- TV9 Kannada Photo gallery Photos: CM DK Shivakumar Surprise Visit to Yeshwanthpur APMC Market Bengaluru
ಯಶವಂತಪುರ ಮಾರ್ಕೆಟ್ನಲ್ಲಿ ಕೂಲಿ ಕಾರ್ಮಿಕರ ಜೊತೆ ಕಾಫಿ ಕುಡಿದ ಸಿಎಂ! ಇಲ್ಲಿವೆ ಫೋಟೋಸ್
ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈರುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಂಡಿಗಳಿಗೆ ತೆರಳಿ ರೈತರು, ವರ್ತಕರು ಮತ್ತು ಮಹಿಳಾ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಅವರು, ಸ್ಥಳದಲ್ಲೇ ಅಗತ್ಯ ನಿರ್ದೇಶನಗಳನ್ನು ನೀಡಿದರು.
Updated on:Sep 08, 2026 | 11:07 AM

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ಆಲೂಗಡ್ಡೆ ಮೂಟೆಯ ಮೇಲೆ ಕುಳಿತು ಹಾಸನ ಹಾಗೂ ಆಗ್ರಾದಿಂದ ಬಂದಿದ್ದ ಆಲೂಗಡ್ಡೆಗಳನ್ನು ಖುದ್ದು ಕತ್ತರಿಸಿ ಪರಿಶೀಲಿಸಿದರು. ಮಳೆ ಇಲ್ಲದೆ ಇಳುವರಿ ಕಡಿಮೆಯಾಗಿದೆ ಹಾಗೂ ಬೋರ್‌ವೆಲ್ ಇದ್ದರೂ ವಿದ್ಯುತ್ ಸಮಸ್ಯೆಯಿದೆ ಎಂದು ಹಾಸನದ ರೈತರು ತಮ್ಮ ಅಳಲನ್ನು ಸಿಎಂ ಬಳಿ ತೋಡಿಕೊಂಡರು.

ಮಾರುಕಟ್ಟೆಯ ಈರುಳ್ಳಿ ಮಂಡಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ವ್ಯಾಪಾರಿಗಳು ಹಾಗೂ ರೈತರ ಬಳಿ ನೇರವಾಗಿ ಮಾಹಿತಿ ಪಡೆದರು. ಮಾರಾಟದ ವೇಳೆ ತೂಕದಲ್ಲಿ ಮೋಸ ಆಗುತ್ತಿದೆಯೇ ಎಂದು ರೈತರನ್ನು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ರೈತರು ತೂಕದಲ್ಲಿ ಯಾವುದೇ ಮೋಸ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಕೃಷಿ ಸಚಿವರು ಮಾರುಕಟ್ಟೆಗೆ ಬರುತ್ತಿಲ್ಲವೆಂದು ದೂರು ನೀಡಿದರು.

ಈರುಳ್ಳಿ ಮಂಡಿಯೊಳಗೆ ತೆರಳಿದ ಸಿಎಂ ಡಿ.ಕೆ. ಶಿವಕುಮಾರ್, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ನೀವು ದಿನನಿತ್ಯ ಯಾವ ಕೆಲಸ ಮಾಡುತ್ತೀರಾ ಹಾಗೂ ಎಷ್ಟು ಸಂಬಳ ನೀಡುತ್ತಾರೆ ಎಂದು ಪ್ರೀತಿಯಿಂದ ವಿಚಾರಿಸಿದರು. ಇದೇ ವೇಳೆ ಮಾರುಕಟ್ಟೆಯಲ್ಲಿದ್ದ ಮೂಲಸೌಕರ್ಯಗಳ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು.

ಎಪಿಎಂಸಿಯ ಶುಂಠಿ ಮಂಡಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ಶುಂಠಿ ಬೆಳೆಗಾರರು ಮತ್ತು ವರ್ತಕರಿಂದ ಮಾರುಕಟ್ಟೆ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿದರು. ಶುಂಠಿಯ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದ ಅವರು, ವ್ಯಾಪಾರಿಗಳು ರೈತರಿಂದ ಖರೀದಿಸುವಾಗ ಹಾಗೂ ಮಾರಾಟ ಮಾಡುವಾಗ ದರವನ್ನು ಯಾವ ರೀತಿ ನಿಗದಿಪಡಿಸುತ್ತಾರೆ ಎಂಬುದನ್ನು ವಿವರವಾಗಿ ಕೇಳಿ ತಿಳಿದುಕೊಂಡರು.

ಯಶವಂತಪುರ ಮಾರುಕಟ್ಟೆ ಪರಿಶೀಲನೆಯ ನಡುವೆ ಸಿಎಂ ಡಿ.ಕೆ. ಶಿವಕುಮಾರ್, ಶುಂಠಿ ಮಾರಾಟ ಮಾಡುವ ಮಹಿಳಾ ವ್ಯಾಪಾರಿಗಳೊಂದಿಗೆ ಅತ್ಯಂತ ಸರಳವಾಗಿ ಬೆರೆತರು. ಅವರ ಕಷ್ಟ-ಸುಖಗಳು ಹಾಗೂ ರಸ್ತೆಬದಿ ವ್ಯಾಪಾರದ ಸಮಸ್ಯೆಗಳನ್ನು ಆಲಿಸುತ್ತಾ, ಮಹಿಳಾ ಕಾರ್ಮಿಕರು ನೀಡಿದ ಕಾಫಿಯನ್ನು ಕುಡಿದು ಸೌಹಾರ್ದಯುತವಾಗಿ ಮಾತುಕತೆ ನಡೆಸಿದ್ದು ಮಾರುಕಟ್ಟೆಯಲ್ಲಿದ್ದವರ ಗಮನ ಸೆಳೆಯಿತು.
Published On - 10:17 am, Tue, 8 September 26




