AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿದೆದ್ದ ಯತ್ನಾಳ್​: ಪ್ರಧಾನಿ ಮೋದಿ ಅಂಗಳ ತಲುಪಿದ ವಕ್ಫ್ ಆಸ್ತಿ ಸಮರ!

ಮುತ್ತಾತನ ಆಸ್ತಿ ಮೇಲೆ ತಕರಾರು ಶುರುವಾಗಿದೆ. ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇವತ್ತಿದ್ದ ಭೂಮಿ ನಾಳೆ ನಮ್ಮ ಹೆಸರಿನಲ್ಲಿ ಇರೋತ್ತೋ, ಇರಲ್ವೋ ಅನ್ನೋ ದಿಗಿಲು ಉಂಟಾಗಿದೆ. ಅದಕ್ಕೆ ಕಾರಣವೇ ವಕ್ಫ್‌ ಬೋರ್ಡ್‌ನ ಈ ವರಸೆ. ಹೌದು.. ರೈತರ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಇದೀಗ ಇದೇ ವಕ್ಫ್ ಸಮರ ಪ್ರಧಾನಿ ಮೋದಿ ಅಂಗಳಕ್ಕೂ ತಲುಪಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಸಿಡಿದೆದ್ದ ಯತ್ನಾಳ್​: ಪ್ರಧಾನಿ ಮೋದಿ ಅಂಗಳ ತಲುಪಿದ ವಕ್ಫ್ ಆಸ್ತಿ ಸಮರ!
ಮೋದಿ-ಯತ್ನಾಳ್
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Nov 01, 2024 | 3:39 PM

Share

ಬೆಂಗಳೂರು, (ನವೆಂಬರ್ 01): ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜಿಲ್ಲೆ ಜಿಲ್ಲೆಯಲ್ಲೂ ವಕ್ಫ್ ಆಸ್ತಿ ಸಮರ ತಾರಕಕ್ಕೇರಿದೆ. ರೈತರ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವಕ್ಫ್​ ಬೋರ್ಡ್​ ವಿರುದ್ಧ ರೈತರ ಆಕ್ರೋಶಗೊಂಡಿದ್ದು, ಹೋರಾಟಕ್ಕಿಳಿದಿದ್ದಾರೆ. ಇದಕ್ಕೆ ಬಿಜೆಪಿ ಸಾಥ್ ನೀಡಿದ್ದು, ಇದೇ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಹೀಗಿರುವಾಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಕ್ಫ್ ಆಸ್ತಿಗಳನ್ನ ರಾಷ್ಟ್ರೀಕರಣ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅಂಗಳಕ್ಕೆ ತಲುಪಿದ ವಕ್ಫ್ ಸಮರ

ವಕ್ಫ್ ಬೋರ್ಡ್‌ನಿಂದ ಭೂಮಾಲೀಕರು ಮತ್ತು ರೈತರಿಗೆ ಸಮಸ್ಯೆಯಾಗುತ್ತಿದೆ. ಧಾರ್ಮಿಕ ಸಂಸ್ಥೆಗಳು ಮಠ ಮಾನ್ಯಗಳ ಜಮೀನನ್ನ ವಕ್ಫ್ ಆಕ್ರಮಿಸಿಕೊಳ್ಳುತ್ತಿದೆ. ವಕ್ಫ್‌ನ ಈ ನಡೆ ಕಾನೂನು ಅಸಮಾನತೆ ಮತ್ತು ಕ್ರೂರತೆಯನ್ನ ಒಳಗೊಂಡಿದೆ. ವಕ್ಫ್‌ಗೆ ಅಪರಿಮಿತಿ ಅಧಿಕಾರ ನೀಡಲಾಗಿದ್ದು, ಇದರಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನ ರಾಷ್ಟ್ರೀಕರಣ ಮಾಡಿ ಸಮಾಜಕ್ಕೆ ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಧಾರವಾಡ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು: 20ಕ್ಕೂ ಹೆಚ್ಚು ರೈತರಿಂದ ಆಕ್ರೋಶ

