
ಯಾದಗಿರಿ: ಸ್ವಂತ ತಂದೆ ತಾಯಿಯನ್ನೇ ನೋಡಿಕೊಳ್ಳದ ಇಂದಿನ ದಿನಗಳಲ್ಲಿ.. ವ್ಯಕ್ತಿ ಎಲ್ಲಿಯವರು? ಎಂದು ಕೂಡ ಗುರುತು ಪರಿಚಯ ಇಲ್ಲದ.. ಮಾತು ಬಾರದ ಅನಾಥನ ಕಾಳಜಿಗೆ ಕಾಲೂರಿ ನಿಂತಿದ್ದಾರೆ ಈ ಗ್ರಾಮದ ಯುವಕರು. ಶಹಾಪುರದಿಂದ ರಾಯಚೂರಿಗೆ ಹೋಗುವ ರಸ್ತೆಯ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಮಲಮೂತ್ರದಲ್ಲಿಯೇ ಮಲಗಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ನೋಡಿ ಆತನಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ ಸ್ವಚ್ಛ ಮಾಡಿದ್ದಾರೆ.
ಹೀಗೆ ಪ್ರತಿನಿತ್ಯ ಒಬ್ಬಿಬ್ಬರು ಸೇರಿ ಸ್ನಾನ ಮಾಡಿಸಿ ಮನೆಯಿಂದ ಅಥವಾ ಹೋಟೆಲ್ಗಳಿಂದ ಉಪಹಾರ ಮತ್ತು ಊಟ ತೆಗೆದುಕೊಂಡು ಬಂದು ಉಪಚರಿಸುತ್ತಿದ್ದಾರೆ. ಜೊತೆಗೆ ಆ ವ್ಯಕ್ತಿಯ ಬಗ್ಗೆ ನಿರಂತರವಾಗಿ ಕಾಳಜಿ ವಹಿಸಲು ವೃದ್ಧಾಶ್ರಮ ಅಥವಾ ಅನಾಥ ಆಶ್ರಮಗಳಿಗಾಗಿ ಹುಡುಕುತ್ತಿದ್ದಾರೆ. ಇದೇ ವೇಳೆ ಸ್ವತಃ ನಮ್ಮ ಜಿಲ್ಲೆಯಲ್ಲಿಯೇ ಅಂತಹ ಕಾಳಜಿ ಕೇಂದ್ರ ಇಲ್ಲದೆ.. ಊರಿನ ಯುವಕರು ಪ್ರತಿನಿತ್ಯ ವಿವಿಧ ನಗರ ಪಟ್ಟಣಗಳಿಗೆ ಸಂಪರ್ಕ ಮಾಡುತ್ತಿದ್ದಾರೆ.
ಅನಾಥಾಶ್ರಮ ಸಿಗದಿರುವುದಕ್ಕೆ ಗ್ರಾಮಸ್ಥರಿಂದಲೇ ಆಶ್ರಯ:
ಬೆಂಗಳೂರಿನಲ್ಲಿರುವ ಅನಾಥ ಆಶ್ರಮಕ್ಕೆ ಸಂಪರ್ಕಿಸಿದರೆ ಅವರು ಪೋಲಿಸ್ ಠಾಣೆಯಿಂದ ದೂರು ಪ್ರತಿ ಇದ್ದರೆ ಮಾತ್ರ ನಾವು ಸೇರಿಸಿಕೊಳ್ಳತ್ತೇವೆ ಎಂದಿದ್ದಾರೆ. ಆದರೆ ಸ್ಥಳೀಯ ಪೋಲಿಸ್ ಠಾಣೆಯವರು ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ತಾವೇ ಆ ವ್ಯಕ್ತಿಯನ್ನು ಕಾಳಜಿ ಮಾಡುವ ಕಾರ್ಯ ಮುಂದುವರಿಸಿದ್ದಾರೆ.
ಆ ವ್ಯಕ್ತಿ ಎಲ್ಲಿಯವರು? ಎಂದೂ ಗೊತ್ತಿಲ್ಲ. ನಾವೆಲ್ಲರೂ ಸೇರಿ ಅವರ ಕಷ್ಟ ನೋಡದೆ ಅವರಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿದ್ದೇವೆ. ಅವರೂ ಸಹ ನಮ್ಮ ಹಾಗೆ ಮನುಷ್ಯರು. ಅವರಿಗೂ ಸಹ ಚಳಿ ಆಗುತ್ತದೆ ಎಂದು ಹಾಸಿಗೆ ಬಟ್ಟೆ ನೀಡಿದ್ದೇವೆ. ಅವರಿಗೆ ಮಾತು ಸಹ ಬರುವುದಿಲ್ಲ. ಮಾತು ಬಂದರೆ ಅವರ ವಿಳಾಸವಾದರೂ ಕೇಳಿ ಅವರು ಹೇಳಿದ ವಿಳಾಸಕ್ಕೆ ಬಿಟ್ಟು ಬರುತ್ತಿದ್ದೆವು.
ಆದರೆ ಏನು ಮಾಡುವುದು? ಅವರಿಗೆ ಪಾರ್ಶ್ವವಾಯು ಆಗಿರುವುದರಿಂದ ಬಲಗೈ ಮತ್ತು ಬಲ ಕಾಲು ಬಿದ್ದುಹೋಗಿದೆ. ಇದರಿಂದ ಅವರ ಆರೋಗ್ಯ ಉತ್ತಮವಾಗಿಲ್ಲ. ಅವರು ಇರುವಷ್ಟು ದಿನ ನಮ್ಮ ಊರಲ್ಲಿಯೇ ಇರಲಿ. ನಂತರದಲ್ಲಿ ಆಶ್ರಮ ಸಿಕ್ಕರೆ ಅಲ್ಲಿಗೆ ಕಳಸಿಕೊಡುತ್ತೇವೆ ಎಂದು ಕಾಳಜಿ ಮಾಡುತ್ತಿರುವ ಶ್ರೀರಾಮುಲು ಅಭಿಮಾನಿಗಳ ಬಳಗದ ಮುಖ್ಯಸ್ಥರಾದ ಹೊನ್ನಪ್ಪ ದೊರೆ ಹೇಳಿದ್ದಾರೆ.

ಆಶ್ರಯ ಪಡೆಯುತ್ತಿರುವ ವ್ಯಕ್ತಿ
ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ವತಿಯಿಂದ ಇಂತಹ ವೃದ್ಧರನ್ನು, ಅನಾಥರನ್ನು ನೋಡಿಕೊಳ್ಳಲು ಕಾಳಜಿ ಕೇಂದ್ರಗಳನ್ನು ಆರಂಭಿಸಬೇಕು. ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಇಂತಹ ಅಸಹಾಯಕರ ಸಹಾಯಕ್ಕೆ ಬಳಸಬೇಕು. ನಮ್ಮ ಜಿಲ್ಲೆಯಲ್ಲಿ ಆದಷ್ಟು ಬೇಗ ಅಂತಹ ಕೇಂದ್ರ ಆರಂಭಿಸಿ ಅನಾಥರನ್ನು ಕಾಪಾಡಬೇಕು ಎಂದು ಯುವಕರ ತಂಡ ಹೇಳಿದೆ.

ಅನಾಥರಿಗೆ ಆಶ್ರಯ ನೀಡಿದ ಯುವಕರ ತಂಡ
ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾಗೂ ಮಾತು ಬರದೆ ಇರುವ ಒಬ್ಬ ಅನಾಥನನ್ನು ನೋಡಿಕೊಳ್ಳುವುದು ಮಾನವೀಯತೆ. ಅದರಂತೆ ನಾವು ಸಹ ನಮ್ಮ ಕೈಯಿಂದ ಆದಷ್ಟು ಸಹಾಯ ಮಾಡುತಿದ್ದೇವೆ ಎಂದು ಗ್ರಾಮಸ್ಥ ನಾಗರಾಜ್ ಲಕ್ಕ ಹೇಳಿದ್ದಾರೆ.
ಅನಾಥರ ಸೇವೆ ಮಾಡುವುದು ಸಂತೋಷದ ವಿಷಯ. ಅವರ ಬಗ್ಗೆ ನಾವು ಯಾವುದೇ ಸಂಕೋಚ, ಮುಜುಗರ, ಅಸಹ್ಯ ಪಡದೆ ಸಂತೋಷದಿಂದ ಸೇವೆ ಮಾಡಿದ್ದೇವೆ. ಮುಂದೆ ಯಾವುದಾದರೂ ಆಶ್ರಮ ಸಿಕ್ಕಿದರೆ ನಾವು ನಮ್ಮ ಕಡೆಯಿಂದ ಸಹಾಯ ಮಾಡುತ್ತೇವೆ ಎಂದು ಮಾನವೀಯತೆ ಮೆರೆದ ಯುವಕ ನಾಗರಾಜ ದೋರೆ ಹೇಳಿದ್ದಾರೆ.
ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್