AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಲಿ ಕೆಲಸದ ಬಸವರಾಜನಿಗೆ ಸಾಹಿತ್ಯದ್ದೇ ತುಡಿತ: ಸ್ವತಃ ಕವಿ, ಓದುಗ, ಮೇಲಾಗಿ ಪುಸ್ತಕ ದಾನಿ

ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುವ ಬಸವರಾಜನಿಗೆ ಸಾಹಿತ್ಯದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಬಾಲ್ಯದಲ್ಲಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಜನಪದ ಹಾಡು, ಕಥೆಗಳನ್ನು ಕೇಳುತ್ತಿದ್ದರು. ಜೊತೆಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಕಥೆ, ಕವನಗಳನ್ನು ಓದುತ್ತಿದ್ದರು. ಇಂದಿಗೂ ಓದು ಮುಂದುವರಿಸಿದ್ದಾರೆ, ಇವರದ್ದೊಂದು ಕವನ ಸಂಕಲನವೂ ಪ್ರಕಟವಾಗಿದೆ.

ಕೂಲಿ ಕೆಲಸದ ಬಸವರಾಜನಿಗೆ ಸಾಹಿತ್ಯದ್ದೇ ತುಡಿತ: ಸ್ವತಃ ಕವಿ, ಓದುಗ, ಮೇಲಾಗಿ ಪುಸ್ತಕ ದಾನಿ
ಬಸವರಾಜ ಬಾಗೇವಾಡಿಮಠ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 07, 2021 | 5:16 PM

ಹಾವೇರಿ: ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಲ್ಲೊಬ್ಬ ಯುವಕ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ಪುಸ್ತಕಗಳನ್ನು ಖರೀದಿಸಿ ಓದಿ, ನಂತರ ಪುಸ್ತಕಗಳನ್ನು ವಿಶ್ವವಿದ್ಯಾಲಯಕ್ಕೆ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಾಗಂತ ಈ ಯುವಕನೇನೂ ದೊಡ್ಡ ಶ್ರೀಮಂತನಲ್ಲ. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಯುವಕನ ಪುಸ್ತಕ ಪ್ರೀತಿಯ ಕಥೆಯಿದು.

ಹೌದು ದಿನವಿಡಿ ಕಿರಾಣಿ ಅಂಗಡಿಯಲ್ಲಿ ಕೆಲಸ‌ ಮಾಡುತ್ತಾ ಪುಸ್ತಕಗಳನ್ನು ಕೊಂಡು ಓದುವ ಗೀಳು ಹಚ್ಚಿಕೊಂಡಿರುವ ಯುವಕನ ಹೆಸರು ಬಸವರಾಜ ಬಾಗೇವಾಡಿಮಠ. ರಾಣೆಬೆನ್ನೂರು ನಗರದ ನಿವಾಸಿ. ಹತ್ತನೆ ತರಗತಿಯವರೆಗೆ ಅಭ್ಯಾಸ ಮಾಡಿರುವ ಬಸವರಾಜ, ಕುಟುಂಬದಲ್ಲಿನ ಬಡತನದ ಕಾರಣಕ್ಕೆ ಓದು ನಿಲ್ಲಿಸಿ, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬಸವರಾಜನದು ಆರು ಜನರ ಕುಟುಂಬ. ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುವ ಈತನಿಗೆ ತಿಂಗಳಿಗೆ ಆರೂವರೆ ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ಬಂದ ಹಣದಲ್ಲಿ ಕುಟುಂಬ ನಿರ್ವಹಣೆಯ ಜೊತೆಜೊತೆಗೆ ಸಾಹಿತ್ಯ ಮತ್ತು ಪುಸ್ತಕ ಖರೀದಿಗೆ ಹಣವನ್ನು ಮೀಸಲಿಡುತ್ತಾನೆ.

ಸಾಹಿತ್ಯ ರಚನೆಗೂ ಈ ಯುವಕ ಸೈ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುವ ಬಸವರಾಜನಿಗೆ ಸಾಹಿತ್ಯದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಬಾಲ್ಯದಲ್ಲಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಜನಪದ ಹಾಡು, ಕಥೆಗಳನ್ನು ಕೇಳುತ್ತಿದ್ದರು. ಜೊತೆಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಕಥೆ, ಕವನಗಳನ್ನು ಓದಿ ತಾನೂ ಏಕೆ ಸಾಹಿತ್ಯ ರಚನೆ ಮಾಡಬಾರದು ಎಂದು ಸಾಹಿತ್ಯ ರಚನೆ ಮಾಡುತ್ತಿದ್ದಾರೆ.

