ವನ್ಯಜೀವಿ ಪಶುವೈದ್ಯಕೀಯ ಸಂಸ್ಥೆಯ ಅರಣ್ಯ ರೋದನ; ಅಭಿವೃದ್ಧಿಯೂ ಇಲ್ಲ, ಸದ್ಬಳಕೆಯೂ ಇಲ್ಲ

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡ ಅಳುವಾರದ ಬಳಿ 2008ರಲ್ಲಿ ಆರಂಭಗೊಂಡ ಈ ಕೇಂದ್ರಕ್ಕೆ ಇದೀಗ 12 ವರ್ಷ ಕಳೆದಿದೆ. ಇಷ್ಟಾದರೂ ಇಲ್ಲಿ ಪೂರ್ಣಪ್ರಮಾಣದ ಚಟುವಟಿಕೆಗಳು ಆರಂಭವಾಗಿಯೇ ಇಲ್ಲ.

ವನ್ಯಜೀವಿ ಪಶುವೈದ್ಯಕೀಯ ಸಂಸ್ಥೆಯ ಅರಣ್ಯ ರೋದನ; ಅಭಿವೃದ್ಧಿಯೂ ಇಲ್ಲ, ಸದ್ಬಳಕೆಯೂ ಇಲ್ಲ
ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ
Skanda

| Edited By: sadhu srinath

Dec 24, 2020 | 5:08 PM

ಕೊಡಗು: ವನ್ಯಜೀವಿ ಕುರಿತಾದ ತರಬೇತಿ, ಸಂಶೋಧನೆಗಾಗಿ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ತೆರೆದಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಇದೀಗ ನಾಮ್​ ಕಾವಾಸ್ತೆ ಎಂಬಂತಾಗಿದೆ. ರಾಜ್ಯ ಹಾಗೂ ದೇಶದ ಪಶು ವೈದ್ಯಕೀಯ ಪದವೀಧರರು ವನ್ಯಜೀವಿಗಳ ಕುರಿತಾದ ಸಂಶೋಧನೆ ನಡೆಸಲು ಅನುಕೂಲವಾಗಲೆಂದು ಸರ್ಕಾರ ಕೊಡಗು ಜಿಲ್ಲೆಯಲ್ಲಿ ಈ ಕೇಂದ್ರವನ್ನು 2008ರಲ್ಲಿ ಆರಂಭಿಸಿತ್ತು.

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡ ಅಳುವಾರದ ಬಳಿ 2008ರಲ್ಲಿ ಆರಂಭಗೊಂಡ ಈ ಕೇಂದ್ರಕ್ಕೆ ಇದೀಗ 12 ವರ್ಷ ಕಳೆದಿದೆ. ಇಷ್ಟಾದರೂ ಇಲ್ಲಿ ಪೂರ್ಣಪ್ರಮಾಣದ ಚಟುವಟಿಕೆಗಳು ಆರಂಭವಾಗಿಯೇ ಇಲ್ಲ. 2008 ರಲ್ಲಿ ಅಂದಿನ ರಾಜ್ಯ ಸರ್ಕಾರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಸ್ಥಾಪನೆಗೆ 6 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಅಧಿಕೃತವಾಗಿ ತಿಳಿಸಿತ್ತು. ಆದರೆ ಈವರೆಗೆ ಕೇವಲ 3.2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ.

ಅಗತ್ಯ ಸಿಬ್ಬಂದಿಯ ಕೊರತೆ ರಾಜ್ಯ ಸರ್ಕಾರ ಈ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಯುಜಿಸಿ ವೇತನ ಶ್ರೇಣಿಯ ಒಬ್ಬ ನಿರ್ದೇಶಕ, 4 ಮಂದಿ ಪ್ರಾಧ್ಯಾಪಕರು, 8 ಮಂದಿ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಬೇಕಿದೆ. ಅವರೊಟ್ಟಿಗೆ, ಸಹಾಯಕ ಆಡಳಿತಾಧಿಕಾರಿ, ಹಣಕಾಸು ನಿಯಂತ್ರಾಣಾಧಿಕಾರಿಸೇರಿ ಹಲವು ಬೋಧಕೇತರ ಸಿಬ್ಬಂದಿಗಳ ಅಗತ್ಯವೂ ಇದೆ.

