ಆ ದೇವಿಯ ಸನ್ನಿಧಾನದಲ್ಲಿ ಚೇಳು ಕಚ್ಚಲ್ಲ, ಕಚ್ಚಿದ್ರೂ ವಿಷ ಏರಲ್ಲ! ಯಾದಗಿರಿಯ ಕಂದಕೂರ ಬೆಟ್ಟದಲ್ಲಿ ಮೈನವಿರೇಳಿಸೋ ‘ಚೇಳಿನ ಜಾತ್ರೆ’
ಯಾದಗಿರಿ ಜಿಲ್ಲೆಯ ಕಂದಕೂರ ಗ್ರಾಮದ ಕೊಂಡಮಾಯಿ ದೇವಿ ಬೆಟ್ಟದಲ್ಲಿ ಪ್ರತಿ ವರ್ಷ ನಾಗರಪಂಚಮಿ ದಿನದಂದು ಮೈನವಿರೇಳಿಸುವ 'ಚೇಳಿನ ಜಾತ್ರೆ' ನಡೆಯುತ್ತದೆ. ಭಕ್ತರು ವಿಷಕಾರಿ ಜೀವಂತ ಚೇಳುಗಳನ್ನು ಭಯವಿಲ್ಲದೆ ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಾರೆ. ವಿಸ್ಮಯವೆಂದರೆ ದೇವಿಯ ಸನ್ನಿಧಿಯಲ್ಲಿ ಚೇಳು ಕಚ್ಚುವುದಿಲ್ಲ, ಕಚ್ಚಿದರೂ ವಿಷ ಏರುವುದಿಲ್ಲ.

ಮುಖ್ಯಾಂಶಗಳು
- ಯಾದಗಿರಿಯ ಕಂದಕೂರ ಗ್ರಾಮದಲ್ಲಿ ನಾಗರಪಂಚಮಿ ದಿನದಂದು ಮೈನವಿರೇಳಿಸುವ ಚೇಳಿನ ಜಾತ್ರೆ ಆಚರಣೆ.
- ಕೊಂಡಮಾಯಿ ದೇವಿಯ ಸನ್ನಿಧಾನದಲ್ಲಿ ವಿಷಕಾರಿ ಕೆಂಪು ಚೇಳುಗಳು ಯಾರಿಗೂ ಕಚ್ಚುವುದಿಲ್ಲವಂತೆ.
- ಚೇಳು ಕಚ್ಚಿದರೂ ದೇವಿಯ ಭಂಡಾರ ಹಚ್ಚಿದರೆ ನೋವು ತಕ್ಷಣ ವಾಸಿಯಾಗುತ್ತದೆ.
ಯಾದಗಿರಿ, ಆಗಸ್ಟ್ 18: ಚೇಳಿನ ಹೆಸರು ಕೇಳಿದರೆನೇ ಸಾಕು ಮೈ ಜುಂ ಎನ್ನುತ್ತದೆ. ಒಂದು ವೇಳೆ ವಿಷಕಾರಿ ಚೇಳು ಕಚ್ಚಿತೋ ಮುಗಿಯಿತು ಕಥೆ. ನರ-ನಾಡಿಗಳಲ್ಲಿ ಪ್ರಾಣವೇ ಹಿಂಡುವಷ್ಟು ತೀವ್ರವಾದ ವಿಷ ಏರುತ್ತದೆ. ಅಂಥದ್ದರಲ್ಲಿ ಜೀವಂತ, ವಿಷಕಾರಿ ಚೇಳುಗಳನ್ನು ಕೈಯಲ್ಲಿ ಹಿಡಿದು ಮುದ್ದಾಡುತ್ತಾ, ಮೈ-ಮುಖದ ಮೇಲೆ ಹರಿದಾಡಿಸುತ್ತಾ ಸಂಭ್ರಮಿಸುವ ಅಪರೂಪದ ವಿಸ್ಮಯಕಾರಿ ಜಾತ್ರೆಯೊಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ನಡೆದಿದೆ.
