ವಕ್ಫ್ ವಿರುದ್ಧ ವಿಜಯಪುರದಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ
Vijayapura Waqf Row: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರದಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ. ರೈತರ, ಮಠಗಳ ಮತ್ತು ಸರ್ಕಾರಿ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದ್ದನ್ನು ತೆಗೆಯುವಂತೆ ಆಗ್ರಹಿಸಲಿದ್ದಾರೆ.
ವಿಜಯಪುರ, ನವೆಂಬರ್ 03: ರೈತರು, ಸಂಘ-ಸಂಸ್ಥೆಗಳ, ಮಠಗಳ ಮತ್ತು ಸರ್ಕಾರಿ ಜಮೀನುಗಳ ಪಹಣಿಯಲ್ಲಿ ವಕ್ಪ್ ಆಸ್ತಿ (Waqf) ಎಂದು ನಮೂದು ಮಾಡಿರುವುದನ್ನು ತೆಗೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಸೋಮವಾರ (ನ.04) ರಿಂದ ವಿಜಯಪುರ (Vijayapura) ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಹೊರ ಭಾಗದಲ್ಲಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಹೋರಾಟ ಧರಣಿ ನಡೆಸಲಿದ್ದಾರೆ.
ಪಹಣಿಯ ಯಾವುದೇ ಕಾಲಂ ದಲ್ಲಿಯೂ ವಕ್ಫ್ ಆಸ್ತಿ ಎಂದು ಇರಬಾರದು. ಪಹಣಿಯಲ್ಲಿ ರೈತರ ಹೆಸರು ಮಾತ್ರ ಇರಬೇಕು. ರೈತರ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್ಗಳಲ್ಲೇ ಇತ್ಯರ್ಥ ಆಗಬೇಕು. ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು. ವಕ್ಫ್ ಅದಾಲತ್ ಮಾಡುವುದರಿಂದ ಸರ್ಕಾರಿ ನ್ಯಾಯಾಲಯಕ್ಕೆ ಮಹತ್ವ ಕಡಿಮೆ ಆಗಲಿದೆ. ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು ಎಂದು ಆಗ್ರಹಿಸಲಿದ್ದಾರೆ.
ಇದನ್ನೂ ಓದಿ: ಸಿಡಿದೆದ್ದ ಯತ್ನಾಳ್: ಪ್ರಧಾನಿ ಮೋದಿ ಅಂಗಳ ತಲುಪಿದ ವಕ್ಫ್ ಆಸ್ತಿ ಸಮರ!
ಈಗಾಗಲೇ ವಕ್ಫ್ ಆಸ್ತಿ ಅಂತ ನಮೂದು ಆಗಿದ್ದನ್ನು ತೆಗೆದು ಹಾಕಬೇಕು. ಮುಂದಿನ ದಿನಗಳಲ್ಲಿ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಲಿಖಿತವಾಗಿ ಆದೇಶ ಹೊರಡಿಸಬೇಕು. ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿಯ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ವಕ್ಪ್ ಆಸ್ತಿ ದೇಶದ ಆಸ್ತಿಯೆಂದು ಸರ್ಕಾರದ ಸುಪರ್ದಿಗೆ ಪಡೆಯಬೇಕು. 1974 ರ ಮತ್ತು ತದ ನಂತರದ ವಕ್ಫ್ ಗೆಜೆಟ್ ನೋಟಿಫಿಕೇಶನ್ಗಳನ್ನು ಹಿಂಪಡೆಯಬೇಕು. ಇಲ್ಲಿಯವರೆಗಿನ ವಕ್ಫ್ ಬೋರ್ಡ್ ಗಳಿಸಿದ ಆದಾಯವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಲಿದ್ದಾರೆ.
ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈ ಎಲ್ಲ ಬೇಡಿಕೆ ಇಡೇರುವವರೆಗು ಹೋರಾಟ ಮಾಡಲಿದ್ದೇವೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ಭಾಗಿಯಾಗಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