Siddeshwara Swamiji Obituary: ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿಯವರ ಹುಟ್ಟು, ಬಾಲ್ಯ, ಜೀವನ ಸಾಧನೆ

Siddeshwara Swamiji Death: ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾಗಿದ್ದರು.

Siddeshwara Swamiji Obituary: ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿಯವರ ಹುಟ್ಟು, ಬಾಲ್ಯ, ಜೀವನ ಸಾಧನೆ
ವಿಜಯಪುರ ಸಿದ್ದೇಶ್ವರ ಸ್ವಾಮಿ
Follow us
| Updated By: ವಿವೇಕ ಬಿರಾದಾರ

Updated on:Jan 02, 2023 | 10:37 PM

ಆಧ್ಯಾತ್ಮಿಕ ಪ್ರವಚನಕಾರ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದವರು. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತವೆ ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. 1941ರ ಅಕ್ಟೋಬರ್ 24ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದವರು. ಇವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ. ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದಾರೆ. ಮಾತ್ರವಲ್ಲದೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಪುಣರೂ ಆಗಿದ್ದರು.

ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದೆ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮದ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೂ ಪ್ರವಚನ ನೀಡುತ್ತಿದ್ದರು. ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹೀಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಸಿದ್ದೇಶ್ವರರೂ ಒಬ್ಬರಾಗಿದ್ದರು.

ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರುತ್ತಿದ್ದಂತೆ ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ತಲ್ಲೀನರಾಗಿಬಿಡುತ್ತಾರೆ. ಎಲ್ಲೇ ಪ್ರವಚನ ಕಾರ್ಯಕ್ರಮ ಇದ್ದರೂ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಪ್ರವಚನದಲ್ಲಿ ಅವರು ಬಳಸುವ ಭಾಷೆ, ಧಾಟಿ, ಪ್ರದಪ್ರಯೋಗ, ಉದಾಹಣೆಗಳ ಸಹಿತ ವಿವರಿಸುವುದು ಅದ್ಭುತವಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಅನಿಸಿಕೆಗಳು ಅನಕ್ಷರಸ್ಥರಿಗೂ ಚೆನ್ನಾಗಿ ಅರ್ಥೈಸಿಕೊಳ್ಳಬಹುದು. ಅವರು ಅರ್ಥಮಾಡಿಕೊಳ್ಳುವ ಮತ್ತು ಆನಂದಿಸುವ ರೀತಿಯಲ್ಲಿ ಬಹಳ ಕಠಿಣ ವಿಷಯಗಳನ್ನು ಬೋಧಿಸುತ್ತಿದ್ದರು.

ಒಲಿದು ಬಂದ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಿದ್ದ ಸ್ವಾಮೀಜಿ

ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಲಿದುಬಂದಿತ್ತು. ಆದರೆ ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದರು. ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಅನ್ಯಥಾ ಭಾವಿಸದಿರಿ ಎಂದು ಹೇಳಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದರು.

Published On - 10:20 pm, Mon, 2 January 23