ಈವರೆಗೆ ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. ಕವನಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೀದರ್, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಬಸವರಾಜನಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.

book love

ಬಸವರಾಜ ಬಾಗೇವಾಡಿಮಠ ಬರೆದ ಪುಸ್ತಕ

ವಿಶ್ವವಿದ್ಯಾಲಯಕ್ಕೆ ಪುಸ್ತಕ ಉಡುಗೊರೆ ಕಿರಾಣಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುವ ಬಸವರಾಜನಿಗೆ ತಿಂಗಳಿಗೆ ಆರೂವರೆ ಸಾವಿರ ರೂಪಾಯಿ ಸಂಬಳ ಬರುತ್ತದೆ. ಅದರಲ್ಲಿ ಸ್ವಲ್ಪ ಹಣವನ್ನು ಪುಸ್ತಕ ಖದೀರಿಗೆ ಉಪಯೋಗಿಸುತ್ತಾನೆ. ಗಝಲ್, ಕಥೆ, ಕವನ ಸಂಕಲನ, ಕಾದಂಬರಿ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಅದರಲ್ಲಿ ಬಿಡುವಿನ ವೇಳೆಯಲ್ಲಿ ಕೆಲವೊಂದು ಪುಸ್ತಕಗಳನ್ನು ಓದಿದ್ದರೆ, ಬಹುತೇಕ ಪುಸ್ತಕಗಳನ್ನು ಕೆಲಸದ ಒತ್ತಡದಲ್ಲಿ ಬಸವರಾಜ ಓದಿಲ್ಲ. ಆದರೂ ತಾನು ಖರೀದಿಸಿರುವ ಪುಸ್ತಕಗಳು ಓದುಗರ ದಾಹ ನೀಗಿಸಲಿ ಎಂದುಕೊಂಡು ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದ್ದಾನೆ. ಈವರೆಗೆ 101 ಪುಸ್ತಕಗಳನ್ನು ಜಾನಪದ ವಿಶ್ವವಿದ್ಯಾಲಯಕ್ಕೆ ಕಾಣಿಕೆಯಾಗಿ ನೀಡಿದ್ದಾನೆ.

book love

ಕಾರ್ಯಕ್ರಮವೊಂದರಲ್ಲಿ ಬಸವರಾಜ ಬಾಗೇವಾಡಿಮಠ ಪುಸ್ತಕ ಬಿಡುಗಡೆ

ಓದುಗರಿಗೆ ಅನುಕೂಲ ಆಗಲಿ ಎಂದು ಮನಃಪೂರ್ವಕವಾಗಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿರುವೆ. ನನಗೆ ಕೆಲಸದ ಒತ್ತಡದಲ್ಲಿ ಪುಸ್ತಕಗಳನ್ನು ಓದಲು ಅಷ್ಟೊಂದು ಸಮಯ ಸಿಗುತ್ತಿರಲಿಲ್ಲ. ಆದಕಾರಣ ಓದುಗರಿಗೆ ಪುಸ್ತಕಗಳು ಅನುಕೂಲ ಆಗಲಿ ಎಂದು ಪುಸ್ತಕಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಿರುವೆ. ಈವರೆಗೆ ವಿಶ್ವವಿದ್ಯಾಲಯಕ್ಕೆ 101 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿರುವೆ ಎಂದು ಪುಸಕ್ತಪ್ರೇಮಿ ಬಸವರಾಜ ಬಾಗೇವಾಡಿಮಠ ಹೇಳಿದರು.

book love

ಬಸವರಾಜ ಬಾಗೇವಾಡಿಮಠ

ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಖರೀದಿಸಿ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮೊಬೈಲ್, ಕಂಪ್ಯೂಟರ್ ಪರದೆ‌ ಮುಂದೆಯೆ ಕುಳಿತು ಕಾಲ‌ ಕಳೆಯುವ ಪರಿಸ್ಥಿತಿ ಬಂದಿದೆ. ಅಂತಹದರಲ್ಲಿ ಕಿರಾಣಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಪುಸ್ತಕಗಳನ್ನು ಖರೀದಿಸಿ ಓದುವುದಲ್ಲದೆ, ಪುಸ್ತಕಗಳನ್ನು ವಿಶ್ವವಿದ್ಯಾಲಯಕ್ಕೆ ಕೊಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಬಸವರಾಜ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸ್ಥಳೀಯರಾದ ಶಿವಕುಮಾರ ತಿಳಿಸಿದ್ದಾರೆ.

book love

ಬಸವರಾಜ ಬಾಗೇವಾಡಿಮಠ ಬರೆದ ಪುಸ್ತಕದ ಚಿತ್ರ

ಬಸವರಾಜ ಬಾಗೇವಾಡಿಮಠ ಅವರ ಸಂಪರ್ಕ ಸಂಖ್ಯೆ: 9611381039

 India Book of Records ಗೆ ದಾಖಲು! ಧಾರವಾಡದ ಈ ಬಾಲಕಿಯ ಸಾಧನೆ ಏನು ಗೊತ್ತಾ?

Published On - 5:16 pm, Sun, 7 February 21