AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂತರಿಕವಾಗಿದ್ದ ದೆಹಲಿ ದಂಗಲ್ ಬಹಿರಂಗ: ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ ಎಂಬಿ ಪಾಟೀಲ್​ ಹೇಳಿಕೆ, ಕೈ ಮನೆಯೊಳಗೆ ಬೂದಿ ಮುಚ್ಚಿದ ಕೆಂಡ

ಡಿಕೆ ಶಿವಕುಮಾರ್ ಸಿಎಂ ಆಗುವುದು ಕನಸಿನ‌ ಮಾತಾ? ಅಧಿಕಾರ ಹಂಚಿಕೆ ಆಗುವುದಿಲ್ವಾ? ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿಯೇ ಇರ್ತಾರಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದ್ದು ಎಂಬಿ ಪಾಟೀಲ್ ಹೇಳಿಕೆ. ಅಷ್ಟಕ್ಕೂ ಎಂಬಿಪಿ ಹೇಳಿದ್ದೇನು? ಆ ಹೇಳಿಕೆ ಹಿಂದಿನ ರಾಜಕೀಯ ದಾಳವೇನು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಆಂತರಿಕವಾಗಿದ್ದ ದೆಹಲಿ ದಂಗಲ್ ಬಹಿರಂಗ: ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ ಎಂಬಿ ಪಾಟೀಲ್​ ಹೇಳಿಕೆ, ಕೈ ಮನೆಯೊಳಗೆ ಬೂದಿ ಮುಚ್ಚಿದ ಕೆಂಡ
ಕರ್ನಾಟಕ ಕಾಂಗ್ರೆಸ್
ರಮೇಶ್ ಬಿ. ಜವಳಗೇರಾ
|

Updated on: May 23, 2023 | 12:15 PM

Share

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಕಾಂಗ್ರೆಸ್ (Congress) ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah)) ಹಾಗೂ ಉಪಮುಖ್ಯಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ, ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಿಎಂ ಸ್ಥಾನಕ್ಕೆ ಕಾಂಗ್ರೆಸ್​ನಲ್ಲಿ ದೊಡ್ಡ ಮಟ್ಟದ ಯುದ್ಧವೇ ನಡೆದಿತ್ತು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌(DK Shivakumar) ನಡುವೆ ಸಂಧಾನ ಸಭೆಯ ಬಳಿಕ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿದ್ರೆ, ಡಿ ಕೆ ಶಿವಕುಮಾರ್‌ ಗೆ ಡಿಸಿಎಂ ಸ್ಥಾನವನ್ನ ನೀಡಿತ್ತು. ಮುಖ್ಯಮಂತ್ರಿ ತಮಗೆ ಬೇಕೆಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಘಟಾನುಘಟಿ ನಾಯಕ ಸಂಧಾನಕ್ಕೆ ಬಗ್ಗದ ಡಿಕೆ ಶಿವಕುಮಾರ್ ಸಿಡಿದೆದ್ದು ಸಿಎಂ ಸ್ಥಾನ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದರು. ನಂತರ ಸೋನಿಯಾ ಗಾಂಧಿ ಮಾತಿಗೆ ತಲೆಬಾಗಿದ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿಯಾಗುವುದಕ್ಕೆ ಒಪ್ಪಿಕೊಂಡಿದ್ದರು. ಆದರೂ ಸಹ ಸಿಎಂ ಸ್ಥಾನ ಕೈತಪ್ಪಿತಲ್ಲ ಎನ್ನುವ ಫೀಲ್​ ಇನ್ನೂ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿಗರ ಮನಸ್ಸಿನಲ್ಲಿ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ಮಧ್ಯೆ ಇದೀಗ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಎಂಬಿ ಪಾಟೀಲ್​ ಹೊಸ ಬಾಂಬ್ ಸಿಡಿಸಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದರೊಂದಿಗೆ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ: ಅಧಿಕಾರ ಹಂಚಿಕೆ ಇಲ್ಲ, ಸಿದ್ದರಾಮಯ್ಯ ಪೂರ್ಣವಧಿ ಸಿಎಂ ಆಗಲಿದ್ದಾರೆ; ಎಂಬಿ ಪಾಟೀಲ್

