ಸರ್ಕಾರ ಬದಲಾದರೂ ಸಂಕಷ್ಟ ತಪ್ಪಿಲ್ಲ: ವಿಜಯಪುರದಲ್ಲಿ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರ ಗುತ್ತಿಗೆದಾರರಿಗೆ ಮೋಸ ಮಾಡಿದೆ. ಗುತ್ತಿಗೆ ಕಾಮಗಾರಿ ಟೆಂಡರ್ಗೆ ಭರಿಸಿದ್ದ ಇಎಂಡಿ ಹಣ ವಾಪಸ್ ನೀಡಿ ಎಂದು ವಿಜಯಪುರದ ಕೆಬಿಜೆಎನ್ಎಲ್ ಮುಖ್ಯ ಇಂಜಿನೀಯರ್ ಕಚೇರಿ ಬಳಿ ಕೃಷ್ಣಾ ತೀರದ ಗುತ್ತಿಗೆದಾರರ ಸಂಘ ಸದಸ್ಯರು ಪ್ರತಭಟನೆ ನಡೆಸಿದರು.
ವಿಜಯಪುರ, ಜೂನ್ 21: ಕಳೆದ 2023 ರ ವಿಧಾನಸಭಾ ಚುನಾವಣೆಗೂ ಮುನ್ನ ಗುತ್ತಿಗೆದಾರರಿಂದ (Contractors) ಬಿಜೆಪಿ (BJP) ಸರ್ಕಾರ ಕಮೀಷನ್ ಪಡೆಯುತ್ತಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿತ್ತು. ಗುತ್ತಿಗೆದಾರರ ಬಾಕಿ ಹಣವನ್ನು ನೀಡದೆ ಸತಾಯಿಸುತ್ತದೆ ಎಂದು ಕುಹಕ ಮಾಡಿತ್ತು. ಗುತ್ತಿಗೆದಾರರ ಪರ ವಕಾಲತ್ತು ವಹಿಸಿದ್ದ ಕಾಂಗ್ರೆಸ್ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಗುತ್ತಿಗೆದಾರರ ವಿಚಾರದಲ್ಲಿ ಮೌನ ತಾಳಿದೆ. ನಮ್ಮ ಪಾಲಿಗೆ ಹಿಂದೆ ಬಿಜೆಪಿ ಒಂದು ರೀತಿಯ ಶಾಪವಾಗಿದ್ದರೆ ಈಗ ಕಾಂಗ್ರೆಸ್ ಅದಕ್ಕಿಂತ ದೊಡ್ಡ ಶಾಪವಾಗುತ್ತಿದೆ ಎಂದು ವಿಜಯಪುರ ಜಿಲ್ಲೆಯ ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಕೆಬಿಜೆಎನ್ಎಲ್ ಮುಖ್ಯ ಇಂಜಿನೀಯರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನೀಯರ್ ಕಚೇರಿ ಬಳಿ ಕೃಷ್ಣಾ ತೀರದ ಗುತ್ತಿಗೆದಾರರ ಸಂಘ ಹೋರಾಟ ನಡೆಸಿದೆ. ವಿವಿಧ ಕಾಮಗಾರಿಗಳಿಗೆ ಟೆಂಡರ್ ಹಾಕಲು ಭರಿಸಿದ್ದ ಮುಂಗಡ ಠೇವಣಿ ಹಣ ಮರು ಪಾವತಿ ಮಾಡಬೇಕೆಂದು ಸಣ್ಣ ಗುತ್ತಿಗೆದಾರರು ಒತ್ತಾಯ ಮಾಡಿದ್ದಾರೆ. 2023ರ ವಿಧಾನಸಭಾ ಚುನಾವನೆಗೂ ಮುನ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೆಬಿಜೆಎನ್ಎಲ್ನ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದರು. ಈ ಕಾಮಗಾರಿಗಳಿಗೆ ನೂರಾರು ಗುತ್ತಿಗೆದಾರರು ಟೆಂಡರ್ ನಮೂದು ಮಾಡಿದ್ದರು. ಜೊತೆಗೆ ಇಎಂಡಿ ಹಣ ಅಂದರೆ ಮುಂಗಡ ಪಾವತಿ ಹಣವನ್ನು ಸಹ ಭರಿಸಿದ್ದರು. ಇದೇ ವೇಳೆ ವಿಧಾನಸಭೆಗೆ ಚುನಾವಣೆ ಘೋಷನೆಯಾದ ಕಾರಣ ನೀತಿ ಸಂಹಿತೆ ಕಾರಣ ಕಾಮಗಾರಿಗಳ ಟೆಂಡರ್ ಓಪನ್ ಮಾಡಲಿಲ್ಲ.
