Ganesh Chaturthi 2022 : ಮಹ್ಮದ್ ಅಲಿ ಕೈಯಲ್ಲಿ ಮೂಡಿಬಂದ ವಿಘ್ನನಿವಾರಕ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮುಸ್ಲಿಂ ಯುವಕನೊಬ್ಬ ಹಲವು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಗಣೇಶ ಹಬ್ಬವನ್ನು (Ganesh Festival) ಇಡೀ ದೇಶದಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತೆ. ಗಲ್ಲಿ ಗಲ್ಲಿಗಳಲ್ಲಿ ಏಕದಂತನನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತೆ. ಕೆಲ ಕಡೆ ಸರ್ವ ಧರ್ಮದ ಜನರು ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಆದರೆ ಈಗ ರಾಜ್ಯದಲ್ಲಿ ಧರ್ಮ ಧರ್ಮಗಳ ಮದ್ಯೆ ಕಂದಕ ಸೃಷ್ಟಿಯಾಗಿದೆ. ಆದರೆ ಇದರ ಮಧ್ಯೆ ಇಲ್ಲೊಬ್ಬ ಯುವಕ ಧಾರ್ಮಿಕ ಸಾಮರಸ್ಯ ಮೂಡಿಸಿದ್ದಾನೆ.
ಮುಸ್ಲಿಂ ಯುವಕನ ಕೈಯಲ್ಲಿ ಅರಳಿದ ಗಣಪ. ಯಾದಗಿರಿ (Yadgiri) ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮುಸ್ಲಿಂ ಯುವಕನೊಬ್ಬ ಹಲವು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿ ಗಮನ ಸೆಳೆದಿದ್ದಾರೆ. ಪಟ್ಟಣದ ಮೊಹಮ್ಮದ್ ಅಲಿ ಖಾದರ್ ಸಾಬ್ ವಡಿಕೇರಿ ಅವರು ಇದಕ್ಕೂ ಮುನ್ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಆ ಬಳಿಕ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡು, ಹಿಂದೂ ದೇವರ ಹಲವು ಮಣ್ಣಿನ ಮೂರ್ತಿಗಳನ್ನು ಮಾಡುತ್ತಾರೆ.
ಚಿಕ್ಕ ವಯಸ್ಸಿನಿಂದ್ಲೇ ಮೂರ್ತಿ ತಯಾರಿಕೆ ಮಹಮ್ಮದ್ ಅಲಿ ಕುಟುಂಬದಲ್ಲಿ 10 ಜನ ಸದಸ್ಯರಿದ್ದಾರೆ ಚಿಕ್ಕಂದಿನಿಂದ ಕ್ಲೈ ಮಾಡಲಿಂಗ್ ಮಾಡಿಕೊಂಡು ಬಂದಿದ್ದು, ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಬಡತನದಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿದರು. ಬಳಿಕ ಕುಟುಂಬ ನಿರ್ವಹಣೆಗಾಗಿ ಸೆಂಟ್ರಿಂಗ್ ಕೆಲಸಕ್ಕೆ ಸೇರಿಕೊಂಡರು ಆದರೆ ಮಣ್ಣಿನ ಮೇಲಿನ ಮೋಹ ಮಾತ್ರ ಬಿಡಲಿಲ್ಲ. ಮನೆಯಲ್ಲಿ ಆನೆ, ಒಂಟೆ, ಗಣೇಶ ಮೂರ್ತಿಗಳನ್ನು ಮಣ್ಣಿನಲ್ಲಿ ತಯಾರಿಸುತ್ತಾರೆ. ಅವುಗಳನ್ನು ಶಾಲೆಗಳಿಗೆ ಉಚಿತವಾಗಿಯೂ ನೀಡುತ್ತಾರೆ. ಶಾಲೆ, ಕಾಲೇಜು, ಸಂಘ, ಸಂಸ್ಥೆಗಳಿಂದ ಮೂರ್ತಿಗಳನ್ನು ತಯಾರಿಸಲು ಬೇಡಿಕೆ ಬಂದರೆ ಆದ್ಯತೆ ಮೇರೆಗೆ ತಯಾರಿಸಿ ಉಚಿತವಾಗಿ ಕೊಡುತ್ತಾರೆ.
ಮಹಮದ್ ಅಲಿ ತಯಾರಿಸಿದ ಗಣೇಶ್ ಮೂರ್ತಿ ನೋಡಿ ಜನ ಫಿದಾ
ಮೊಹಮ್ಮದ್ ಅಲಿ ಕೆಲ ವರ್ಷಗಳಿಂದ ಮಣ್ಣಿನಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಮೊಹಮ್ಮದ್ ಅಲಿ ಅವರು ಆರು ಇಂಚಿನಿಂದ ಮೂರು ಅಡಿಯವರೆಗೆ ಎತ್ತರದಷ್ಟು ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಈ ಮೊಹಮ್ಮದ್ ಅಲಿ ತಯಾರಿಸುವ ಗಣೇಶ ಮೂರ್ತಿಗಳನ್ನು ನೋಡಿ ಜನ ಫುಲ್ ಫಿದಾ ಆಗಿದ್ದಾರೆ.
ಮಣ್ಣಿನಿಂದ ಅಲ್ಲದೆ ಥರ್ಮಕೋಲ್ ನಿಂದಲೂ ತಯಾರಿಸುತ್ತಾರೆ
ಮಹಮದ್ ಅಲಿ ಅವರು ಕೇವಲ ಮಣ್ಣಿನಿಂದ ಮೂರ್ತಿಗಳನ್ನು ಮಾತ್ರ ತಯಾರಿಸುವುದಿಲ್ಲ ಬದಲಿಗೆ ಚಿತ್ರಕಲೆ ಮತ್ತು ಥರ್ಮಕೋಲ್‌ನಿಂದ ಆಕೃತಿಗಳನ್ನು ಮಾಡುತ್ತಾರೆ ಚಿತ್ರಕಲೆಯಲ್ಲಿಯೂ ಆಸಕ್ತಿ ಹೊಂದಿರುವ ಕಾರಣ ಅತ್ಯುತ್ತಮವಾಗಿ ಗಣೇಶ ಸೇರಿದಂತೆ ಬೇರೆ ಬೇರೆ ದೇವರುಗಳ ಆಕೃತಿಗಳನ್ನು ತಯಾರಿಸುತ್ತಾರೆ ಈ ಮಹಮ್ಮದ್ ಅಲಿ.