ಕಾಂಗ್ರೆಸ್, ರಾಹುಲ್ ಗಾಂಧಿ​ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ: ಸಿಟಿ ರವಿ ವ್ಯಂಗ್ಯ

| Updated By: Ganapathi Sharma

Updated on: Apr 16, 2024 | 2:58 PM

ಹಲವು ಬಾರಿ ಕಾಂಗ್ರೆಸ್ ಮತ್ತು ಪಾಕಿಸ್ತಾನಕ್ಕೆ ಲಿಂಕ್ ಮಾಡಿ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸಿಟಿ ರವಿ ಮತ್ತೆ ಅದೇ ರೀತಿ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್​​ಗೆ ಇನ್ನು ಭಾರತದ ಹಿಂದೂ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ನೆಲೆ ಇರುವುದಿಲ್ಲ. ಅದಕ್ಕೆ ಅವರು ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್, ರಾಹುಲ್ ಗಾಂಧಿ​ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ: ಸಿಟಿ ರವಿ ವ್ಯಂಗ್ಯ
ಸಿಟಿ ರವಿ
Follow us on

ವಿಜಯಪುರ, ಏಪ್ರಿಲ್ 16: ಕಾಂಗ್ರೆಸ್‌ಗೆ ಭಾರತದಲ್ಲಿ, ಮುಖ್ಯವಾಗಿ ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಯಾವುದೇ ಬೆಂಬಲವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಬೆಂಬಲವನ್ನು ಹುಡುಕುವುದನ್ನು ಬಿಟ್ಟು ಆ ಪಕ್ಷಕ್ಕೆ ಬೇರೆ ದಾರಿಯಿಲ್ಲ. ಹೀಗಾಗಿ ಕಾಂಗ್ರೆಸ್ (Congress) ಗೆದ್ದಾಗ ಕೆಲವರು ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುತ್ತಾರೆ ಎಂದು ಬಿಜೆಪಿ (BJP) ನಾಯಕ ಸಿಟಿ ರವಿ (CT Ravi) ವ್ಯಂಗ್ಯವಾಡಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ನೆಲೆ ಹುಡುಕಿಕೊಳ್ಳಲಿ ಎಂಬುದಾಗಿ ಸಲಹೆ ನೀಡುವೆ ಎಂದರು.

ಸಾಂಪ್ರದಾಯಿಕ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗಿದ್ದಾರೆ. ಅಲ್ಲಿ ಶೇ 52 ರಷ್ಟು ಮುಸ್ಲಿಂ ಜನಸಂಖ್ಯೆ ಇರುವುದರಿಂದ ರಾಹುಲ್ ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಬಳಸುವುದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಗೆ ಬರುತ್ತಿದ್ದ ಮತಗಳನ್ನೂ ಕಳೆದುಕೊಳ್ಳುತ್ತದೆ ಎಂದು ರವಿ ಟೀಕಿಸಿದರು.

ಕಾಂಗ್ರೆಸ್‌ಗೆ ಯಾವುದೇ ದೂರದೃಷ್ಟಿ ಇಲ್ಲ ಅಥವಾ ಬಿಜೆಪಿಯಂತೆ ಸೂಕ್ತ ಪ್ರಧಾನಿ ಅಭ್ಯರ್ಥಿಯನ್ನು ಹೊಂದಿಲ್ಲ. ಆದ್ದರಿಂದ, ನಿಮ್ಮ (ಇಂಡಿಯಾ ಮೈತ್ರಿಕೂಟ) ಪ್ರಧಾನಿ ಅಭ್ಯರ್ಥಿ ಯಾರು ಎಂಬುದಾಗಿ ಜನರು ಕೇಳುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದರು.

ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪರನ್ನು ಪಕ್ಷದಿಂದ ಅಮಾನತು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಪ್ರತಿಕ್ರಿಯಿಸುವ ಅಧಿಕಾರ ನನಗಿಲ್ಲ. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಮರುಪರಿಶೀಲಿಸಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಈಶ್ವರಪ್ಪ ಅವರಿಗೆ ಮನವಿ ಮಾಡಿದರು. ಬಿಜೆಪಿ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದರು.

ಅಸಮಾಧಾನಿತರ ಬಗ್ಗೆ ಪ್ರತಿಕ್ರಿಯಿಸಿ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಹೀಗಾಗಿ ಕೆಲವರ ಅಸಮಾಧಾನವನ್ನು ಶಮನಗೊಳಿಸಲಾಗುವುದು ಎಂದರು.

ದೇವೇಗೌಡರ ಸಭೆಯಲ್ಲಿ ನಡೆದ ಘಟನೆಗೆ ಖಂಡನೆ

ತುಮುಕೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಎದುರು ಮಹಿಳಾ ಕಾಂಗ್ರೆಸ್ಸಿಗರು ದಿಕ್ಕಾರ ಕೂಗಿರುವ ಬಗ್ಗೆ ಪ್ರತಿಕ್ರಿಯಿಸಿದ ರವಿ, ಇದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ. ಮೈಸೂರಿನಲ್ಲಿ ದೇವೇಗೌಡರ ಗರ್ಜನೆ ಕೇಳಿದ ಕಾಂಗ್ರೆಸ್ ಕಾರ್ಯಕರ್ತರನ್ನು‌ ಛೂ ಬಿಟ್ಟಿದೆ ಎಂದರು.

ಇದನ್ನೂ ಓದಿ: ದೇವೇಗೌಡರ ಸಭೆಗೆ ನುಗ್ಗಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ: ಚುನಾವಣಾ ಆಯೋಗಕ್ಕೆ ಜೆಡಿಎಸ್- ಬಿಜೆಪಿ ದೂರು

ಗ್ಯಾರಂಟಿ ಯೋಜನೆಯಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಸಿಟಿ ರವಿ ನಿರಾಕರಿಸಿದರು. ಕುಮಾರಸ್ವಾಮಿ ಅವರು ಈಗಾಗಲೇ ತಮ್ಮ ಮಾತನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