ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್; ಟಿವಿ9 ವರದಿ ಪ್ರಸಾರವಾದ ಬೆನ್ನೆಲೆ ಎಚ್ಚೆತ್ತ ಅಧಿಕಾರಿಗಳು

ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್; ಟಿವಿ9 ವರದಿ ಪ್ರಸಾರವಾದ ಬೆನ್ನೆಲೆ ಎಚ್ಚೆತ್ತ ಅಧಿಕಾರಿಗಳು
ಮಕ್ಕಳು ಕೂಲಿ ಮಾಡುತ್ತಿದ್ದ ಜಮೀನುಗಳ ಮೇಲೆ ಅಧಿಕಾರಿಗಳ ದಾಳಿ

ಸುದ್ದಿ ಪ್ರಸಾರದ ಬೆನ್ನಲೆ ಕಾರ್ಮಿಕ ಇಲಾಖೆ, ಮಕ್ಕಳ ಸಾಹಯವಾಣಿ, ಪೊಲೀಸ್ ಇಲಾಖೆ ಅಧಿಕಾರಿಗಳು ಬಾಲ ಕಾರ್ಮಿಕರನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಿತ್ಯ ಬೆಳಗ್ಗೆ ಖುದ್ದು ಅಧಿಕಾರಿಗಳೇ ಹತ್ತಿ ಬೆಳೆಯ ಜಮೀನಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.

TV9kannada Web Team

| Edited By: preethi shettigar

Oct 26, 2021 | 3:05 PM

ಯಾದಗಿರಿ: ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದರೂ ಶಾಲೆಗೆ ಮಕ್ಕಳು ಮಾತ್ರ ಬರುತ್ತಾ ಇರಲಿಲ್ಲ. ಶಾಲೆಗೆ ಗೈರಾಗಿ ಮಕ್ಕಳು ಕೂಲಿ ಕೆಲಸಕ್ಕೆ ಹಾಜರಾಗುತ್ತಿದ್ದರು. ಹತ್ತಿ ಬಿಡಿಸುವ ಸೀಜನ್ ಆರಂಭವಾಗಿದ್ದರಿಂದ ಹಣಕ್ಕಾಗಿ ಉರಿ ಬಿಸಿಲಿನಲ್ಲಿ ಮಕ್ಕಳು ದುಡಿಯುತ್ತಿದ್ದರು. ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿದ್ದೆ ತಡ ಅಧಿಕಾರಿಗಳು ಎಚ್ಛೆತ್ತುಕೊಂಡಿದ್ದು, ಮಕ್ಕಳು ಕೂಲಿ ಮಾಡುತ್ತಿದ್ದ ಜಮೀನುಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ನಿನ್ನೆ (ಅಕ್ಟೋಬರ್ 25) ಕಿರಿಯ ಪ್ರಾಥಮಿಕ ಶಾಲೆಗಳು ಸಹ ಆರಂಭ ಆಗಿವೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದರೂ ಮಕ್ಕಳು ಮಾತ್ರ ಶಾಲೆಗೆ ಬರುತ್ತಿಲ್ಲ. ಬದಲಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತಮ್ಮ ಕುಟುಂಬದ ನಿರ್ವಹಣೆಗಾಗಿ ಪೋಷಕರ ಜೊತೆ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯ ರೈತರು ಅತಿ ಹೆಚ್ಚಾಗಿ ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಸದ್ಯ ಹತ್ತಿ ಬೆಳೆ ರಾಶಿಗೆ ಬಂದಿದೆ ಇದೇ ಕಾರಣದಿಂದ ರೈತರಿಗೆ ಹತ್ತಿ ಬಿಡಿಸಲು ಕೂಲಿಯಾಳುಗಳು ಸಿಗುತ್ತಾ ಇಲ್ಲ. ಹೀಗಾಗಿ ಮಕ್ಕಳಿಗೆ ಕೂಲಿ ಆಸೆ ತೋರಿಸಿ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಸೇರಿಸಲಾಗಿದೆ.