ನಾಗರಪಂಚಮಿಯಂದು ಹಾವಿನ ಬದಲು ಚೇಳುಗಳ ಆರಾಧನೆ
ಸಾಮಾನ್ಯವಾಗಿ ನಾಗರಪಂಚಮಿ ಹಬ್ಬದಂದು ಹಾವಿಗೆ ಹಾಲೆರೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬರುವ ದೃಶ್ಯ. ಆದರೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ನಾಗರಪಂಚಮಿಯ ದಿನ ಜೀವಂತ, ವಿಷಕಾರಿ ಚೇಳುಗಳನ್ನೇ ಕೈಯಲ್ಲಿ ಹಿಡಿದು ಸಂಭ್ರಮಿಸಲಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಯಾವುದೇ ಭಯ-ಆತಂಕವಿಲ್ಲದೆ ಕೆಂಪು ಚೇಳುಗಳನ್ನು ತಮ್ಮ ಮೈಮೇಲೆ ಹರಿದಾಡಿಸಿಕೊಳ್ಳುತ್ತಾರೆ.
ದೇವಿಯ ಸನ್ನಿಧಾನದಲ್ಲಿ ಚೇಳು ಕಚ್ಚಿದ್ರೂ ವಿಷ ಏರಲ್ಲ
ಇಲ್ಲಿನ ಕೊಂಡಮಾಯಿ ದೇವಿಯ ಬೆಟ್ಟದಲ್ಲಿ ಬೆಟ್ಟದ ತುಂಬಾ ಸಾಲು ಸಾಲಾಗಿ ಚೇಳುಗಳು ಕಾಣಸಿಗುತ್ತವೆ. ಈ ಸನ್ನಿಧಾನದಲ್ಲಿ ಚೇಳುಗಳು ಯಾರಿಗೂ ಕಚ್ಚುವುದಿಲ್ಲವಂತೆ. ಒಂದು ವೇಳೆ ಯಾವುದಾದರೂ ಚೇಳು ಕಚ್ಚಿದರೂ ಸಹ ಅದರ ವಿಷ ದೇಹಕ್ಕೆ ಏರುವುದಿಲ್ಲ! ಹಾಗೊಮ್ಮೆ ನೋವಾದರೆ ಕೊಂಡಮಾಯಿ ದೇವಿಯ ಭಂಡಾರವನ್ನು (ಅರಿಶಿನ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲೇ ನೋವು ಹಾಗೂ ವಿಷ ಇಳಿಯುತ್ತದೆ ಎಂಬುದು ಇಲ್ಲಿನ ಭಕ್ತರ ದೃಢ ನಂಬಿಕೆಯಾಗಿದೆ.
ವಿವಿಧ ರಾಜ್ಯಗಳಿಂದ ಹರಿದುಬರುವ ಸಾವಿರಾರು ಭಕ್ತರು
ವಿಶೇಷವೆಂದರೆ ಈ ಬೆಟ್ಟಗುಡ್ಡಗಳಲ್ಲಿ ಬೇರೆ ದಿನಗಳಲ್ಲಿ ಹುಡುಕಿದರೂ ಚೇಳುಗಳು ಹೆಚ್ಚಾಗಿ ಕಾಣಿಸುವುದಿಲ್ಲ. ಆದರೆ ನಾಗರಪಂಚಮಿಯಂದು ಮಾತ್ರ ಎಲ್ಲಿ ನೋಡಿದರೂ ಸಾಲು ಸಾಲು ಕೆಂಪು ಚೇಳುಗಳು ಪ್ರತ್ಯಕ್ಷವಾಗುತ್ತವೆ. ಈ ಮೈನವಿರೇಳಿಸುವ ಪವಾಡವನ್ನು ಕಣ್ಣಾರೆ ಕಂಡು ದೇವಿಯ ದರ್ಶನ ಪಡೆಯಲು ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಹರಿದು ಬರುತ್ತಾರೆ. ವಿಷಕಾರಿ ಚೇಳುಗಳೊಂದಿಗೆ ಆಟವಾಡುತ್ತಾ ಆಚರಿಸುವ ಈ ಕೊಂಡಮಾಯಿ ಸನ್ನಿಧಿಯ ‘ಚೇಳಿನ ಜಾತ್ರೆ’ ನಿಜಕ್ಕೂ ಒಂದು ಅಪರೂಪದ ವಿಸ್ಮಯ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



