8 ದಿನಗಳಿಂದ ಊಟವಿಲ್ಲದೆ ಪರದಾಡಿದ ಅಲ್ಪಸಂಖ್ಯಾತ ಹಾಸ್ಟೆಲ್ನ ವಿದ್ಯಾರ್ಥಿನಿಯರು
ಶಹಾಪುರದ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಪೌಷ್ಠಿಕ ಆಹಾರ, ಮೂಲಭೂತ ಸೌಕರ್ಯ, ಶೌಚಾಲಯ ಸ್ವಚ್ಛತೆ, ರಕ್ಷಣೆ ಇಲ್ಲದೆ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಬುಧವಾರ ರಾತ್ರಿ ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.
ಯಾದಗಿರಿ, ಜುಲೈ 11: ಶಹಾಪುರದ (Shapura) ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ (Post Metric Minorities Girls Hostel) ವಿದ್ಯಾರ್ಥಿನಿಯರು (Students) ಕಳೆದ ಎಂಟು ದಿನಗಳಿಂದ ಊಟವಿಲ್ಲದೆ ಪರದಾಡುತ್ತಿದ್ದಾರೆ. ಪೌಷ್ಠಿಕ ಆಹಾರ, ಮೂಲಭೂತ ಸೌಕರ್ಯ, ಶೌಚಾಲಯ ಸ್ವಚ್ಛತೆ, ರಕ್ಷಣೆ ಇಲ್ಲದೆ ವಿದ್ಯಾರ್ಥಿನಿಯರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಬುಧವಾರ ರಾತ್ರಿ ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.
ರಾತ್ರಿ 9 ಗಂಟೆಯಾದರೂ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಊಟ ನೀಡುವುದಿಲ್ಲ. ಅಡುಗೆ ಸಹಾಯಕಿಯರು ತಮ್ಮ ಸ್ವಂತ ಹಣದಲ್ಲಿ ತರಕಾರಿ ತಂದು ಅಡುಗೆ ಮಾಡುತ್ತಾರೆ. ಕಳೆದ ಆರು ತಿಂಗಳಿನಿಂದ ಶೌಚಾಲಯ ಸ್ವಚ್ಛ ಮಾಡಿಲ್ಲ. ಇದರಿಂದ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ವಾಸನೆ ತಾಳಲಾರದೆ ಕೊನೆಗೆ ವಿದ್ಯಾರ್ಥಿನಿಯರೇ ಶೌಚಾಲಯ ಸ್ವಚ್ಛ ಮಾಡಿದ್ದಾರೆ. ವಸತಿ ನಿಲಯದಲ್ಲಿನ ಸಿಸಿ ಟಿವಿ ಕ್ಯಾಮೆರಾ ಕೆಟ್ಟು ಹೋಗಿ 6 ತಿಂಗಳಾಯಿತು. ವಾರ್ಡನ್ ಇಲ್ಲಿಯವರೆಗೆ ರಿಪೇರಿ ಮಾಡಿಸಿಲ್ಲ.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನೂ ವಿತರಣೆ ಆಗದ ಶಾಲಾ ಸಮವಸ್ತ್ರ; ಕೆಲ ಮಕ್ಕಳಿಗೆ ಪಠ್ಯ ಪುಸ್ತಕವೂ ಇಲ್ಲ!
ಈ ಎಲ್ಲ ಸಮಸ್ಯೆಗಳಿಗೆ ತಿಲಾಂಜಲಿ ಹಾಡಬೇಕಾದ ವಸತಿ ನಿಲಯದ ಮೇಲ್ವಿಚಾರಕಿ ಶಾರದಾ ಈ ಕಡೆ ತಲೆ ಹಾಕುವುದಿಲ್ಲ. 15 ದಿನಗಳಿಗೊಮ್ಮೆ ಅಪರೂಪದ ಅತಿಥಿಯಂತೆ ಬಂದು ಹೋಗುತ್ತಾರೆ, ಬಿಟ್ಟರೆ ಸಮಸ್ಯೆಗಳನ್ನು ಗಮನಿಸುವುದಿಲ್ಲ. ಸಮಸ್ಯೆಗಳನ್ನು ಹೇಳು ಹೋದರೆ ವಾರ್ಡನ್ ಶಾರದಾ ಮುಂದೆ ಹಿಂಸೆ ನೀಡುತ್ತಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಾರ್ಡನ್ ಶಾರದಾ ಅವರು ನಮಗೆ ಬೇಕಾಗಿಲ್ಲ, ಬೇರೆಯವರನ್ನು ನೇಮಿಸಿ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡನ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನೆಡೆಯಾಗುತ್ತಿದೆ. ಹೀಗಾಗಿ ವಸತಿ ನಿಲಯಕ್ಕೆ ಜಿಲ್ಲಾ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗೆ ಪರಿಹರಿಸುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