ವಂತ ಕೋಲ್ಡ್ ಸ್ಟೋರೇಜ್ ಇಲ್ಲಾ. ಸ್ವಂತ ಕೋಲ್ಡ್ ಸ್ಟೋರೇಜ್ ಹೊಂದುವ ಶಕ್ತಿಯೂ ರೈತರಿಗಿಲ್ಲ. ಸಂಘ ಸಂಸ್ಥೆಗಳ ಹಾಗೂ ಖಾಸಗಿ ವ್ಯಕ್ತಿಗಳ ಕೋಲ್ಡ್ ಸ್ಟೋರೇಜ್ ಗಳಲ್ಲಿ ಒಣ ದ್ರಾಕ್ಷಿಯನ್ನು ಇಡಬೇಕಾಗುತ್ತದೆ.

ಒಂದು ಟನ್ ಒಣ ದ್ರಾಕ್ಷಿಗೆ ಪ್ರತಿ ತಿಂಗಳು 500 ರೂಪಾಯಿ ಶುಲ್ಕವನ್ನು ಭರಿಸಬೇಕು. ಇದು ಒಂದು ರೀತಿಯಲ್ಲಿ ರೈತರಿಗೆ ಹೊರೆಯಾಗುತ್ತದೆ. ಮೊದಲೇ ಒಂದು ಎಕರೆ ದ್ರಾಕ್ಷಿ ಬೆಳೆಯಲು 2 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಿರೋ ರೈತರು ಒಣದ್ರಾಕ್ಷಿಇಡಲು ಮತ್ತೇ ಕೋಲ್ಡ್ ಸ್ಟೋರೇಜ್ ಶುಲ್ಕ ಭರಿಸಲು ಹೈರಾಣಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಾಪಾರಸ್ಥರು ಕಡಿಮೆ ದರಕ್ಕೆ ಒಣದ್ರಾಕ್ಷಿ ಮಾರಾಟಕ್ಕೆ ತೆಗೆದುಕೊಳ್ಳುತ್ತಾರೆ.

ಪಾತಾಳಕ್ಕೆ ಕುಸಿದ ಒಣದ್ರಾಕ್ಷಿ ಬೆಲೆ: ಜಿಲ್ಲೆಯ ಒಣದ್ರಾಕ್ಷಿ ಅಂದರೆ ಸಾಕು ಅದು ಅರಬ್ ದೇಶಗಳ ಹಡಗು ಹತ್ತುತ್ತದೆ. ಬಂಗಾರದ ಬಣ್ಣ ಹಾಗೂ ಹಸಿರು ಏಲಕ್ಕಿ ಬಣ್ಣದ ಜಿಲ್ಲೆಯ ಒಣದ್ರಾಕ್ಷಿಗೆ ಹೆಚ್ಚು ಬೇಡಿಕೆಯಿದೆ. ನಂಬರ್ ಒನ್ ಗುಣಮ್ಟಟದ ಒಣ ದ್ರಾಕ್ಷಿ ಹೆಚ್ಚಾಗಿ ವಿದೇಶಗಳಿಗೆ ರಫ್ತಾಗುತ್ತದೆ. ಈ ವರ್ಷ ಒಣ ದ್ರಾಕ್ಷಿ ಹೆಚ್ಚು ಉತ್ಪಾದನೆಯಾದರೂ ಸಹ ದರವಿಲ್ಲದೇ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ.

ಇದೀಗ ಒಣದ್ರಾಕ್ಷಿ ಬೆಲೆ ಕುಸಿದು ಹೋಗಿದ್ದು ದ್ರಾಕ್ಷಿ ಬೆಳೆಗಾರರು ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ. ಕಳೆದ ಬಾರಿ 150 ರಿಂದ 180 ರೂಪಾಯಿಗೆ ಒಂದು ಕೆಜಿ ಒಣದ್ರಾಕ್ಷಿ ಮಾರಾಟವಾಗಿತ್ತು. ಆದರೆ ಈ ವರ್ಷ ಒಣದ್ರಾಕ್ಷಿ ಬೆಲೆ ಪತಾಳದ ಮುಖ ನೋಡಿದೆ. ಈ ಬಾರಿ 80 ರಿಂದ 110 ರೂಪಾಯಿ ಮಾತ್ರ ಕೆಜಿ ಒಣದ್ರಾಕ್ಷಿ ಮಾರಾಟವಾಗುತ್ತಿದೆ. ಈ ದರಕ್ಕೆ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿಯನ್ನು ಮಾರಾಟ ಮಾಡಲಾಗದೇ ಅದನ್ನು ಶೀತಲಗೃಹದಲ್ಲಿಯೂ ಇಡಲಾಗದೇ ಅಡಗತ್ತರಿಯಲ್ಲಿ ಸಿಲುಕಿದಂತಾಗಿದ್ದಾರೆ. ದ್ರಾಕ್ಷಿ ಬೆಳೆಯನ್ನೇ ನಂಬಿರೋ ನೂರಾರು ರೈತರು ಹಾಗೂ ಸಾವಿರಾರು ಕಾರ್ಮಿಕರು ದ್ರಾಕ್ಷಿ ಬೆಲೆಯ ಕಾರಣ ಬೀದಿಗೆ ಬೀಳುವಂತಾಗಿದೆ ಎಂದು ಮನದಾಳದ ದುಗುಡವನ್ನು ಹೊರ ಹಾಕಿದ್ದಾರೆ.

ದ್ರಾಕ್ಷಿ ಬೆಳೆಗಾರರ ಸಭೆ- ಶಾಲಾ ಮದ್ಯಾಹ್ನದ ಬಿಸಿಯೂಟದಲ್ಲಿ ಒಣದ್ರಾಕ್ಷಿ ವಿತರಿಸಲು ಒತ್ತಾಯ: ಈ ವರ್ಷ ಬೆಲೆ ಕುಸಿತ ಕಂಡಿರುವ ಕಾರಣ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರೋ ಕಾರಣ ದ್ರಾಕ್ಷಿ ಬೆಳೆಗಾರರ ಸಂಘ ಸಭೆ ನಡೆಸಿದೆ. ಸಭೆಯಲ್ಲಿ ದ್ರಾಕ್ಷಿ ಬೆಳೆಗಾರರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಒಣದ್ರಾಕ್ಷಿ ಸೇರಿಸಿ ವಾರಕ್ಕೆ ಒಂದು ದಿನವಾದರೂ ಮಕ್ಕಳಿಗೆ ಕನಿಷ್ಟ 50 ಗ್ರಾಂ ಒಣದ್ರಾಕ್ಷಿ ಸವಿಯಲು ಅವಕಾಶ ನೀಡಬೇಕೆಂದು ಒತ್ತಾಯ ಮಾಡಲಾಯಿತು. ಇದರಿಂದ ಒಣ ದ್ರಾಕ್ಷಿಗೆ ಉತ್ತಮ ದರ ನೀಡಲು ಸಾಧ್ಯವಾಗುತ್ತದೆ. ಈ ಮೂಲಕ ಒಣ ದ್ರಾಕ್ಷಿ ಮಾರಾಟವಾದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗುತ್ತದೆ ಎಂದು ಸಭೆಯಲ್ಲಿ ಮಾತುಗಳು ಕೇಳಿ ಬಂದಿವೆ. ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕೆಂದು ಒತ್ತಾಯಿಸೋ ನಿರ್ಣಯವನ್ನೂ ಸಹ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಕೈಗೊಳ್ಳಲಾಯಿತು. ಶೀಘ್ರ ಸಿಎಂ ಭೇಟಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.



