ಈ ನೇಮಕ ಪ್ರಕ್ರಿಯೆಗೆ 2008 ರಿಂದಲೂ ಇಲ್ಲಿನ ಪ್ರಭಾರ ನಿರ್ದೇಶಕರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ವ್ಯವಹಾರ ನಡೆಸುತ್ತಾ ಬಂದಿರುವರಾದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ.

ಈಗಾಗಲೇ ಇಲ್ಲಿನ ಸಂಶೋಧನಾ ಸಂಸ್ಥೆ ಮತ್ತು ವಿದೇಶಿ ವಿವಿಗಳ ಜೊತೆ ಹೊಂದಾಣಿಕೆ ಆಗಿದೆ. ಮುಖ್ಯವಾಗಿ ಅಮೇರಿಕಾದ ಪರ್ಡ್ಯೂ ವಿವಿ, ಮಿನಿಸೋಟ ವಿವಿ ಹಾಗೂ ಟಾಟಾ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಆಗಿರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಸಂಶೋಧನಾ ದೃಷ್ಟಿಯಿಂದ ಬಹಳಷ್ಟು ಪ್ರಯೋಜನ ಆಗಲಿದೆ.

ಬೆಂಬಲ ಸಿಕ್ಕರೆ ಮತ್ತಷ್ಟು ಪ್ರಯೋಜನ ದುಬಾರೆ, ಮತ್ತಿಗೋಡು, ನಾಗರಹೊಳೆ, ಬಂಡೀಪುರ, ಬೆಂಗಳೂರು ಮೊದಲಾದ ಕಡೆಗಳಲ್ಲಿ ರೋಗಬಾಧಿತವಾಗಿ ಮೃತಪಟ್ಟ ವನ್ಯಜೀವಿಗಳ ಮಾದರಿಯನ್ನ ತಂದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಇದನ್ನು ಮುಂದಿನ ಹಂತದಲ್ಲಿ ಅಭಿವೃದ್ಧಿಗೊಳಿಸಲು ಬೇಕಾದ ಪೂರಕ ಬೆಂಬಲ ಮಾತ್ರ ಸಿಗುತ್ತಿಲ್ಲ.

ವನ್ಯಜೀವಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ , ಸಂಶೋಧನೆ ಮಾಡಲು ಈ ಕೇಂದ್ರಕ್ಕೆ ರಾಜ್ಯ ಸರ್ಕಾರ ಕಾಯಕಲ್ಪ ನೀಡಬೇಕು ಅನ್ನೋ‌ ಒತ್ತಾಯ ಕೇಳಿ ಬರುತ್ತಿದೆ. ಒಂದು ವೇಳೆ ಇಲ್ಲಿನ ಸಂಶೋಧನಾ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಚಟುವಟಿಕೆ ಆರಂಭ ಮಾಡಿದರೆ ವನ್ಯಜೀವಿಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಸ್ವಾವಲಂಬನೆ ಸಾಧಿಸಲು ಇದು ನೆರವಾಗಲಿದೆ. ಈ ದೃಷ್ಟಿಯಲ್ಲಿ ಸರ್ಕಾರ ಇನ್ನಾದರೂ ಇತ್ತ ಗಮನಹರಿಸಲಿ, ಸಂಶೋಧನಾ ಕೇಂದ್ರ ಅಭಿವೃದ್ಧಿಗೊಳಿಸಿ ಸದ್ಬಳಕೆ ಮಾಡಿಕೊಳ್ಳಲಿ ಎನ್ನುವುದು ನಮ್ಮ ಆಶಯ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada