
ಯಾದಗಿರಿ, (ಏಪ್ರಿಲ್ 03): ನಾರಾಯಣಪುರದ ಬಸವಸಾಗರ ಜಲಾಶಯದ (Basava Sagar Reservoir) ನೀರಿಗಾಗಿ ರೈತರ ಹೋರಾಟ.. ರೈತರ ಹೋರಾಟಕ್ಕೆ ಸ್ಪಂದಿಸದ ಸರ್ಕಾರ.. ರೊಚ್ಚಿಗೆದ್ದ ರೈತರು (Farmers) ತಾವೇ ಕಾಲುವೆ ಗೇಟ್ ಗಳನ್ನ ಎತ್ತಿ ಜಮೀನುಗಳಿಗೆ ನೀರು (Water) ಹರಿಸಿದ್ದಾರೆ. ಎಷ್ಟೇ ಪ್ರತಿಭಟನೆ, ಹೋರಾಟಗಳನ್ನು (Protest) ಮಾಡಿದರೂ ಸಹ ಸರ್ಕಾರ ಕ್ಯಾರೇ ಎಂದಿಲ್ಲ. ಹೀಗಾಗಿ ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ನಿನ್ನೆ(ಏಪ್ರಿಲ್ 02) ರಾತ್ರಿ ಏಕಾಏಕಿ ಎರಡು ಉಪ ಕಾಲುವೆಯ ಗೇಟ್ ಗಳನ್ನ ಓಪನ್ ಮಾಡಿ ತಮ್ಮ ಜಮೀನುಗಳಿಗೆ ನೀರುಣಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದರ ಮಧ್ಯ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವೂ ಸಹ ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶಿಸಿದೆ. ಈ ಮೂಲಕ ರೈತರು ಸಿಡಿದೆದ್ದರೆ ಏನಾಗುತ್ತೆ ಎನ್ನುವುದನ್ನು ಸರ್ಕಾರಕ್ಕೆ ತೋರಿಸಿಕೊಟ್ಟಿದ್ದಾರೆ.
ನಾರಾಯಣಪುರದ ಬಸವಸಾಗರ ಜಲಾಶಯದ ನೀರಿಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಹೋರಾಟಕ್ಕೆ ಸ್ಪಂದಿಸಿ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಒಣಗುವ ಸ್ಥಿತಿಗೆ ಬಂದಿವೆ. ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತರಿಗೆ ದೊಡ್ಡ ಆಘಾತವಾಗಿದೆ. ಬೆಳೆಗೆ ನೀರು ಸಿಗದೆ ಹೋದ್ರೆ ಬೆಳೆ ಒಣಗಿ ಹೋಗಿ ಕಂಗಲಾಗಬೇಕಾಗುತ್ತೆ.ಇದೆ ಕಾರಣಕ್ಕೆ ಏಪ್ರಿಲ್ 15 ರ ವರೆಗೆ ನೀರು ಬಿಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ರೈತರ ಮನವಿಯನ್ನ ಕಿವಿಯಲ್ಲಿ ಹಾಕಿಕೊಂಡಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಯಾವೇ ಕಾಲುವೆ ಗೇಟ್ಗಳನ್ನು ಓಪನ್ ಮಾಡಿದ್ದಾರೆ.
ನಾರಾಯಣಪುರದ ಎಡದಂಡೆ ಕಾಲುವೆಯ ಎರಡು ಉಪ ಕಾಲುವೆಗಳಾದ ಉಒ ಕಾಲುವೆ ನಂಬರ್ 10 ಎ ಹಾಗೂ 11 ಗೇಟ್ ಗಳನ್ನ ರಾತ್ರೋರಾತ್ರಿ ಓಪನ್ ಮಾಡಿದ್ದಾರೆ. ಗೇಟ್ ಗಳನ್ನ ಓಪನ್ ಮಾಡಿಕೊಂಡು ನಿರಂತರವಾಗಿ 100 ಕ್ಯೂಸೆಕ್ಸ್ ನೀರನ್ನ ಉಪ ಕಾಲುವೆಗಳಿಗೆ ಹರಿಸಿಕೊಳ್ಳುತ್ತಿದ್ದಾರೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯಿಂದ ಕಲಬುರಗಿ ನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಅದೆ ನೀರನ್ನ ಉಪ ಕಾಲುವೆಗಳನ್ನ ಓಪನ್ ಮಾಡಿ ತಮ್ಮ ಜಮೀನುಗಳಿಗೆ ಬಿಟ್ಟುಕೊಳ್ಳುತ್ತಿದ್ದಾರೆ.
