ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದ ಸುದ್ದಿ ತಿಳಿದು ಹೃದಯಾಘಾತದಿಂದ ಅಭಿಮಾನಿ ಸಾವು
Raja Venkatappa Nayaka death: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದು, ತಮ್ಮ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು, ಕಾರ್ಯಕರ್ತರು ಆಘಾತಕ್ಕೊಳಗಾಗಿದ್ದಾರೆ. ಇನ್ನು ತಮ್ಮ ಶಾಸಕರ ಸಾವಿನ ಸುದ್ದಿ ತಿಳಿಯಿತ್ತಿದ್ದಂತೆಯೇ ವೆಂಕಟಪ್ಪ ನಾಯಕ ಅವರ ಅಭಿಮಾನಿಗೆ ಹೃದಯಾಘಾತವಾಗಿದೆ.
ಯಾದಗಿರಿ, (ಫೆಬ್ರವರಿ 25): ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ನಿಧನದ ಸುದ್ದಿ ತಿಳಿದು ಅವರ ಅಭಿಮಾನಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಸುರಪುರ ತಾಲೂಕಿನ ಮಂಗಳೂರು ಗ್ರಾಮದ ಹನುಮಂತ (65) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಹನುಮಂತ, ರಾಜಾ ವೆಂಕಟಪ್ಪನವರ ಪಕ್ಕಾ ಅಭಿಮಾನಿಯಾಗಿದ್ದರು. ಶಾಸಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಹನುಮಂತಗೂ ಸಹ ಹೃದಯಾಘಾತವಾಗಿದೆ.
ಎಲ್ಲಾ ಅಂಗಡಿ ಮುಂಗಟ್ಟು ಬಂದ್
ರಾಜಾ ವೆಂಕಟಪ್ಪ ನಾಯಕ ನಿಧನದಿಂದಾಗಿ ಸುರಪುರ ಕ್ಷೇತ್ರದಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಕ್ಷೇತ್ರದ ಶಾಸಕರ ಸಾವಿನ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ರಾಜಾ ವೆಂಕಟಪ್ಪ ನಾಯಕ ಅವರ ಮನೆ ಬಳಿ ಜಮಾಯಿಸಿದ್ದು, ತಮ್ಮ ನೆಚ್ಚಿನ ನಾಯಕನನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಸುರಪುರದಲ್ಲಿ ಸ್ವಯಂಪ್ರೇರಿತರಾಗಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ.
ಇದನ್ನೂ ಓದಿ: Raja Venkatappa Nayaka: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ
ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ನಾಲ್ಕು ಬಾರಿ ಶಾಸಕರಾಗಿದ್ದ ರಾಜ ವೆಂಕಟಪ್ಪ ನಾಯಕ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕಟ್ಟಾ ಕಾಂಗ್ರೆಸ್ ನಾಯಕನಾಗಿಯೇ ಮುಂದುವರಿದಿದ್ದರು. ಕೆಲವು ದಿನದ ಹಿಂದಷ್ಟೇ ಉಗ್ರಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ವೆಂಕಟಪ್ಪ ನಾಯಕ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಎಂ ಸೇರಿದಂತೆ ಸಚಿವರು ಸಹ ಆಸ್ಪತ್ರೆಗೆ ದೌಡಾಯಿಸಿ ಅಂತಿಮ ದರ್ಶನ ಪಡೆದರು.
ಇನ್ನು ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರವು ಇಂದು ರಾತ್ರಿ ಸುರಪುರ ತಲುಪಲಿದ್ದು, ನಾಳೆ(ಸೋಮವಾರ) ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸಂತಾಪ
ಶಾಸಕ ರಾಜಾವೆಂಕಟಪ್ಪ ನಾಯಕ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದು, ರಾಜ ವೆಂಕಟಪ್ಪ ನಾಯಕ ನಿಧನದಿಂದ ಮನಸ್ಸಿಗೆ ಅತೀವ ನೋವಾಗಿದೆ. ಅವರ ನಿಧನದಿಂದ ಕಲಬುರಗಿ ವಿಭಾಗದ ಪಕ್ಷದ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರಿಗೆ ಭಗವಂತ ದು:ಖವನ್ನು ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಸಂತಾಪ
ಸುರಪುರ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ವಾರ್ತೆ ಕೇಳಿ ನನಗೆ ಬಹಳ ನೋವುಂಟಾಯಿತು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ನಾಯಕರು, ಜನಾನುರಾಗಿಗಳೂ ಆಗಿದ್ದ ಅವರ ನಿಧನ ರಾಜ್ಯ ರಾಜಕಾರಣಕ್ಕೆ ಆಗಿರುವ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳು, ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