ಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ ನಿಧನ
ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಾಹಿತಿ ಕಮಲಾ ಹಂಪನಾ (89) ಅವರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಕಮಲಾ ಹಂಪನಾ ಅವರು ಮೂಡಿಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು, ಜೂನ್ 22: ಸಾಹಿತಿ ಕಮಲಾ ಹಂಪನಾ (89) (Kamla Hampana) ಅವರು ಹೃದಯಾಘಾತದಿಂದ (Heart Attack) ಇಂದು (ಜೂ.22) ಮೃತಪಟ್ಟಿದ್ದಾರೆ. ಕಮಲಾ ಹಂ.ಪಾ ನಾಗರಾಜಯ್ಯ ಅವರಿಗೆ ಸಾಹಿತಿ, ಸಂಶೋಧಕರಾಗಿರುವ ಪತಿ ಹಂ.ಪ ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಅಮೆರಿಕನ್ ಡಾಲರ್ಸ್ ಕಾಲೋನಿಯಲ್ಲಿ ಪುತ್ರಿ ಆರತಿ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
ಕಮಲಾ ಹಂಪನ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ 1935ರ ಅಕ್ಟೋಬರ್ 28ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಪಿಹೆಚ್ಡಿ ಪದವಿ ಪಡೆದರು. ತಮ್ಮ ಅಧ್ಯಯನ, ಅಧ್ಯಾಪನ, ಲೇಖನ,ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ.
ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನ, ಬವನೆ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದ ಕಮಲಾ ಹಂಪನ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿ, ಮೂಡಿಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸಂದಿವೆ.
ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳಾಗಿವೆ.
ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ.
ಸಾಹಿತಿ ಡಾ.ಕಮಲಾ ಹಂಪನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವು ದುಃಖ ತಂದಿದೆ. ಸಾಹಿತ್ಯ ಕೃಷಿ ಜತೆ ಸಂಶೋಧನೆ, ಬೋಧನೆಗಳಿಂದ ಜನಪ್ರಿಯರಾಗಿದ್ದರು. ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತು ಬಯಸಿದ ಜೀವ. ಅವರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ ಎಂದು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Sat, 22 June 24