ಮತ್ತೊಂದು ಪಾಕಿಸ್ತಾನ ಆಗಲು ಬಿಡಬಾರದು. ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಯತ್ನಾಳ್​ ಹೇಳಿದ್ದಾರೆ. ಯತ್ನಾಳ್ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಮ್ಯಾಡ್, ಮೆಂಟಲ್‌ಗಳ ಬಗ್ಗೆ ಮಾತನಾಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಕಂಡ ಕಂಡ ಜಮೀನಿಗೆ ವಕ್ಫ್ ಆಸ್ತಿ ಅಂತಾ ನೋಟಿಸ್ ನೀಡಲಾಗ್ತಿದೆ. ಇದು ಸರ್ಕಾರದಿಂದ ರೈತರ ಜಮೀನನ್ನ ವಶಪಡಿಸಿಕೊಳ್ಳೋ ಹುನ್ನಾರ ಎಂದು ವಾಗ್ದಾಳಿ ನಡೆಸಿದ ಶಾಸಕ ಅಶ್ವತ್ಥ್ ನಾರಾಯಣ, ಅಧಿಕಾರ ದುರ್ಬಳಕೆ ಮಾಡ್ತಿರೋ ಜಮೀರ್​ನನ್ನ ವಜಾ ಮಾಡಿ ಎಂದು ಆಗ್ರಹಿಸಿದ್ದಾರೆ.

ವಕ್ಫ್​ ವಿಚಾರದಲ್ಲಿ ಕಾಂಗ್ರೆಸ್​ನಿಂದ​ ಎಚ್ಚರಿಕೆಯ ಹೆಜ್ಜೆ!

ವಕ್ಫ್ ವಿಚಾರವನ್ನ ಬಿಜೆಪಿ ಅಸ್ತ್ರ ಮಾಡಿಕೊಳ್ತಿದ್ದಂತೆ ಇತ್ತ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ. ಯಾಕಂದ್ರೆ ಉಪಚುನಾವಣೆ ಮೇಲೆ ಪರಿಣಾಮ ಬೀರೋ ಆತಂಕವಿದ್ದು, ದೀಪಾವಳಿ ಮುಗಿದ ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಕೆ.ಜೆ ಜಾರ್ಜ್, ಕೆಲವು ತಪ್ಪುಗಳಿಂದಾಗಿ ಗೊಂದಲ ಉಂಟಾಗಿದೆ ಅಷ್ಟೇ ಎಂದಿದ್ದಾರೆ.

ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್​ ಕಣ್ಣು!

ಸರ್ಕಾರ ಎಚ್ಚರಿಕೆ ಹೆಜ್ಜೆ ಇಡೋದಕ್ಕೂ ಕಾರಣವಿದೆ. ಯಾಕಂದ್ರೆ, ಜಿಲ್ಲೆ ಜಿಲ್ಲೆಗೂ, ದೇವಸ್ಥಾನ, ಮಠ ಮಾನ್ಯಗಳಿಗೂ ವಕ್ಫ್ ಟ್ರಬಲ್ ಶುರುವಾಗಿದೆ. ಇದೀಗ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು ಬಿದ್ದಿದ್ದು, ಧಾರವಾಡದ ನವಲಗುಂದದಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಸಂತೋಷ್ ಲಾಡ್, ವಕ್ಫ್ ಮಾತ್ರವಲ್ಲ, ಮುಜರಾಯಿ, ಕಂದಾಯ, ಬಿಡಿಎ ಸೈಟ್‌ಗಳೂ ಕಬಳಿಕೆಯಾಗಿವೆ. ಹೀಗಾಗಿ ನೋಟಿಸ್ ಕೊಟ್ಟಿರುತ್ತಾರೆ ಅಂತಾ ಹೇಳಿದ್ದಾರೆ.

ರೈತರ ಜಮೀನು ಬಳಿಕ ದೇಗುಲದ ಮೇಲೂ ವಕ್ಫ್ ಕಣ್ಣು

ಇತ್ತ ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣದ ಮಹದೇವಪುರದ ಗ್ರಾಮದ ದೇಗುಲಕ್ಕೂ ವಕ್ಫ್ ತಕರಾರು ಹಾಕಿದೆ. ದೇಗುಲದ ಭೂಮಿ ವಕ್ಫ್‌ಗೆ ಸೇರಿದೆ ಎಂದು ನಮೂದಾಗಿದ್ದು, ಆಸ್ತಿ ದಾಖಲೆ ನೋಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಸರ್ವೆ ನಂಬರ್ 74ರಲ್ಲಿರುವ ದೇಗುಲದ 6 ಗುಂಟೆ ಜಾಗ ಇಷ್ಟು ದಿನ ಚಿಕ್ಕಮ್ಮ ಚಿಕ್ಕದೇವಿ ಹೆಸರಲ್ಲಿತ್ತು. ಆದ್ರೀಗ ದಿಢೀರ್ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