
ವಿಜಯಪುರ, ಮಾರ್ಚ್ 22: ಯುಗಾದಿ ಅಮಾವಾಸ್ಯೆಯಿಂದ 5 ದಿನಗಳ ಕಾಲ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ಯಾತೀತವಾಗಿ ನಡೆಯುವ ಜಾತ್ರೆಯಲ್ಲಿ ಸಾವಿರಾರು ಜನರನ್ನು ಕಾಣಬಹುದು. ಜಾತ್ರೆಯ ಕೊನೆಯ ದಿನ ಮಠದ ಪೀಠಾಧಿಪತಿಗಳು ನುಡಿಯುವ ಭವಿಷ್ಯವಾಣಿ (Bhavishyavani) ಎಂದಿಗೂ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ಇಂದು ಪ್ರಸಕ್ತ ವರ್ಷದ ಭವಿಷ್ಯವಾಣಿಯನ್ನು ಶ್ರೀಗಳು ನುಡಿದಿದ್ದಾರೆ.
ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿರೀ ಶ್ರೀ ಗುರುಚಕ್ರವರ್ತಿ ಸದಾಶಿವ ಮಠದ ಜಾತ್ರೆ ಯುಗಾದಿಯಲ್ಲಿ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಜಾತ್ರೆಯ ಕೊನೆಯ ದಿನ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯವಾಣಿಯನ್ನು ನುಡಿಯುತ್ತಾರೆ. ಸ್ವಾಮೀಜಿ ನುಡಿಯೋ ಭವಿಷ್ಯ ಇಂದಿಗೂ ಸುಳ್ಳಾಗಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ವರ್ಷದ ಜಾತ್ರೆಯ ಕೊನೆಯ ದಿನವಾದ ಇಂದು ಮಠದ ಪೀಠಾಧಿಪತಿ ಶಿವಯ್ಯ ಸ್ವಾಮೀಜಿ ಮಳೆ ಬೆಳೆ ರಾಜಕಾರಣ ಒಳಿತು, ಕೆಡಕು ಕುರಿತು ಭವಿಷ್ಯ ನುಡಿದಿದ್ದಾರೆ. ಅಕ್ರಾಳ, ವಿಕ್ರಾಳ, ಕರಾಳ ಈ ಬಾರಿಯೂ ಇದ್ದದ್ದೇ, ಯುದ್ದ ಅಲ್ಲಿ ಅಷ್ಟೇ ಅಲ್ಲ ಇಲ್ಲಿಯೂ ಇದ್ದಂತೆಯೇ ಜಗತ್ತಿನ ಉದ್ಧಾರಕ್ಕಾಗಿ ‘ಶು.ನ.ಕ. ಮೀಟಿಂಗ್ ನಡೆದಿದೆ. ಅಂದರೆ ಶು ಎಂದರೆ ಶುದ್ಧ, ನ ಎಂದರೆ ನಂಬಿಕೆ ಹಾಗೂ ಕ ಎಂದರೆ ಕರ್ತವ್ಯ. ಈ ಎಲ್ಲವೂ ಕೂಡಿದರೆ ಜಗತ್ತು ಉದ್ಧಾರ. ಹೀಗಾಗಿ ಜಗತ್ತು ಉಳಿಸಲು ಈ ತತ್ವಗಳು ಸಭೆ ಮಾಡುತ್ತಿವೆ ಎಂದರು. ಕಾವಿ, ಖಾದಿ, ಖಾಕಿ, ಮೂರು ಒಳಗೆ ಜಗಳ ಆಗ್ತದ ಎಂದು ಹಿಂದೆಯೂ ಹೇಳಿದ್ದೆ. ಕಾವಿ, ಖಾದಿ, ಖಾಕಿ, ಜೊತೆಗೆ ಕಪ್ಪು, ಹಸಿರು, ನೀಲಿ ಇನ್ನಷ್ಟೂ ಬಣ್ಣ ಕೂಡಿ ಗದ್ದಲವಾಗುತ್ತಿದೆ. ಹೀಗಾಗಿ ಇದನ್ನು ತಪ್ಪಿಸಲು ಶು.ನ.ಕ. ಸಭೆ ಮಾಡುತ್ತಿವೆ ಎಂದರು. ಅಹಂಕಾರದಿಂದ ಮೆರೆದವರು ಮಣ್ಣಾಗಿ ಹೋಗುತ್ತಾರೆ.
ಇದನ್ನೂ ಓದಿ: ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ನಾನು ಈ ಹಿಂದೆ ಹೇಳಿದ್ದೆ, ಗಡ್ಡ, ಗುಡ್ಡ, ಗಿಡ್ಡ ಜಗಳಾಡಿ ಗದ್ದಲ ಹಿಡಿಸುತ್ತಾರೆಂದು. ಈಗ ಅದೇ ಆಗುತ್ತಿದೆ. ಅಲ್ಲಿ ಯುದ್ದ ನಡೆದಿದೆ ನಮಗೆ ಸಂಬಂಧವಿಲ್ಲ ಎಂದೇನಿಲ್ಲ, ಇಲ್ಲಿಯೂ ಯುದ್ದ ನಡೆದಂತೆಯೇ. ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೋಳಿ ಬೆಲೆ ಮನುಷ್ಯನಿಗೆ ಅಂದರೆ ಮನುಷ್ಯನಿಗೆ ಯಾವ ಕಿಮ್ಮತ್ತೂ ಉಳಿದಿಲ್ಲ ಎಂದರು.