ಉಪ ಕಾಲುವೆಯ ನೀರು ನಿನ್ನೆ ರಾತ್ರಿಯಿಂದ ಸುಮಾರು 10 ಹಳ್ಳಿಯ ಸಾವಿರಾರು ಎಕರೆ ಪ್ರದೇಶಕ್ಕೆ ಹರಿದು ಹೋಗಿದೆ. ಇದರಿಂದ ರೈತರ ಬೆಳೆಗೆ ಜೀವ ಕಳೆ ಬಂದಂತಾಗಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಮದ್ಯೆ ಅಕ್ರಮವಾಗಿ ನೀರು ಬಿಟ್ಟುಕೊಂಡ ಕಾರಣಕ್ಕೆ ವಾಗ್ವಾದ ಕೂಡ ನಡೆಯಿತು. ಬಳಿಕ ಸ್ಥಳಕ್ಕೆ ನೂರಾರು ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನ ಶಾಂತಗೊಳಿಸಿದ್ದಾರೆ. ಆದ್ರೆ ರೈತರು ಯಾವುದೇ ಕಾರಣಕ್ಕೂ ಗೇಟ್ ಗಳನ್ನ ಬಂದ್ ಮಾಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ರೈತರು ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಬಿಟ್ಟುಕೊಳ್ಳುತ್ತಿರುವುದರ ಮದ್ಯೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದಿಂದ ರೈತರಿಗೆ ನೀರು ಬಿಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. ಯಾಕಂದ್ರೆ ಕಳೆದ ತಿಂಗಳು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕಾಲುವೆಗಳಿಗೆ ಎಪ್ರಿಲ್ 1 ರಿಂದ 6 ರ ತನಕ ನೀರು ಹರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದ್ರೆ ನಿರ್ಣಯವನ್ನ ಜಾರಿಗೆ ತರುವ ಕೆಲಸ ಮಾಡಿರಲಿಲ್ಲ. ಇದೆ ಕಾರಣಕ್ಕೆ ಹುಣಸಗಿ ತಾಲೂಕಿನ ಮಲ್ಲಿಕಾರ್ಜುನ ಎಂಬ ರೈತ ಸರ್ಕಾರದ ವಿರುದ್ಧ ಕಲಬುರಗಿ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಾಳೆಯಿಂದ(ಏಪ್ರಿಲ್ 04) ರಿಂದ ಏಪ್ರಿಲ್ 6ರ ತನಕ ಜಲಾಶಯ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ 0.8 ಟಿಎಂಸಿ ನೀರು ಹರಿಸುವಂತೆ ಆದೇಶಿಸಿದೆ.
ಅಕ್ರಮವಾಗಿ ಕಾಲುವೆಗಳ ಗೇಟ್ ಗಳನ್ನ ಓಪನ್ ರೈತರು ಬಿಡೋದ್ದನ್ನ ಕೊನೆಗೆ ಹೈಕೋರ್ಟ್ ಆದೇಶ ಆಗಿದೆ. ಹೀಗಾಗಿ ನಾಳೆಯಿಂದ ನೀರು ಬಿಡುತ್ತೇವೆ ಎಂದು ಅಧಿಕಾರಿಗಳು ರೈತರ ಮನವೋಲಿಸಿ ಗೇಟ್ ಗಳನ್ನು ಬಂದ್ ಮಾಡಿದ್ದಾರೆ. ಇನ್ನು ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಬಿಟ್ಟಿರುವ ಕಾರಣಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಕೆಂಭಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಪ್ರತಿಭಟನೆ, ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಕಾರಣಕ್ಕೆ ತಾವೇ ಸ್ವತ ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಹರಿಸುವ ಕೆಲಸವನ್ನ ರೈತರು ಮಾಡಿದ್ದಾರೆ. ಈ ಮೂಲಕ ರೈತರು ಸಿಡಿದೆದ್ದರೆ ಏನಾಗುತ್ತೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
Published On - 9:25 pm, Thu, 3 April 25