ಯಾದಗಿರಿ: ನವಿಲುಗಳನ್ನ ಬೇಟೆಯಾಡಿದ್ದ 7 ಜನರ ಬಂಧನ; 6 ನಾಡ ಬಂದೂಕು ವಶಕ್ಕೆ

ಯಾದಗಿರಿ ತಾಲೂಕಿನ ಮೋಟನಹಳ್ಳಿ ಬಳಿ ಎರಡು ನವಿಲುಗಳನ್ನು ಬೇಟೆಯಾಡಿದ 7 ಆರೋಪಿಗಳನ್ನು ಪ್ರಾದೇಶಿಕ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆರೋಪಿಗಳಿಂದ 6 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ: ನವಿಲುಗಳನ್ನ ಬೇಟೆಯಾಡಿದ್ದ 7 ಜನರ ಬಂಧನ; 6 ನಾಡ ಬಂದೂಕು ವಶಕ್ಕೆ
ಬಂಧಿತರು
Image Credit source: tv9 kannada
Edited By:

Updated on: Sep 13, 2026 | 3:15 PM

ಯಾದಗಿರಿ, ಸೆಪ್ಟೆಂಬರ್​​ 13: ಯಾದಗಿರಿ ತಾಲೂಕಿನ ಮೋಟನಹಳ್ಳಿ ಸಮೀಪದ ಬಗ್ಗಲುಮಡು ಅರಣ್ಯ ಪ್ರದೇಶದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡುತ್ತಿದ್ದ ಏಳು ಜನರ ತಂಡವನ್ನು ಯಾದಗಿರಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಕಾಡಿನಲ್ಲಿ ನವಿಲುಗಳನ್ನು ಬೇಟೆಯಾಡುತ್ತಿರುವ ಕುರಿತು ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಈ ಕ್ರಮ ಕೈಗೊಂಡಿದ್ದಾರೆ.

ಏಳು ಜನರ ಬಂಧನ: ನವಿಲುಗಳ ಕಳೇಬರ ಸೇರಿದಂತೆ 6 ನಾಡಬಂದೂಕು ವಶಕ್ಕೆ 

ಬಂಧಿತರನ್ನು ನಿಂಗಪ್ಪ, ವಾಸುದೇವ, ಕರೇಪ್ಪ, ಕಾಂತಪ್ಪ, ಯಲ್ಲಾಲಿಂಗ, ಬಸವರಾಜ್ ಹಾಗೂ ಮಲ್ಲಪ್ಪ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಾಗಿದ್ದಾರೆ. ದಾಳಿಯ ವೇಳೆ ಆರೋಪಿಗಳು ಬೇಟೆಯಾಡಿದ್ದ ಎರಡು ನವಿಲುಗಳ ಕಳೇಬರ ಹಾಗೂ ಬೇಟೆಗೆ ಬಳಸಿದ್ದ 6 ನಾಡಬಂದೂಕುಗಳನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು

ಇನ್ನು ಅಕ್ರಮವಾಗಿ ನಾಡಬಂದೂಕು ಬಳಸಿ ರಾಷ್ಟ್ರಪಕ್ಷಿ ನವಿಲುಗಳನ್ನು ಕೊಂದ ಆರೋಪದಡಿ, ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾದಗಿರಿ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ನವಿಲು ಹಲಾಲ್ ಮಾಡಿ ಮಾಂಸ, ಮೂಳೆ ಮಾರಾಟ ಜಾಲ ಪತ್ತೆ: ಒಬ್ಬನ ಸೆರೆ

ಇನ್ನು ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲೂಕಿನ ಬೈಯಪ್ಪನಹಳ್ಳಿ ಬಳಿ ರಾಷ್ಟ್ರಪಕ್ಷಿ ನವಿಲುಗಳನ್ನು ಅಕ್ರಮವಾಗಿ ಬೇಟೆಯಾಡಿ, ಹಲಾಲ್ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರಿನ ಅರಣ್ಯ ಸಂಚಾರಿ ದಳ ಭೇದಿಸಿದ್ದರು. ಖಚಿತ ಮಾಹಿತಿ ಆಧರಿಸಿ ಸೊರೈನ್ ಬೇಗಂ ಎಂಬುವರ ತೋಟದ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 3 ಕೆ.ಜಿ ನವಿಲು ಮಾಂಸ, ಮೂಳೆ ಹಾಗೂ ರೆಕ್ಕೆ-ಪುಕ್ಕಗಳನ್ನು ಜಪ್ತಿ ಮಾಡಿದ್ದು, ಒಂದು ಜೀವಂತ ನವಿಲನ್ನು ರಕ್ಷಿಸಿದ್ದರು.

ಇದನ್ನೂ ಓದಿ: ಆ ದೇವಿಯ ಸನ್ನಿಧಾನದಲ್ಲಿ ಚೇಳು ಕಚ್ಚಲ್ಲ, ಕಚ್ಚಿದ್ರೂ ವಿಷ ಏರಲ್ಲ! ಯಾದಗಿರಿಯ ಕಂದಕೂರ ಬೆಟ್ಟದಲ್ಲಿ ಮೈನವಿರೇಳಿಸೋ ‘ಚೇಳಿನ ಜಾತ್ರೆ’

ತೋಟದ ಮಾಲೀಕರ ಸೋದರ ಸಾದಿಕ್ ಪಾಷಾ ಎಂಬಾತ ಕಾಡಿನಲ್ಲಿ ನವಿಲುಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುವುದರ ಜೊತೆಗೆ, ವಶೀಕರಣ ಹಾಗೂ ಮಾಟ-ಮಂತ್ರಕ್ಕಾಗಿ ಅದರ ಮೂಳೆಗಳನ್ನು ಸರಬರಾಜು ಮಾಡುತ್ತಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಸಾದಿಕ್ ಪಾಷಾನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us