ಇನ್ನು ಮಳೆಗಾಲದ ಬಗ್ಗೆ ವಿಶ್ಲೇಷಿಸಿದ ಅವರು, ಮಳೆಗಾಲ ಈ ಬಾರಿ ಜಾಸ್ತಿ ಮಜಾ ಇದೆ, ಮಳೆ ಬೆನ್ನ ಬೆಳಿ ಹತ್ತೈತಿ. ಮುಂದೆ ಬೆಳಿ ಬೆನ್ನ ಮಳಿ ಹತ್ತೈತಿ. ಐದು ಪ್ರಕಾರದ ಮಳಿ ಆಗುತ್ತದೆ. ಅತಿವೃಷ್ಟಿ, ಅಲ್ಪವೃಷ್ಟಿ, ಸಮವೃಷ್ಟಿ, ಅನಾವೃಷ್ಟಿ ಆಗುತ್ತದೆ ಎನ್ನುವ ಮೂಲಕ ಮಳೆ ಅಭಾವ, ಮಳೆ ಹೆಚ್ಚಳ, ಅಕಾಲಿಕ ಮಳೆ ಮೊದಲಾದವುಗಳು ಸಂಭವಿಸಲಿವೆ ಎಂದು ಸಾಂಕೇತಿಕವಾಗಿ ನುಡಿದರು. ವ್ಯಾಪಾರ, ವ್ಯವಹಾರಗಳಲ್ಲಿ ಏರಿಳಿಕೆ. ಉಳಿವಿಯಲ್ಲಿ ಉರುಳುತ್ತಾ ಬರುವ ಶಬ್ದ. ನಾನು ಮೇಲು ಎನ್ನುವ ಅಹಂಕಾರವನ್ನು ಅಡಗಿಸುತ್ತದೆ. ಹಸಿರು ನಾಮದ ಒಡೆಯ, ಹಂಡ ಕುದುರೆಯನೇರಿ, ಅರಸಾಗಿ ಬರುವಾಗ ದೈತ್ಯರನ್ನು ಸಂಹರಿಸುತ್ತಾನೆ. ಮಸಲತ್ತು ಮಾಡಿ ಹಿಂಸೆ ಕೊಡುವ ದೈತ್ಯರನ್ನ ಸಂಹಾರ ಮಾಡಿ ಅವರನ್ನು ಪಾತಾಳಕ್ಕೆ ತಲುಪಿಸುವನು ಎಂದಿದ್ದಾರೆ.
ಯುದ್ಧ ಎಲ್ಲಾ ಕಡೆ ನಡೆಯುತ್ತಿದೆ. ಜಾತಿ, ಮತ, ಪಂಥ ಏನೂ ಹೇಳಬೇಡಿ, ಯಾರಾದರೂ ನೀವು ಯಾರು ಎಂದು ಕೇಳಿದರೆ ನೀವು ಭಾರತೀಯರು ಎಂದಷ್ಟೇ ಹೇಳಿ. ಅಕ್ರಾಳ, ವಿಕ್ರಾಳ, ಕರಾಳ. ಹೈರಾಣ ಈ ಬಾರಿಯೂ ಇರುತ್ತದೆ. ಇದು ಹೆಸರೇ ಹೇಳಿದಂತೆ ಪರಾಭವ ನಾಮ ಸಂವತ್ಸರ, ಅಂದರೆ ಸೋಲುವುದು, ಸದಾಶಿವನ ಸಲುವಾಗಿ ಸೋಲಿರಿ, ಆಗ ನೀವು ಎಲ್ಲಾ ಕಡೆ ಗೆಲುತ್ತಿರಿ ಎಂದು ಆಶೀರ್ವದಿಸಿದರು.
ನುಡಿದ ಭವಿಷ್ಯದ ಬಗ್ಗೆ ಭಕ್ತರೊಬ್ಬರು ಮಾತನಾಡಿ, ಕತಕನಹಳ್ಳಿಯ ಜಾತ್ರೆಯಲ್ಲಿ ನುಡಿಯುವ ಭವಿಷ್ಯ ಎಂದೂ ಸುಳ್ಳಾಗಿಲ್ಲ, ಮುಂದೆಯೂ ಸುಳ್ಳಾಗಲ್ಲ. ಭಕ್ತಿಭಾವದಿಂದ ಇಲ್ಲಿ ಪ್ರಾರ್ಥನೆ ಮಾಡಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಶಿಯಿಂದ ಬರುತ್ತಿದ್ದಂತೆಯೇ ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಇನ್ನು ಜಾತ್ರೆಯ ಅಂಗವಾಗಿ 52 ಜೋಡಿಗಳ ಸಾಮೂಹಿಕ ವಿವಾಹ ಮಾಡಲಾಯಿತು. ವಧು ವವರರಿಗೆ ಚಿನ್ನದ ತಾಳಿ, ಬಟ್ಟೆಗಳನ್ನು ಮಠದಿಂದಲೇ ಉಚಿತವಾಗಿ ನೀಡಲಾಯಿತು. ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಐದು ದಿನಗಳ ಕಾಲ ಸಂಭ್ರಮದಿಂದ ನಡೆದ ಜಾತ್ರೆಗೆ ಇಂದು ತೆರೆಬಿದ್ದಿದೆ. ಪೊಲೀಸ್ ಭದ್ರತೆಯನ್ನೂ ನಿಯೋಜನೆ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.