Yadagiri: ಬೆಟ್ಟದ ಮೇಲೆ ಲಕ್ಷ್ಮೀ ತಿಮ್ಮಪ್ಪನ ಮಹಿಮೆ, ಬೇಡಿದ್ದೆಲ್ಲ ಈಡೇರುತ್ತದೆ ಅನ್ನೋದು ಭಕ್ತರ ಅಚಲ ನಂಬಿಕೆ
Bettada Thimmappa Temple: ಸತತ 13 ವರ್ಷಗಳಿಂದ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ.. ಈ ಬಾರಿ ದೇಶದ ವಿವಿಧ ಕಡೆಯಿಂದ ಸ್ವಾಮೀಜಿಗಳು ಹಾಗೂ ಬಂಜಾರ ಸಮುದಾಯದ ಧರ್ಮ ಗುರುಗಳು ಬಂದಿದ್ದು ವಿಶೇಷವಾಗಿತ್ತು. ಕಲಾ ತಂಡಗಳಿಂದ ಜಾತ್ರೆಗೆ ಮೆರುಗು ಬಂದಿದ್ದು ಇನ್ನೂ ವಿಶೇಷವಾಗಿತ್ತು.
ಆ ಬೆಟ್ಟದ ಮೇಲೆ ಲಕ್ಷ್ಮೀ ತಿಮ್ಮಪ್ಪ ನೆಲಸಿದ್ದಾನೆ (Bettada Thimmappa Temple). ಆ ದೇವರಲ್ಲಿ ಬೇಡಿಕೊಂಡಿದ್ದೆಲ್ಲವೂ ಈಡೇರುತ್ತದೆ ಅನ್ನೋದು ಸಾವಿರಾರು ಭಕ್ತರ ಅಚಲ ನಂಬಿಕೆಯಾಗಿದೆ. ಇದೇ ಕಾರಣಕ್ಕೆ ಲಕ್ಷ್ಮೀ ತಿಮ್ಮಪ್ಪನ ಜಾತ್ರೆ ಬಂದ್ರೆ ಸಾಕು ಸಾವಿರಾರು ಭಕ್ತರ ದಂಡೆ ಇಲ್ಲಿಗೆ ಹರಿದು ಬರುತ್ತೆ. ದೇವಸ್ಥಾನದ ಆವರಣದಲ್ಲೇ ಪುಟ್ಟ ರಥವನ್ನ ಎಳೆಯುವ ಮೂಲಕ ಅದ್ದೂರಿಯಾಗಿ ಜಾತ್ರೆಯನ್ನ ಆಚರಿಸಲಾಯ್ತು. ಈ ಬಾರಿ ದೇಶದ ನಾನಾ ಕಡೆಯಿಂದ ಸ್ವಾಮೀಜಿಗಳು ಆಗಮಿಸಿದ್ರು (yadagiri).
ಅದ್ದೂರಿಯಾಗಿ ನಡೆದ ಲಕ್ಷ್ಮೀ ತಿಮ್ಮಪ್ಪನ ಜಾತ್ರೆ.. ರಥದಲ್ಲಿ ತಿಮ್ಮಪ್ಪನನ್ನ ಕೂಡಿಸಿ ಜೈಕಾರ ಹಾಕಿದ ಭಕ್ತರು.. ನಾಡಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಅರ್ಚಕರಿಂದ ಹೋಮ ಹವನ.. ಜಾತ್ರೆಗೆ ಸಾಕ್ಷಿಯಾದ ದೇಶದ ನಾನಾ ಕಡೆಯ ಸ್ವಾಮೀಜಿಗಳು.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೋರಬಂಡ ಬಳಿಯ ಬೆಟ್ಟದ ಮೇಲೆ..
ಹೌದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಲಕ್ಷ್ಮೀ ತಿಮ್ಮಪ್ಪನ ಜಾತ್ರೆ ನಡೆಯಿತ್ತು.. ಬೆಟ್ಟದ ಮೇಲಿನ ಲಕ್ಷ್ಮೀ ತಿಮ್ಮಪ್ಪ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಸಾಕಷ್ಟು ಫೇಮಸ್ ಆಗಿರುವ ದೇವಸ್ಥಾನ.. ಕಳೆದ ಒಂದು ದಶಕದ ಹಿಂದೆಯಷ್ಟೇ ದೇವಸ್ಥಾನಕ್ಕೆ ಜೀರ್ಣೋದ್ದಾರ ಮಾಡಲಾಗಿದ್ದು ಭಕ್ತರ ದಂಡೆ ಹರಿದು ಬರ್ತಾಯಿತ್ತು. ಕಳೆದ 13 ವರ್ಷಗಳಿಂದ ಪ್ರತಿ ವರ್ಷ ದೀಪಾವಳಿ ಬಳಿಕ ಬರುವ ಕಾರ್ತಿಕ ಮಾಸದಂದೆ ಜಾತ್ರೆ ನಡೆಯುತ್ತೆ. (ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ)
ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆ ನಿನ್ನೆ ಆರಂಭವಾಗಿದೆ.. ನಿನ್ನೆ ಸಂಜೆ ಬೋರಬಂಡ ಗ್ರಾಮದಿಂದ ಬೆಟ್ಟದ ಮೇಲಿರುವ ದೇವಸ್ಥಾನದ ವರೆಗೆ ಅದ್ದೂರಿ ಮೇರವಣಿಗೆ ಮೂಲಕವಾಗಿ ತಿಮ್ಮಪ್ಪನ ಪಲ್ಲಕಿಯನ್ನ ತರಲಾಗಿದೆ. ಬಳಿಕ ರಾತ್ರಿಯಿಂದ ಬೆಳಕಿನ ವರೆಗೆ ನಾನಾ ಕಡೆಯಿಂದ ಭಜನಾ ತಂಡದಿಂದ ಭಜನೆ ಹಾಗೂ ಕೀರ್ತನೆ ಸಹ ನಡೆದಿದೆ. ಇವತ್ತು ಬೆಳಗ್ಗೆ ತಿಮ್ಮಪ್ಪನ ಮೂರ್ತಿಗೆ ವಿಶೇಷ ರೀತಿಯ ಅಲಂಕಾರ ಮಾಡಿ ಬಳಿಕ ದೇವಸ್ಥಾನ ಆವರಣದಲ್ಲಿ ವಿವಿಧ ಅರ್ಚಕರಿಂದ ನಾಡಿಗೆಲ್ಲ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ವಿಶೇಷ ಹೋಮ ಹವನ ಕೂಡ ಮಾಡಲಾಗಿದೆ.. ಇನ್ನು ಈ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರ ಬೇಡಿಕೆ ಈಡೇರುತ್ತೆ ಅಂತಾರೆ ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರೇಂದ್ರ ರಾಠೋಡ
ಇನ್ನು ನಿನ್ನೆಗಿಂತ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೆ ಜಾತ್ರೆಗೆ ಹರಿದು ಬಂದಿತ್ತು.. ವಿಶೇಷವಾಗಿ ಇವತ್ತು ದೇವಸ್ಥಾನದಲ್ಲಿ ರಥೋತ್ಸವ ಇರೋದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ರು. ದೇವರ ಮೂರ್ತಿಗೆ ವಿಶೇಷ ಅಲಂಕಾರವನ್ನ ಮಾಡಿದ ಬಳಿಕ ದೇವರ ಮೂರ್ತಿಯನ್ನ ರಥದಲ್ಲಿ ಕೂಡಿಸಲಾಗಿತ್ತು. ಬಳಿಕ ದೇವಸ್ಥಾನ ಸುತ್ತ 11 ಬಾರಿ ಪ್ರದಕ್ಷಿಣೆಯನ್ನ ಹಾಕಲಾಗಿದೆ..
ಚಿಕ್ಕದಾದ ರಥವನ್ನ ನೂರಾರು ಭಕ್ತರು ಎಳೆಯುವ ಮೂಲಕ ಭಕ್ತಿ ಪರಕಾಷ್ಠೆಯನ್ನ ಮೆರೆದಿದ್ದಾರೆ. ಇನ್ನು 11 ಸುತ್ತು ಪ್ರದಕ್ಷಿಣೆ ಹಾಕುತ್ತಾ ನೂರಾರು ಭಕ್ತರು ಮಂತ್ರವನ್ನ ಜಪಿಸುತ್ತ ಜೊತೆಗೆ ತಿಮ್ಮಪ್ಪನಿಗೆ ಜೈಕಾರ ಕೂಡ ಹಾಕ್ತಾಯಿದ್ರು.. ಇದಕ್ಕೂ ಮೊದಲು ರಥೋತ್ಸವಕ್ಕೆ ಬಂಜಾರ ಸಮೂದಾಯದ ಧರ್ಮ ಗುರುಗಳಾದ ಬಾಬುಸಿಂಗ್ ಮಹಾರಾಜರು ಚಾಲನೆ ನೀಡಿದ್ರು..
ಈ ಜಾತ್ರೆಗೆ ಈ ಬಾರಿ ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಜಾರ್ಖಂಡ, ತಮಿಳುನಾಡು ಸೇರಿದಂತೆ ನಾನಾ ರಾಜ್ಯದಿಂದ ವಿವಿಧ ಸ್ವಾಮೀಜಿಗಳು ಸಹ ಬಂದು ಭಾಗವಹಿಸಿದ್ದಾರೆ. ಜೊತೆಗೆ ಜಾತ್ರೆಗೆ ಮೆರುಗು ತಂದುಕೊಟ್ಟಿದ್ದು ಅಂದ್ರೆ ವಿವಿಧ ಕಡೆಯಿಂದ ಬಂದಿದ್ದ ಕಲಾ ತಂಡಗಳು. ವಿಶೇಷವಾಗಿ ಬಂಜಾರ ಸಮೂದಾಯ ಮಹಿಳೆಯರು ತಲೆ ಮೇಲೆ ಪೂರ್ಣಕುಂಭವನ್ನ ಹೊತ್ತುಕೊಂಡು ಹೆಜ್ಜೆ ಹಾಕಿದ್ರು. ಇದರ ಜೊತೆಗೆ ಡೊಳ್ಳು ಕುಣಿತ ಕೂಡ ವಿಶೇಷವಾಗಿತ್ತು.. ಇನ್ನು ಈ ಜಾತ್ರೆ ಯಾದಗಿರಿ ಅಷ್ಟೇ ಅಲ್ದೆ ಪಕ್ಕದ ಜಿಲ್ಲೆಗಳು ಹಾಗೂ ನೆರೆಯ ತೆಲಂಗಾಣದಿಂದ ಸಹ ಸಾಕಷ್ಟು ಭಕ್ತರು ಬರುತ್ತಾರೆ..
ಒಟ್ನಲ್ಲಿ ಸತತ 13 ವರ್ಷಗಳಿಂದ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ.. ಈ ಬಾರಿ ದೇಶದ ವಿವಿಧ ಕಡೆಯಿಂದ ಸ್ವಾಮೀಜಿಗಳು ಹಾಗೂ ಬಂಜಾರ ಸಮುದಾಯದ ಧರ್ಮ ಗುರುಗಳು ಬಂದಿದ್ದು ವಿಶೇಷವಾಗಿತ್ತು. ಕಲಾ ತಂಡಗಳಿಂದ ಜಾತ್ರೆಗೆ ಮೆರುಗು ಬಂದಿದ್ದು ಇನ್ನೂ ವಿಶೇಷವಾಗಿತ್ತು.
Published On - 4:21 pm, Tue, 8 November 22