ವಿಜಯಪುರ: ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಯುವಕನನ್ನೇ ಫಿನಿಷ್ ಮಾಡಿದ ಪತಿ
ಬಸನಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದ ಸಂಗಪ್ಪ ಹೂಗಾರನು, ತನ್ನ ಎದುರಗಡೆ ಮನೆಯ ರಾಜೂ ಕೋಲಕಾರ ಎಂಬುವವರ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಆಕೆಯ ಪತಿ ಹಲ್ಲೆ ಮಾಡಿ ಆತನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ವಿಜಯಪುರ: ಜಿಲ್ಲೆಯ ಬಸನಬಾಗೇವಾಡಿ ತಾಲೂಕಿ ಹತ್ತರಕಿಹಾಳ ಗ್ರಾಮದ ಸಂಗಪ್ಪ ಹೂಗಾರ ತನ್ನ ಮನೆಯ ಎದುರಿನ ಮನೆಯ ರಾಜೂ ಕೋಲಕಾರ ಎಂಬುವವರ ಪತ್ನಿ ಭಾಗ್ಯಶ್ರೀಯ ಜೊತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾನೆ ಎಂದು ರಾಜೂ ಕೋಲಕಾರ ಹಾಗೂ ಸಂಬಂಧಿಕರು ಆರೋಪಿಸಿ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇನ್ನು ಹಲ್ಲೆ ಮಾಡುವ ವೇಳೆ ಸಂಗಪ್ಪ ಹೂಗಾರನ ಸಂಬಂಧಿಕರು ರಾಜೂ ಕೋಲಕಾರರ ಕುಟುಂಬವದವರಿಗೆ ನಮ್ಮ ಮಗನನ್ನು ಬಿಟ್ಟು ಬಿಡಿ ಏನಾಗಿದೆ ಎಂದು ಹಿರಿಯರ ಸಮ್ಮುಖದಲ್ಲಿ ಮಾತಾಡೋಣ ಎಂದು ಎಷ್ಟೇ ಅಂಗಲಾಚಿದರೂ ಬಿಡದೇ ಕೈಗೆ ಸಿಕ್ಕ ಕೋಲಿನಿಂದ ಹೊಡೆದ ಪರಿಣಾಮ ಸಂಗಪ್ಪ ಮೃತಪಟ್ಟಿದ್ದಾನೆ.
ಕೆಲ ಮೂಲಗಳ ಪ್ರಕಾರ ಕಳೆದ ಜನವರಿ 19 ರಂದು ಮಧ್ಯಾಹ್ನ ಸಂಗಪ್ಪನ ತಾಯಿ ತಂದೆ ಪತ್ನಿ ಹಾಗೂ ಸಹೋದರರು ಜಮೀನಿಗೆ ಹೋಗಿದ್ದು, ಮನೆಯಲ್ಲಿ ಸಂಗಪ್ಪ ಒಬ್ಬನೇ ಇದ್ದನಂತೆ. ಓಣಿಯಲ್ಲಿ ಯಾರೂ ಇರಲಿಲ್ಲಾ, ಎಲ್ಲರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದೇ ವೇಳೆಗಾಗಿ ಕಾಯುತ್ತಿದ್ದ ಭಾಗ್ಯಶ್ರೀ ತನ್ನ ವಿವಾಹಿತ ಪ್ರೇಮಿ ಸಂಗಪ್ಪ ಹೂಗಾರನ ಮನೆಗೆ ಬಂದಿದ್ದಾಳೆ. ಭಾಗ್ಯಶ್ರೀ ಸಂಗಪ್ಪನ ಮನೆಗೆ ಹೋಗಿದ್ದ ವಿಷಯವನ್ನ ತಿಳಿದ ಮಲ್ಲು ಕೋಲಕಾರ ತನ್ನ ಸಂಬಂಧಿಕರಾದ ಬಸಪ್ಪ, ಪರಸಪ್ಪ ಹಾಗೂ ಪ್ರಭು ಎಂಬಾತನನ್ನು ಕರೆದುಕೊಂಡು ಸಂಗಪ್ಪ ಹೂಗಾರ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಸಂಗಪ್ಪ ಹಾಗೂ ಭಾಗ್ಯಶ್ರೀ ಇಬ್ಬರೇ ಸಿಕ್ಕಿ ಬಿದ್ದಿದ್ದಾರೆ. ಕೋಪಗೊಂಡು ಸಂಗಪ್ಪನನ್ನು ಹೊಡೆಯುತ್ತಾ ದೇಗಿನಾಳ ರಸ್ತೆಯಲ್ಲಿರುವ ಜಮೀನಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಸಂಗಪ್ಪ ಹಾಗೂ ಭಾಗ್ಯಶ್ರೀ ಇಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿ ಮನ ಬಂದಂತೆ ಸಂಗಪ್ಪನಿಗೆ ಹೊಡೆದಿದ್ದಾರೆ. ಈ ವಿಚಾರ ಸಂಗಪ್ಪನ ತಂದೆ, ತಾಯಿ ಪತ್ನಿ ಸಹೋದರರರು ಹಾಗೂ ಸಂಬಂಧಿಕರಿಗೆ ತಿಳಿದು ಎಲ್ಲರೂ ಕೂಡಿಕೊಂಡು ಗ್ರಾಮದ ಹಿರಿಯನ್ನು ಕರೆದುಕೊಂಡು ಸಂಗಪ್ಪ ಹಾಗೂ ಭಾಗ್ಯಶ್ರೀಯನ್ನು ಕಟ್ಟಿ ಹಾಕಿದ್ದ ಜಮೀನಿಗೆ ಹೋಗಿದ್ದಾರೆ. ಅಲ್ಲಿ ಗ್ರಾಮದ ಹಿರಿಯರ ರಾಜೀ ಪಂಚಾಯತಿಯಂತೆ ಭಾಗ್ಯಶ್ರೀಯನ್ನು ಸಂಗಪ್ಪ ಮದುವೆಯಾಗಬೇಕು. ಭಾಗ್ಯಶ್ರೀ ಗಂಡ ರಾಜೂ ಕೋಲಕಾರನಿಗೆ ತಪ್ಪು ದಂಡ ಹಾಗೂ ಮದುವೆಯ ಖರ್ಚೆಂದು 2 ಲಕ್ಷ ರೂಪಾಯಿ ನಗದು ನೀಡಬೇಕೆಂದು ನ್ಯಾಯ ಮಾಡಿದ್ದಾರೆ. ಇದಕ್ಕೆ ಸಂಗಪ್ಪ ಹೂಗಾರನ ಮನೆಯವರೂ ಸಹ ಒಪ್ಪಿದ್ದಾರೆ. ಅಲ್ಲಿಂದ ಕಟ್ಟಿ ಹಾಕಿದ್ದ ಸಂಗಪ್ಪ ಹಾಗೂ ಭಾಗ್ಯಶ್ರೀಯನ್ನು ಬಿಚ್ಚಿ, ರೆಜಿಸ್ಟರ್ ಮ್ಯಾರೇಜ್ ಮಾಡಲು ಬಸವನಬಾಗೇವಾಡಿಯ ಸಬ್ ರೆಜಿಸ್ಟಾರ್ ಕಚೇರಿಗೆ ಕರೆದುಕೊಂಡು ಹೋಗುತ್ತಿರೋವಾಗ ತೀವ್ರ ಹಲ್ಲೆಗೆ ಒಳಗಾಗಿದ್ದ ಸಂಗಪ್ಪ ಹೂಗಾರ ಮೃತಪಟ್ಟಿದ್ದಾನೆ.
ಯಾವಾಗ ಸಂಗಪ್ಪ ಮೃತಪಟ್ಟಿದ್ದಾನೆ ಎಂದು ಗೊತ್ತಾಯಿತೋ ಆಗ ಆತನ ಮೇಲೆ ಹಲ್ಲೆ ಮಾಡಿದ್ದ ಮಲ್ಲು ಕೋಲಕಾರ ಹಾಗೂ ಇಡೀ ತಂಡ ಅಲ್ಲಿಂದ ನಾಪತ್ತೆಯಾಗಿದೆ. ಈ ಕುರಿತು ಮೃತ ಸಂಗಪ್ಪನ ಕುಟುಂಬ 8 ಜನರ ಮೇಲೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮನಗೂಳಿ ಪಿಎಸ್ವೈ ಪರಶುರಾಮ ಮನಗೂಳಿ ಹಾಗೂ ಇತರೆ ಸಿಬ್ಬಂದಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅನೈತಿಕ ಸಂಬಂಧದ ಕಾರಣವನ್ನು ಮುಂದಿಟ್ಟುಕೊಂಡು ಸಂಗಪ್ಪ ಹೂಗಾರನ ಜೀವ ತೆಗೆದ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದೆ. ತನಿಖೆ ತೀವ್ರಗೊಂಡಿದ್ದು ತಲೆ ಮರೆಸಿಕೊಂಡಿರೋ ಹಂತಕರ ಸುಳಿವು ಸಿಕ್ಕಿದ್ದು ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೊಡ್ಡಬಳ್ಳಾಪುರ ಕೋರ್ಟ್
ಒಟ್ಟಾರೆ ಒಂದು ಅಕ್ರಮ ಸಂಬಂಧ ಎರಡು ಕುಟುಂಬಗಳನ್ನು ನಾಶ ಮಾಡಿದೆ. ಇತ್ತ ಪತಿಯೂ ಇಲ್ಲಾ, ಪ್ರಿಯಕರನೂ ಇಲ್ಲದಂತಾಗಿ ಭಾಗ್ಶಶ್ರೀ ತವರು ಮನೆ ಸೇರಿದ್ದಾಳೆ. ವಿವಾಹಿತೆಯೊಂದಿಗೆ ಅಕ್ರಮ ಸಂಬಂಧದ ಕಾರಣ ಕೊಲೆಯಾಗಿ ಯಮನ ಪಾದ ಸೇರಿದವನ ಪತ್ನಿ ವಿಧವೆ ಪಟ್ಟಕಟ್ಟಿಕೊಳ್ಳುವಂತಾಗಿದೆ.
ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