
ರಾಯಚೂರು: ಗ್ರಾಮ ಪಂಚಾಯತಿಯ ಚುನಾವಣಾ ವೈಷಮ್ಯ ಓರ್ವ ಯುವಕನನ್ನ ಬಲಿ ತೆಗೆದುಕೊಂಡ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸಾವಂತಗೇರ ಬಳಿ ನಡೆದಿದೆ.
ಮಾನವಿ ತಾಲೂಕಿನ ಗವಿಗಟ್ ಗ್ರಾಮದ ನಿವಾಸಿ ಅಮರೇಶ್ (28)ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಇದಲ್ಲದೇ ಆತನ 3 ಸ್ನೇಹಿತರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದು, ಮಲ್ಲಯ್ಯ, ಮಹಾದೇವ, ರಮೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ
ಜಾಲಹಳ್ಳಿ ಬಳಿ ರಸ್ತೆಯಲ್ಲಿ ನಿಂತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದ್ದು, ಬಳಿಕ ರೌಡಿಗಳು ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ರಾಜಕೀಯ ದ್ವೇಷದಿಂದಲೇ ದಾಳಿ ನಡೆಸಿದ್ದಾರೆಂದು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಲ್ಲಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಅಮರೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಮಲ್ಲಯ್ಯನಿಗೆ ಸೂಚಕನಾಗಿದ್ದ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕೊಲೆ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.