ನಂತರ ಕಾಂಗ್ರೆಸ್ ಸರ್ಕಾರ ಆಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಕೈ ಪಕ್ಷದವರು ಆಧಿಕಾರ ಹಿಡಿದು ಒಂದು ವರ್ಷದ ಮೇಲಾದರೂ ಕೆಬಿಜೆಎನ್ಎಲ್ ಮೂಲಕ ಕೆರೆದಿದ್ದ ಟೆಂಡರ್ಗಳನ್ನು ಓಪನ್ ಸಹ ಮಾಡಿಲ್ಲ. ಯಾರಿಗೆ ಟೆಂಡರ್ ಸಿಕ್ಕಿದೆ ಎಂಬುದನ್ನೂ ಹೇಳಿಲ್ಲ. ಜೊತೆಗೆ ಟೆಂಡರ್ಗೆ ಇಎಂಡಿ ಹಣ ಭರಿಸಿದವರ ಹಣವನ್ನೂ ವಾಪಸ್ ನೀಡಿಲ್ಲ. ಕೆಬಿಜೆಎನ್ಎಲ್ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಇಲ್ಲಿಯ ಸಣ್ಣ ಗುತ್ತಿಗೆದಾರರು ಒಟ್ಟು 18 ಕೋಟಿ ರೂಪಾಯಿಗಳನ್ನು ಇಎಂಡಿ ರೂಪದಲ್ಲಿ ಭರಸಿದ್ದಾರೆ. ಇಎಂಡಿ ಹಣ ಮರು ಪಾವತಿಯಾಗದ ಕಾರಣ ಸಮಸ್ಯೆಗೀಡಾಡ ಸಣ್ಣ ಗುತ್ತಿಗೆದಾರರು ಕೆಬಿಜೆಎನ್ಎಲ್ ಚೀಫ್ ಇಂಜಿನೀಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮಹಾರಾಷ್ಟ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್
ಇಷ್ಟೇಯಲ್ಲ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆಯಲಾಗಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲ ಕಾಮಗಾರಿಗಳ ಟೆಂಡರ್ಗಳನ್ನು ತೆರದಿಲ್ಲ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ ಹಿಂದಿನ ಟೆಂಡರ್ ತೆರೆಯದೇ ಹಾಗೇ ಇಟ್ಟಿದೆ. ಹೊಸ ಕೆಲಸ ಕಾಮಗಾರಿಗಳನ್ನು ಸಹ ಆಹ್ವಾನ ಮಾಡಿಲ್ಲ. ಇದು ಕೆಬಿಜೆಎನ್ಎಲ್ನ ಸಣ್ಣ ಗುತ್ತಿಗೆದಾರರಿಗೆ ಬಿಸಿ ತುಪ್ಪವಾಗಿದೆ. ಬಿಜೆಪಿ ಸರ್ಕಾರದ ಆವಧಿಯಲ್ಲಿ ಟೆಂಡರ್ ಹಾಕಲು ಸಾಲ ಮಾಡಿ 18 ಕೋಟಿ ರೂಪಾಯಿ ಹಣ ಇಎಂಡಿ ಭರಿಸಿದ್ದೇವೆ.
