ಕಾವೇರಿಯಂತೆ ಕೃಷ್ಣಾ ಮುನ್ನೆಲೆ: ಕೃಷ್ಣಾ ನದಿ ನೀರಿನ ಮೇಲೆ ಬಿತ್ತು ತೆಲಂಗಾಣದ ಕಣ್ಣು; ಸಿಡಿದೆದ್ದ ರೈತರು

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಕಾವೇರಿ ಕೊಳ್ಳದ ರೈತರಿಗೆ ಬರೆ ಹಾಕಿದಂತಾಗಿದೆ. ಈ ಬೆನ್ನಲ್ಲೇ ಇತ್ತ ಉತ್ತರದಲ್ಲಿ ಕೃಷ್ಣಾ ನದಿ ನೀರಿನ ಮೇಲೆ ನೆರೆಯ ತೆಲಂಗಾಣ ಸರ್ಕಾರ ಕಣ್ಣು ಹಾಕಿದೆ. ಈ ಕುರಿತಾಗಿ ತೆಲಂಗಾಣದ ಸಚಿವರ ಪಡೆ ಸಿಎಂ ಡಿಕೆ ಶಿವಕುಮಾರ್​​ರನ್ನ ಭೇಟಿ ಮಾಡಿದೆ.

ಕಾವೇರಿಯಂತೆ ಕೃಷ್ಣಾ ಮುನ್ನೆಲೆ: ಕೃಷ್ಣಾ ನದಿ ನೀರಿನ ಮೇಲೆ ಬಿತ್ತು ತೆಲಂಗಾಣದ ಕಣ್ಣು; ಸಿಡಿದೆದ್ದ ರೈತರು
ಕೃಷ್ಣಾ ನದಿ
Image Credit source: tv9 kannada
Edited By:

Updated on: Sep 25, 2026 | 7:56 PM

ವಿಜಯಪುರ, ಸೆಪ್ಟೆಂಬರ್​​ 25: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಒಂದೆಡೆಯಾದರೆ, ಇತ್ತ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿ ನೀರಿನ ಮೇಲೆ ನೆರೆಯ ತೆಲಂಗಾಣ ಸರ್ಕಾರ ಕಣ್ಣಿಟ್ಟಿದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ತೆಲಂಗಾಣಕ್ಕೆ ನೀರು ಬಿಡಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ವಿಜಯಪುರ ಜಿಲ್ಲೆಯಲ್ಲಿ ರೈತರಿಂದ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ತೆಲಂಗಾಣ ಸಚಿವರ ನಿಯೋಗ

ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಜನರ ಜೀವನಾಡಿ. ಈ ಬಾರಿ ಬರದ ಕಾರಣ ಕಾವೇರಿ, ಕೃಷ್ಣೆ ಭಾಗಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ಇದರ ಮಧ್ಯೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇತ್ತ ಕೃಷ್ಣಾ ನದಿ ನೀರಿನ ಮೇಲೆ ನೆರೆಯ ತೆಲಂಗಾಣ ಸರ್ಕಾರ ಕಣ್ಣು ಹಾಕಿದೆ. ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್ಸಾಗರ್ ಯೋಜನೆಗಳ ವ್ಯಾಪ್ತಿಯ ಸುಮಾರು 5.5 ಲಕ್ಷ ಎಕರೆ ಬೆಳೆಗಳಿಗೆ ನೀರಿನ ಅಗತ್ಯವಿದೆ ಎಂಬ ಅಹವಾಲನ್ನು ಹೊತ್ತು ಬಂದ ತೆಲಂಗಾಣದ ಸಚಿವರಾದ ಜುಪಲ್ಲಿ ಕೃಷ್ಣರಾವ್, ವಕಿತಿ ಶ್ರೀಹರಿ ಸೇರಿದಂತೆ ಶಾಸಕರ ನಿಯೋಗ ಕಳೆದ ಸೆಪ್ಟೆಂಬರ್ 23ರಂದು ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್​​ರನ್ನ ಭೇಟಿ ಮಾಡಿದೆ.

ಡಿಸಿ ಕಚೇರಿ ಎದುರು ರೈತರ ಧರಣಿ

ಜುರಾಲಾ ಜಲಾಶಯಕ್ಕೆ ಕರ್ನಾಟಕದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಿಂದ ನೀರು ಹರಿಸುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಡಿಕೆ ಶಿವಕುಮಾರ್​ ಅಧಿಕಾರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ನೀರು ಬಿಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಲಭ್ಯವಿರುವ ನೀರಿನ ಪರಿಸ್ಥಿತಿ ಹಾಗೂ ಕರ್ನಾಟಕದ ಅಗತ್ಯವನ್ನೂ ಪರಿಗಣಿಸಿ ಸುಮಾರು 10 ದಿನಗಳ ಕಾಲ ವಾರಾಬಂದಿ ಮಾದರಿಯಲ್ಲಿ ನೀರು ಬಿಡುವ ಸೂಚನೆ ಅಧಿಕಾರಿಗಳಿಗೆ ಸಿಎಂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದಕ್ಕೆ ವಿಜಯಪುರ ಜಿಲ್ಲಾ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆಲಮಟ್ಟಿ ಹಾಗೂ ಬಸವ ಸಾಗರ ಜಲಾಶಯಗಳಿಂದ ಯಾವುದೆ ಕಾರಣಕ್ಕೂ ತೆಲಂಗಾಣಕ್ಕೆ ನೀರು ಬಿಡಬಾರದೆಂದು ಡಿಸಿ ಕಚೇರಿ ಎದುರಿ ಪ್ರತಿಭಟನೆ ಮಾಡಿದರು.

ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ, ರಿಟ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ತೆಲಂಗಾಣಕ್ಕೆ ನಿತ್ಯ 5000 ಕ್ಯೂಸೆಕ್ ನೀರು ಬಿಡಬೇಕೆಂಬ ಮನವಿಯನ್ನು ಸರ್ಕಾರ ಪರಿಗಣಿಸಬಾರದೆಂದು ರೈತರು ಆಗ್ರಹಿಸಿದ್ದಾರೆ. ಈ ಬಾರಿ ಬರದ ಕಾರಣ ಕಾವೇರಿ ಹಾಗೂ ಕೃಷ್ಣಾ ಕೊಳ್ಳ ಭರ್ತಿಯಾಗಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಮಳೆಯಾದ ಕಾರಣ ಆಲಮಟ್ಟಿ ಡ್ಯಾಂ ಭರ್ತಿಯಾಗಿದೆ. ಜಿಲ್ಲೆಯಲ್ಲಿ ಬರಗಾಲವಿದ್ದು, ಜಿಲ್ಲೆಯ ಕೆರೆ, ಹಳ್ಳಗಳಿಗೆ ನೀರು ಬಿಡಬೇಕಿದೆ. ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿನ ಲಭ್ಯತೆ ನೋಡಿಕೊಳ್ಳಬೇಕಿದೆ.

ರಾಜಕೀಯಕ್ಕಾಗಿ ನೀರು ಬಿಡದಂತೆ ರೈತರು ಆಗ್ರಹ

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಇಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣದಿಂದ ರಾಜಕೀಯಕ್ಕಾಗಿ ನೀರು ಬಿಡಬಾರದು ಎಂದು ಒತ್ತಾಯಿಸಿದರು. ಮಾನವೀಯತೆಯ ಆಧಾರದ ಮೇಲೆ ನೀರು ಕೇಳುತ್ತಿರುವ ತೆಲಂಗಾಣದವರು ಮೊದಲು ತಾವು ಮಾನವೀಯತೆಯನ್ನು ಬೆಳೆಸಿಕೊಳ್ಳಲಿ, ಕೃಷ್ಣಾ ನ್ಯಾಯಾಧಿಕರಣದಲ್ಲಿ ಆಲಮಟ್ಟಿ ಡ್ಯಾಂನ್ನು 519.60 ಮೀಟರ್​ನಿಂದ 524 ಮೀಟರ್ ಎತ್ತರ ಮಾಡಬೇಕೆಂದು ಆದೇಶ ನೀಡಿದೆ. ಆಲಮಟ್ಟಿ ಡ್ಯಾಂ ಎತ್ತರ ವಿಚಾರದಲ್ಲಿ ವಿರೋಧಿಸಿ ನ್ಯಾಯಾಲಯದ ಮಟ್ಟಿಲು ಏರಿದ್ದೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರ್ಕಾರಗಳು. ಇದೀಗ ಮಾನವೀಯತೆ ಮಾತನಾಡಿ ನೀರು ಕೇಳುತ್ತಿದ್ಧಾರೆ. ಅದೇ ಮಾನವೀತೆ ಮೇಲೆ ಆಲಮಟ್ಟಿ ಡ್ಯಾಂ ಎತ್ತರಕ್ಕೆ ಹಾಕಿರುವ ವ್ಯಾಜ್ಯವನ್ನು ಹಿಂಪಡೆದು ನೀರು ಕೇಳಲಿ ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಇತ್ತ ನೀರಿಗಾಗಿ ರೈತರು ಪರದಾಟ: ಅತ್ತ ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು

ಯಾದಗಿರಿಯ ಬಸವ ಸಾಗರದಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಹಾಗಾಗಿ ಆಲಮಟ್ಟಿ ಡ್ಯಾಂನಿಂದ ಬಸವ ಸಾಗರಕ್ಕೆ ನೀರು ಬಿಡಬೇಕಾಗುತ್ತದೆ. ಮೊದಲೇ ನಮ್ಮಲ್ಲೇ ಬರವಿದ್ದು, ನೀರಿನ ಬವಣೆಯಿದೆ. ಯಾವುದೇ ಕಾರಣಕ್ಕೂ ತೆಲಂಗಾಣಕ್ಕೆ ನೀರು ಬಿಡಬಾರದು. ಬಿಟ್ಟರೆ ಉಗ್ರ ಹೋರಾಟ ಮಾಡುತ್ತೇವೆಂದು ಜಿಲ್ಲೆಯ ರೈತರು, ಸಂಘಟನೆಗಳು ಎಚ್ಚರಿಕೆ ನೀಡಿವೆ. ಸರ್ಕಾರ ಯಾವ ತೀರ್ಮಾನ ಮಾಡುತ್ತದೆ ಎಂದು ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us