ಎಪಿಎಂಸಿಗಳಿಗೆ ಮೂಲಸೌಕರ್ಯ ಒದಗಿಸಲು 130 ಕೋಟಿ ರೂ; ಸಚಿವಸಂಪುಟ ಸಭೆಯಲ್ಲಿ ಇನ್ನೂ ಏನೇನು ನಿರ್ಧಾರ? ಇಲ್ಲಿದೆ ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವ ಹೆಚ್ಕೆ ಪಾಟೀಲ್, 15 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು: ಸಹಕಾರ ಇಲಾಖೆ ಅಡಿಯಲ್ಲಿ ಎಪಿಎಂಸಿಗಳಿಗೆ (APMC) ರಸ್ತೆ ನಿರ್ಮಾಣ ಮಾಡಲು, ಮೂಲಭೂತ ಸೌಲಭ್ಯ ಒದಗಿಸಿಕೊಡಲು 130.40 ಕೋಟಿ ಮಂಜೂರು ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಹೆಚ್ಕೆ ಪಾಟೀಲ್ (HK Patil) ಗುರುವಾರ ಸಂಜೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಸಚಿವ ಸಂಪುಟದಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆದಿದ್ದು, ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸುವ ನಿರ್ಣಯ ಕೈಗೊಳ್ಳಲಾಗಿದೆ. 297 ಕೋಟಿ ರೂಪಾಯಿ ಅನುದಾನ ಕೊಡಲಾಗಿದೆ. ಮಾರುಕಟ್ಟೆ ದರ ಮೀರದಂತೆ ಕೊಂಡುಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಜಾಗದಲ್ಲಿ ಅದನ್ನು ಅಕ್ರಮವಾಗಿ ನಡೆಸುತ್ತಾ ಇದ್ದರೆ ಅದರ ಆಡಿಟ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಅಕ್ರಮ ಸಾಗಾಣಿಕೆ ಗಮನಕ್ಕೆ ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. 6,105 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅದನ್ನು ಸರ್ಕಾರ ಉಪಯೋಗ ಮಾಡಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಹಿಂದುಳಿದ ಆಯೋಗದ ಸಲಹೆಯಂತೆ ಹಾಗೂ ನ್ಯಾಯಾಲಯದ ಸಲಹೆಯಂತೆ ಹಿಂದುಳಿದ ವರ್ಗದ ಜಾತಿ ಪಟ್ಟಿಯ 3ಎ ಯಲ್ಲಿ ಇರುವ ಕೊಡಗರು ಎಂಬುದರ ಬದಲಾಗಿ ಕೊಡವ / ಕೊಡವರು ಅಂತ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಸೂಪರ್ ಅಸ್ಪತ್ರೆ
ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಸೂಪರ್ ಅಸ್ಪತ್ರೆ ನಿರ್ಮಾಣ ಮಾಡಲು ಸಮ್ಮತಿಸಲಾಗಿದೆ. 22.70 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಪಾಟೀಲ್ ಮಾಹಿತಿ ನೀಡಿದರು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 26 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ನೆಫ್ರೋ ಯೂರಾಲಜಿಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ ನೀಡಿದೆ.
ಇದನ್ನೂ ಓದಿ: ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದ ಪ್ರಿಯಾಂಕ್ ಖರ್ಗೆ
ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ ವಲಯವೆಂದು ಘೋಷಣೆ ಮಾಡಲು ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ಹಸಿರು ನಿಶಾನೆ ತೋರಲಾಗಿದೆ.
ಸಚಿವರ ವಿರುದ್ಧ ಶಾಸಕರ ಪತ್ರ ವಿಚಾರ ಚರ್ಚೆ ಆಗಿಲ್ಲ; ಪಾಟೀಲ್
ಸಚಿವರ ವಿರುದ್ಧ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚ ಆಗಿಲ್ಲ. ಅದೇ ರೀತಿ ತನ್ವೀರ್ ಸೇಠ್ ಪತ್ರದ ಬಗ್ಗೆಯೂ ಚರ್ಚೆ ಆಗಲಿಲ್ಲ ಎಂದು ಅವರು ತಿಳಿಸಿದರು.
67 ಕೈದಿಗಳ ಬಿಡುಗಡೆಗೆ ಒಪ್ಪಿಗೆ
ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸನ್ನಡೆತೆಯ ಆಧಾರದಲ್ಲಿ 67 ಕೈದಿಗಳ ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಕೈದಿಗಳ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಬೆಂಗಳೂರು ಸೆಂಟ್ರಲ್ ಜೈಲ್ನಿಂದ 24, ಮೈಸೂರಿನಲ್ಲಿ 8, ಬೆಳಗಾವಿ 2, ಕಲಬುರ್ಗಿ 5, ಶಿವಮೊಗ್ಗ 6, ಬಳ್ಳಾರಿ 8, ಧಾರವಾಡ 2 ಮಂದಿ ಕೈದಿಗಳ ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ.
Published On - 8:35 pm, Thu, 27 July 23