ನಿತ್ಯ 150 ರೂ. ಕೂಲಿ ಹಣವನ್ನು ಕೊಟ್ಟು ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಮಕ್ಕಳು ಶಾಲೆಗೆ ಗೈರಾಗಿ ಸೀಜನ್ ಮುಗಿಯುವವರೆಗೆ ಪೋಷಕರ ಜೊತೆ ಉರಿ ಬಿಸಿಲು ಲೆಕ್ಕಸದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಟಿವಿ9 ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್ ಎಂಬ ಶೀರ್ಷಿಕೆಯಡಿ ವಿಸ್ತೃತವಾದ ವರದಿಯನ್ನು ಪ್ರಸಾರ ಮಾಡಿತ್ತು. ಕೊರೊನಾದಿಂದ ಆರ್ಥಿಕವಾಗಿ ಜರ್ಜರಿತರಾಗಿರುವ ಗ್ರಾಮೀಣ ಭಾಗದ ಬಡ ಕುಟಂಬಸ್ಥರು ಖರ್ಚಿಗೆ ದುಡ್ಡಾಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈಗ ಸುದ್ದಿ ಪ್ರಸಾರ ಬೆನ್ನಲೆ ಯಾದಗಿರಿ ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಸುದ್ದಿ ಪ್ರಸಾರದ ಬೆನ್ನಲೆ ಕಾರ್ಮಿಕ ಇಲಾಖೆ, ಮಕ್ಕಳ ಸಾಹಯವಾಣಿ, ಪೊಲೀಸ್ ಇಲಾಖೆ ಅಧಿಕಾರಿಗಳು ಬಾಲ ಕಾರ್ಮಿಕರನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಿತ್ಯ ಬೆಳಗ್ಗೆ ಖುದ್ದು ಅಧಿಕಾರಿಗಳೇ ಹತ್ತಿ ಬೆಳೆಯ ಜಮೀನಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಕೂಡ ವಡಗೇರ ಮತ್ತು ಗುರುಮಠಕಲ್ ತಾಲೂಕಿನ ಕೆಲ ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಮಕ್ಕಳು ಶಾಲೆ ಇದ್ದರೂ ಸಹ ಶಾಲೆಗೆ ಗೈರಾಗಿ ಪೋಷಕರ ಜೊತೆ ಕೂಲಿ ಕೆಲಸಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ.

ಮಕ್ಕಳು ಶಾಲೆ ಬಿಟ್ಟು ಹತ್ತಿ ಬಿಡಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿ, ಪೋಷಕರಿಗೆ ಹಾಗೂ ಜಮೀನು ಮಾಲೀಕನಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಅಪರಾಧ ಎಂದು ಗೊತ್ತಿದ್ದರು ಕೆಲಸಕ್ಕೆ ಯಾಕೆ ಬಳಕೆ ಮಾಡಿಕೊಳ್ಳುತ್ತಿದ್ದೀರಾ. ನಾಳೆಯಿಂದ ಕೂಲಿ ಕೆಲಸಕ್ಕೆ ಕರೆದುಕೊಂಡು ಬಂದರೆ ಪೋಷಕರ ವಿರುದ್ಧವೇ ಕ್ರಮಕೈಗೊಳ್ಳಬೇಕಾಗುತ್ತದೆ. ಇನ್ನು ಜಮೀನು ಮಾಲೀಕರು ಸಹ ಮಕ್ಕಳು ಪೋಷಕರ ಜೊತೆ ಕೂಲಿಗೆ ಬಂದರೆ ಜಮೀನಿನಲ್ಲಿ ಕೆಲಸಕ್ಕೆ ಕರೆದುಕೊಳ್ಳಬಾರದು. ಆದರೂ ಕೂಲಿ ಕೆಲಸಕ್ಕೆ ಬಳಕೆ ಮಾಡಿಕೊಂಡರೆ ಜಮೀನು ಮಾಲೀಕನ ವಿರುದ್ಧ ಕೇಸ್ ಹಾಕಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸಾಬೀರಾ ಬೇಗಂ ತಿಳಿಸಿದ್ದಾರೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ: ರಾಯಚೂರಿನಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 59 ಮಕ್ಕಳ ರಕ್ಷಣೆ

ಮಂಗಳೂರು ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನ: ಚಾಲಕನ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada