ವಿದ್ಯಾರ್ಜನೆಗಾಗಿ ಗ್ರಂಥಾಲಯ ನಿರ್ಮಾಣ; ಯಾದಗಿರಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ಬೆಳಕಾದ ಯುವಕರ ತಂಡ

ಕಳೆದ ಆರು ತಿಂಗಳ ಹಿಂದೆ ಗ್ರಾಮದ ಎಲ್ಲಾ ಯುವಕರು ಸೇರಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯ ಮಾಡಬೇಕು ಎಂದು ನಿರ್ಧರಿಸಿದ್ದರು. ಅದರಂತೆ ಈ ಗ್ರಾಮದಲ್ಲಿ ಗ್ರಂಥಾಲಯ ಮಾಡುವುದಕ್ಕೆ ಮುಂದೆ ಬಂದಿದ್ದು, ಈ ಗ್ರಾಮದ ಸರ್ಕಾರಿ ನೌಕರಿ ಪಡೆದು ಸೇವೆ ಸಲ್ಲಿಸುತ್ತಿರುವ ಯುವಕರು.

  • ಅಮೀನ್ ಹೊಸುರು
  • Published On - 9:38 AM, 5 Apr 2021
ವಿದ್ಯಾರ್ಜನೆಗಾಗಿ ಗ್ರಂಥಾಲಯ ನಿರ್ಮಾಣ; ಯಾದಗಿರಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ಬೆಳಕಾದ ಯುವಕರ ತಂಡ
ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಲು ಗ್ರಂಥಾಲಯ ನಿರ್ಮಾಣ

ಯಾದಗಿರಿ: ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಯಾದಗಿರಿ, ಎಸ್ಎಸ್ಎಲ್​ಸಿ ಹಾಗೂ ಪಿಯುಸಿ ಫಲಿತಾಂಶ ಬಂದಾಗ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿರುತ್ತದೆ. ಸರ್ಕಾರಿ ನೌಕರಿಗಳನ್ನ ಪಡೆದುಕೊಳ್ಳುವುದರಲ್ಲಿಯೂ ಕೂಡ ಹಿಂದುಳಿದಿದೆ. ಇಲ್ಲಿನ ವಿದ್ಯಾರ್ಥಿಗಳಲ್ಲಿನ ಓದಿನ ಆಸಕ್ತಿ ಹೆಚ್ಚಿಸಲು ಯುವಕರ ಬಳಗ ಒಂದು ಹೊಸ ಯೋಜನೆ ಮಾಡಿದ್ದು, ಸ್ವಂತ ಹಣದಿಂದ ಗ್ರಂಥಾಲಯ ಆರಂಭಿಸಿದ್ದಾರೆ. ಸದ್ಯ ಇಡೀ ಗ್ರಾಮಸ್ಥರು ಈ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು, ವಿದ್ಯಾರ್ಜನೆಯ ಮಾರ್ಗದಲ್ಲಿ ಸಾಗುತ್ತಿದ್ದಾರೆ.

ಶೈಕ್ಷಣಿಕ ಸಂಪನ್ಮೂಲದ ಕೊರತೆಯಿಂದ ಯಾದಗಿರಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದೆ. ಇದನ್ನ ಹೋಗಲಾಡಿಸಲು ಯಾದಗಿರಿ ತಾಲೂಕಿನ ಶಟ್ಟಿಗೇರ ಗ್ರಾಮದಲ್ಲಿ ಈ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ. ಯಾವುದೇ ಸರ್ಕಾರಿ ಸಹಾಯ ಪಡೆಯದೆ ಗ್ರಾಮದ ಯುವಕರೇ ಸೇರಿ ಗ್ರಾಮದಲ್ಲಿ ಒಂದು ಗ್ರಂಥಾಲಯ ಆರಂಭಿಸಿದ್ದಾರೆ. ಗ್ರಾಮದ ಯುವಕರು ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯುವತ್ತ ಪ್ರಯತ್ನಿಸಲಿ ಎಂದು ಈ ಗ್ರಂಥಾಲಯ ಆರಂಭಿಸಿದ್ದಾರೆ.

ಗ್ರಾಮದ ವಿದ್ಯಾರ್ಥಿಗಳು ಶಾಲೆ , ಕಾಲೇಜುಗಳ ತರಗತಿ ಮುಗಿದ ಮೇಲೆ ನೇರವಾಗಿ ಈ ಗ್ರಂಥಾಲಯಕ್ಕೆ ಬಂದು ತಮಗೆ ಬೇಕಾದ ಪುಸ್ತಕಗಳನ್ನ ಓದಿ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದಾರೆ. ಗ್ರಂಥಾಲಯಕ್ಕೆ ಕಾಲಿಟ್ಟರೆ ಸಾಕು ಎಲ್ಲಾ ತರಹದ ಪುಸ್ತಕಗಳು ಹಾಗೂ ಮ್ಯಾಗಜಿನ್​​ಗಳು ಸಿಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಎಲ್ಲಾ ತರಹದ ಪುಸ್ತಕಗಳನ್ನ ಇಲ್ಲಿ ಇಡಲಾಗಿದೆ. ಜೊತೆಗೆ ಸಾಹಿತ್ಯ ಆಸಕ್ತಿ ಇರುವವರಿಗೆ ಬೇಕಾಗುವ ಪುಸ್ತಕಗಳನ್ನ ಕೂಡ ಈ ಗ್ರಂಥಾಲಯದಲ್ಲಿ ಇಡಲಾಗಿದೆ. ಈ ಗ್ರಂಥಾಲಯ ಆರಂಭವಾಗಿದ್ದರಿಂದ ನಮ್ಮ ಗ್ರಾಮದ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದಿನ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಪವಿತ್ರಾ ಹೇಳಿದ್ದಾರೆ.

