ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವು
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನೊಬ್ಬನ ಶವ ಛಿದ್ರವಾಗಿದೆ.
ವಿಜಯಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನೊಬ್ಬನ ಶವ ಛಿದ್ರವಾಗಿದೆ. ಮತ್ತೋರ್ವ ಬೈಕ್ ಸವಾರನ ಶವ ರಸ್ತೆ ಬದಿಯ ಮುಳ್ಳುಗಂಟಿಯಲ್ಲಿ ಬಿದ್ದಿದೆ. ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಬೈಕ್ ಅಲ್ಲಿಯೇ ಸಿಲುಕಿಕೊಂಡಿದೆ. ಮೃತ ಬೈಕ್ ಸವಾರರ ಹೆಸರು-ವಿಳಾಸ ಇನ್ನೂ ಮತ್ತೆಯಾಗಿಲ್ಲ. ಸರ್ಕಾರಿ ಬಸ್ ವಿಜಯಪುರದಿಂದ ತಾಳಿಕೋಟೆ ಕಡೆಗೆ ಹೊರಟಿತ್ತು. ಬೈಕ್ ಸವಾರರು ಬಸವನಬಾಗೇವಾಡಿಯಿಂದ ಮನಗೂಳಿಯತ್ತ ಹೊರಟಿದ್ದರು. ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುರಿಗಳ ಮೈತೊಳೆಯಲು ಹೋಗಿದ್ದ ದಂಪತಿ ನೀರುಪಾಲು; ಮುಳುಗುತ್ತಿದ್ದ ಪತ್ನಿಯ ರಕ್ಷಿಸಲು ಹೋಗಿ ಪತಿಯೂ ಸಾವು ರಾಮನಗರ: ರಾಮನಗರದ ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿಯ ಕೆರೆಯಲ್ಲಿ ಕುರಿಗಳ ಮೈತೊಳೆಯಲು ಹೋಗಿದ್ದ ದಂಪತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೂಡ್ಲೂರಿನ ವೆಂಕಟೇಶ್(48) ಮತ್ತು ಪಾರ್ವತಮ್ಮ(42) ದುರ್ದೃವಿ ದಂಪತಿ. ಮುಳುಗುತ್ತಿದ್ದ ಪತ್ನಿ ಪಾರ್ವತಮ್ಮ ಅವರನ್ನು ರಕ್ಷಿಸಲು ಹೋಗಿ ಪತಿ ವೆಂಕಟೇಶ್ ಅವರೂ ಸಾವನ್ನಪ್ಪಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮರಣೋತ್ತರ ಪರೀಕ್ಷೆಗೆಂದು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ. ತುಮಕೂರು ತಾಲೂಕಿನ ಚನ್ನೇನಹಳ್ಳಿ ಗ್ರಾಮದ ಲೆಕ್ಕಾಧಿಕಾರಿ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ವಿ.ಎ. ನಟರಾಜು ಎಸಿಬಿ ಬಲೆಗೆ ಬಿದ್ದ ಲೆಕ್ಕಾಧಿಕಾರಿ. ಜಮೀನೊಂದರ ಪಹಣಿಯಲ್ಲಿ ವಿಸ್ತೀರ್ಣ ತಪ್ಪಾಗಿದ್ದು, ಸರಿಪಡಿಸಲು ಕೋರಿ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಲೆಕ್ಕಾಧಿಕಾರಿ ಪಹಣಿ ವಿಸ್ತೀರ್ಣ ಸರಿಪಡಿಸಲು 20 ಸಾವಿರ ರೂಪಾಯಿ ಲಂಚ ಕೇಳಿದ್ದ. ಮುಂಗಡವಾಗಿ 5 ಸಾವಿರ ರೂಪಾಯಿ ಪಡೆದಿದ್ದ ಲೆಕ್ಕಾಧಿಕಾರಿ, 15 ಸಾವಿರ ರೂ ಲಂಚ ಹಣ ಸ್ವೀಕರಿಸಿರುವಾಗ ನೇರವಾಗಿ ಸಿಕ್ಕಿಬಿದ್ದಿದ್ದಾರೆ. ತುಮಕೂರು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನ ದಸ್ತಗಿರಿ ಮಾಡಿ, ಲಂಚದ ಹಣ ವಶಕ್ಕೆ ಪಡೆದಿದ್ದಾರೆ.
ತುಳಜಾಪುರಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು ಮರಳಿ ಬರುವಾಗ ಅಪಘಾತ: ಕಲಬುರಗಿ: ಖಣಿ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಒಬ್ಬರು ಅಸುನೀಗಿದ್ದು, ಮೂವರಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ನಿವಾಸಿ ಶರಬಣ್ಣ(30) ಮೃತರು. ಗಾಯಗೊಂಡ ಮೂವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಳಜಾಪುರಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು ಮರಳಿ ತಮ್ಮೂರಿಗೆ ಬರುವಾಗ ಘಟನೆ ನಡೆದಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅವಿಶ್ವಾಸ ನಿರ್ಣಯ ಮತದಾನ ಮೊದಲು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಎಂದಿಗೂ ಸೋಲೊಪ್ಪಲಾರೆ: ಇಮ್ರಾನ್ ಖಾನ್