ಹೌದು..ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆಶಿ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ. ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್ ಆಡಿದ ಈ ಮಾತುಗಳು ಡಿಕೆ ಶಿವಕುಮಾರ್​ ಪಾಳಯದಲ್ಲಿ ಬೆಂಕಿ ಬೀಳುವಂತೆ ಮಾಡಿವೆ. ಸೋನಿಯಾ ಗಾಂಧಿ ಮಾತಿಗೆ ಕಟ್ಟುಬಿದ್ದು ಡಿಸಿಎಂ ಪಟ್ಟಕ್ಕೆ ತೃಪ್ತಿಪಟ್ಟಿದ್ದ ಕನಕಪುರ ಬಂಡೆ ಡಿಕೆ ಶಿವಕುಮಾರ್ ಸಿಎಂ ಆಸೆ ಕಮರಿ ಹೋಯ್ತಾ? ಡಿಕೆಶಿಗೆ ಡೆಪ್ಯುಟಿಯೇ ಖಾಯಂ ಎಂಬ ಅನುಮಾನ ಈಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

ಆಂತರಿಕವಾಗಿದ್ದ ದೆಹಲಿ ದಂಗಲ್ ಇದೀಗ ಬಹಿರಂಗ

ದೆಹಲಿಯಲ್ಲಿ ಏನ್ ಮಾತುಕತೆ ಆಯ್ತು ಸಾರ್? ಅಧಿಕಾರ ಹಂಚಿಕೆ ಹೇಗೆ ಸರ್? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಐ ಕಾಂಟ್​ ಡಿಸ್​​ಕ್ಲೋಸ್​ ಇಟ್ ಅಂತಿದ್ದ ಡಿಕೆ ಶಿವಕುಮಾರ್, ಎಷ್ಟೇ ಬಲವಂತ ಮಾಡಿದರೂ ಬಾಯ್ಬಿಟ್ಟಿರಲಿಲ್ಲ. ಈಗ ಸುತ್ತೂರಿನಲ್ಲಿ ಎಂಬಿ ಪಾಟೀಲ್​ ಸಿಡಿಸಿದ ಹೊಸ ಬಾಂಬ್​ ಕೈ ಪಾಳಯವನ್ನೇ ನಡುಗಿಸಿದೆ. ಇನ್ನು 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಎಂಬಿ ಪಾಟೀಲ್ ಬಾಂಬ್​ ಸಿಡಿಸುತ್ತಿದ್ದಂತೆ ಇತ್ತ ಡಿಕೆ ಶಿವಕುಮಾರ್ ಕಣ್ಣು ಕೆಂಪಾಗಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನು ಅಳೆದು ತೂಗಿ ಸಂಪುಟ ರಚನೆಗೆ ಸರ್ಕಸ್ ಮಾಡುತ್ತಿರುವ ಹೈಕಮಾಂಡ್​ಗೂ ಹೊಸ ತಲೆಬಿಸಿ ಶುರುವಾಗಿದೆ.

ಒಟ್ಟಾರೆ ಎಂಬಿ ಪಾಟೀಲ್ ಮಾತುಗಳನ್ನು ಕೇಳಿದರೆ ಡಿಕೆ ಶಿವಕುಮಾರ್ ಸಿಎಂ ಕನಸು ಮರಿಚೀಕೆ ಅನಿಸತೊಡಗಿದೆ. ಯಾಕಂದ್ರೆ ಸಿಎಂ ಕುರ್ಚಿಗಾಗಿ ನಡೆದ ಜಟಾಪಟಿ ಇಡೀ ರಾಜ್ಯದ ಜನ ನೋಡಿದ್ದಾರೆ. ಕೊನೆಗೆ ಈ ಹಗ್ಗಜಗ್ಗಾಟ ಫಿಪ್ಟಿ ಫಿಫ್ಟಿ ಸೂತ್ರದೊಂದಿಗೆ ಸುಖಾಂತ್ಯವಾಗಿದೆ ಅಂತಲೇ ಎಲ್ಲರೂ ಭಾವಿಸಿದ್ದರಯ. ಆದ್ರೆ ಇದಕ್ಕೆ ಸಚಿವ ಎಂ.ಬಿ ಪಾಟೀಲ್ ಹೊಸ ಟ್ವಿಸ್ಟ್​ ನೀಡಿದ್ದು, ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದೆ. ಹೀಗಾಗಿ ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.