library

ಗ್ರಾಮದ ವೆಂಕಟೇಶ್ ಎಂಬುವವರ ಮನೆಯಲ್ಲಿ ಗ್ರಂಥಾಲಯಕ್ಕೆ ಅವಕಾಶ

ಕಳೆದ ಆರು ತಿಂಗಳ ಹಿಂದೆ ಗ್ರಾಮದ ಎಲ್ಲಾ ಯುವಕರು ಸೇರಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯ ಮಾಡಬೇಕು ಎಂದು ನಿರ್ಧರಿಸಿದ್ದರು. ಅದರಂತೆ ಈ ಗ್ರಾಮದ ಸರ್ಕಾರಿ ನೌಕರಿ ಪಡೆದು ಸೇವೆ ಸಲ್ಲಿಸುತ್ತಿರುವ ಯುವಕರು, ಗ್ರಾಮದಲ್ಲಿ ಗ್ರಂಥಾಲಯ ಮಾಡುವುದಕ್ಕೆ ಮುಂದೆ ಬಂದು ಅಂದುಕೊಂಡಿದ್ದನ್ನು ಕಾರ್ಯಗತಗೊಳಿಸಿದ್ದಾರೆ.

ಅಂದಹಾಗೆ ಈ ಗ್ರಾಮದಲ್ಲಿ 30 ಕ್ಕೂ ಅಧಿಕ ಯುವಕರು ಸರ್ಕಾರಿ ನೌಕರಿ ಪಡೆದು ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಅರೆಕಾಲಿಕ ನೌಕರಿ ಮಾಡುತ್ತಿರುವ ಯುವಕರು ಸಹ ಇದಕ್ಕೆ ಕೈ ಜೊಡಿಸಿ ಗ್ರಂಥಾಲಯ ಸ್ಥಾಪನೆಗೆ ಸಹಾಯ ಮಾಡಿದ್ದಾರೆ. ಈ ಹಿಂದೆಯೇ ಕೆಲವರು ಗ್ರಂಥಾಲಯ ಆರಂಭಿಸುವುದಕ್ಕೆ ಪುಸ್ತಕಗಳನ್ನ ಖರೀದಿ ಮಾಡಿದ್ದರಾದರೂ ಗ್ರಂಥಾಲಯ ಆರಂಭಿಸುವುದಕ್ಕೆ ಕಟ್ಟಡದ ಕೊರತೆ ಇತ್ತು. ಈಗ ಆ ಕೊರತೆ ನೀಗಿದೆ.

library

ಗ್ರಂಥಾಲಯದಲ್ಲಿನ ಪುಸ್ತಕಗಳ ಚಿತ್ರಣ

ಗ್ರಾಮದ ವೆಂಕಟೇಶ್ ಎಂಬುವವರು ತನ್ನ ಸ್ವಂತ ಮನೆಯಲ್ಲಿಯೇ ಗ್ರಂಥಾಲಯ ಆರಂಭಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಪುಸ್ತಕ ದಾನಿಗಳು ಸಹ ಕೈಜೊಡಿಸಿದ್ದು, ಸಾಕಷ್ಟು ಪುಸಕ್ತಗಳನ್ನು ನೀಡಿದ್ದಾರೆ. ಇದೇ ಕಾರಣದಿಂದ ಈ ಗ್ರಂಥಾಲಯದಲ್ಲಿ ಎಲ್ಲಾ ತರಹದ ಪುಸ್ತಕಗಳು ಸಿಗುತ್ತಿವೆ. ಗ್ರಾಮದ ಯುವಕರು ನಿತ್ಯ ದಿನಪತ್ರಿಕೆಗಳನ್ನ ತಂದು ಗ್ರಂಥಾಲಯದಲ್ಲಿ ಇಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ನಿತ್ಯ ಗ್ರಂಥಾಲಯಕ್ಕೆ ಬಂದು ದಿನ ಪತ್ರಿಕೆಗಳನ್ನ ಓದುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿಯಿಂದ ಗ್ರಂಥಾಲಯಕ್ಕೆ ಒಂದು ಕಟ್ಟಡ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಅದು ಕೂಡ ಆದಷ್ಟು ಬೇಗ ಆಗಲಿದೆ ಎಂದು ಗ್ರಂಥಾಲಯ ನಿರ್ವಾಹಕ ವೆಂಕಟೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಬೇರೆ ಕೆಟ್ಟ ಕೆಲಸಗಳಲ್ಲಿ ಹಣವನ್ನ ವ್ಯರ್ಥ ಮಾಡುತ್ತಾರೆ. ಆದರೆ ಈ ಶೆಟ್ಟಗೇರ ಗ್ರಾಮದ ಯುವಕರು ಮಾತ್ರ ಒಂದು ಒಳ್ಳೇಯ ಕೆಲಸಕ್ಕೆ ಹಣವನ್ನ ಹಾಕಿ ಗ್ರಾಮದ ಯುವಕರ ಓದಿಗೆ ಸಹಾಯ ಮಾಡುತ್ತಿರುವುದು ನೀಜಕ್ಕೂ ಶ್ಲಾಘನೀಯ

(ಅಮೀನ್ ಹೊಸುರು – 9980914141)

ಇದನ್ನೂ ಓದಿ: ಬೌದ್ಧ ಧಾರ್ಮಿಕ ಸಾಹಿತ್ಯ ಸಂರಕ್ಷಣೆಗೆ ಗ್ರಂಥಾಲಯ ರಚನೆ: ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವ

(Youths built library with their own money for students and publics to earn knowledge in Yadgir)