“ಆದರೆ ಒಂದೂವರೆ ವರ್ಷದ ಮೇಲಾದರೂ ಇಎಂಡಿ ಹಣ ವಾಪಸ್ ನೀಡಿಲ್ಲ. ನಾವು ಮಾಡಿದ ಸಾಲದ ಬಡ್ಡಿಯನ್ನು ಕಟ್ಟುತ್ತಾ ಬರುವಂತಾಗಿದೆ. ಮಾಡಿದ ಸಾಲ ಇರಲಿ ಬಡ್ಡಿಯನ್ನು ಭರಿಸಲು ಆಗುತ್ತಿಲ್ಲ. 18 ಕೋಟಿ ರೂಪಾಯಿ ಬಡ್ಡಿಯನ್ನು ಕಟ್ಟಲು ಸಮಸ್ಯೆಯಾಗುತ್ತಿದೆ. ನಮ್ಮ ಮಕ್ಕಳ ಶೈಕ್ಷಣಿಕ ಶುಲ್ಕವನ್ನೂ ಭರಿಸಲು ಆಗುತ್ತಿಲ್ಲ” ಎಂದು ಹೋರಾಟ ನಿರತ ಗುತ್ತಿಗೆದಾರರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಜೊತೆಗೆ ಹೊಸ ಗುತ್ತಿಗೆ ಕಾಮಗಾರಿಗಳಿಲ್ಲ. ಆಲಮಟ್ಟಿ ಆಣೆಕಟ್ಟುಗಾಗಿ ಮನೆ, ಊರುಕೇರಿ, ಜಮೀನುಗಳನ್ನು ಕಳೆದುಕೊಂಡು ಇಲ್ಲಿಯೇ ಸಣ್ಣ ಪುಟ್ಟ ಗುತ್ತಿಗೆ ಕಾಮಗಾರಿಗಳನ್ನು ಮಾಡಿಕೊಂಡು ಜೀವನ ಮಾಡುತ್ತಾ ಬಂದಿದ್ದೇವೆ. ಈಗ, ನಮಗೆ ಮಾಡಲೂ ಸಹ ಕೆಲಸ ಇಲ್ಲವಾಗಿದೆ. ದಕ್ಷಿಣ ಭಾಗದ ಕಾವೇರಿ ಜಲ ನಿಗಮದ ಎಲ್ಲ ಕೆಲಸ ಕಾಮಗಾರಿಗಳಿಗೆ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಹಣ ಹಾಗೂ ಕೆಲಸ ಕಾಮಗಾರಿಗಳ ಗುತ್ತಿಗೆ ನೀಡಿದ್ದಾರೆ.
ಆದರೆ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಹಣ ನೀಡದೇ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇದು ಅನ್ಯಾಯವಾಗಿದೆ. 2013 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಆಧಿಕಾರ ಪಡೆದಿದ್ದರು, 2023 ರಲ್ಲಿ ಕೃಷ್ಣಾ ಹಾಗೂ ಕಾವೇರಿ ನದಿಗಳ ನೀರಾವರಿ ಯೋಜನೆಗಳ ಬಗ್ಗೆಯೆ ಭರವಸೆ ನೀಡಿ ಆಧಿಕಾರ ಪಡೆದಿದ್ದಾರೆ. ಆದರೆ ಕೃಷ್ಣಾ ಭಾಗ್ಯ ಜಲ ನಿಗಮದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ಇಷ್ಟೆಲ್ಲ ಗಂಭೀರವಾದ ಹೋರಾಟ ನಡೆಯುತ್ತಿದ್ದರೂ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಇಂಜಿನೀಯರ್ ಇತ್ತ ಗಮನ ಹರಿಸಲ್ಲ. ಸಣ್ಣ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಹಾಗೂ ಅವರು ಭರಿಸಿರುವ ಮುಂಗಡ ಠೇವಣಿ ಹಣದ ಮರು ಪಾವತಿ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ.
ಸರ್ಕಾರ ಕೃಷ್ಣಾ ತೀರದ ಗುತ್ತಿಗೆದಾರರ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ. ಹೊಸ ಕಾಮಗಾರಿ ವಿಚಾರ ಬಿಟ್ಟರೂ, ಹಳೆಯ ಕಾಮಗಾರಿಗಳಿಗೆ ಗುತ್ತಿಗೆದಾರರು ಭರಿಸಿದ್ದ ಮುಂಗಡ ಠೇವಣಿ ಹಣವನ್ನಾದರೂ ಮರು ಪಾವತಿ ಮಾಡಬೇಕಿದೆ. ಇಲ್ಲವಾದರೆ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