
ಬೆಂಗಳೂರು, ಸೆಪ್ಟೆಂಬರ್ 1: ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಜಿ ಸಚಿವ ಬಿಸಿ ಪಾಟೀಲ್ (BC Patil) ಆರೋಪಿಸಿದ್ದಾರೆ. ಈ ಬಗ್ಗೆ ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ಅವರು, ಝೀರೋ ಟ್ರಾಫಿಕ್‌ನಿಂದಾಗಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು ಎಂದು ಹೇಳಿದ್ದಾರೆ. ‘ಇಂದು ಬೆಳಗ್ಗೆ 5.30ರ ಸುಮಾರಿಗೆ ಬೆಂಗಳೂರಿನಿಂದ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ರಸ್ತೆ ಸಂಚಾರವನ್ನು ತಡೆದು ‘ಝೀರೋ ಟ್ರಾಫಿಕ್’ ಇದೆ ಎಂದು ತಿಳಿಸಿದರು’ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ. ಯಾರು ತೆರಳುತ್ತಿದ್ದಾರೆ ಎಂದು ವಿಚಾರಿಸಿದಾಗ ಕರ್ನಾಟಕದ ಗೃಹ ಸಚಿವರು ಏರ್‌ಪೋರ್ಟ್‌ಗೆ ಹೋಗುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾಗಿ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಅಲ್ಪರಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಲಿ ಕೊಡೆ ಹಿಡಿದಿದ್ದರು’ ಎಂದ ಹಾಗಾಯ್ತು ಈ ಕರ್ನಾಟಕ ರಾಜ್ಯದ ಗೃಹಮಂತ್ರಿ ಕತೆ ಎಂದು ವ್ಯಂಗ್ಯವಾಡಿರುವ ಬಿಸಿ ಪಾಟೀಲ್, ಸಾಕಷ್ಟು ಪ್ರಯಾಣಿಕರು ಫ್ಲೈಟ್ ತಪ್ಪಿ ಹೋಗುತ್ತೆ ಅಂತ ಪರದಾಡ್ತಾ ಇದ್ದರು ಎಂದು ಉಲ್ಲೇಖಿಸಿದ್ದಾರೆ.
ಇಂದು ಬೆಳಿಗ್ಗೆ 5:30 ಗಂಟೆಗೆ ಬೆಂಗಳೂರಿಂದ ಏರ್ಪೋರ್ಟ್ ಗೆ ಹೋಗುತ್ತಿರುವಾಗ ಟ್ರಾಫಿಕ್ ಪೊಲೀಸ್ ನವರು ಟ್ರಾಫಿಕ್ ಬಂದ್ ಮಾಡಿ ಜೀರೋ ಟ್ರಾಫಿಕ್ ಇದೆ ಅಂತ ಹೇಳಿದರು ಯಾಕೆ ಜಿರೋ ಟ್ರಾಫಿಕ್ ಮಾಡ್ತಾ ಇದ್ದೀರಿ, ಯಾರು ಹೋಗ್ತಾ ಇದ್ದಾರೆ ಅಂದ್ರೆ ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳು ಏರ್‌ಪೋರ್ಟ್‌ಗೆ ಹೋಗ್ತಾ ಇದ್ದಾರೆ ಅಂತ ಹೇಳಿದ್ರು pic.twitter.com/uuTJry0ZIl
— B C Patil (@bcpatilkourava) September 1, 2026
ಗೃಹ ಸಚಿವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಅಗತ್ಯವಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ. ಝೀರೋ ಟ್ರಾಫಿಕ್‌ನಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ, ಏರ್‌ಪೋರ್ಟ್‌ಗೆ ತೆರಳುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೆಲವರು ವಿಮಾನ ತಪ್ಪುವ ಆತಂಕದಲ್ಲಿದ್ದರು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 911 ಅಕ್ರಮ ನುಸುಳುಕೋರರ ಪತ್ತೆ: ಪರಿಷತ್‌ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
ಪ್ರಿಯಾಂಕ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರ ಪುತ್ರ ಎಂಬ ಕಾರಣಕ್ಕೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿರುವ ಬಿ.ಸಿ. ಪಾಟೀಲ್, ಇಂತಹ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಗೃಹ ಸಚಿವರಿಗೆ ಸೂಕ್ತ ತಿಳುವಳಿಕೆ ನೀಡಿ, ಕಾನೂನುಬದ್ಧವಾಗಿ ನಡೆದುಕೊಳ್ಳುವಂತೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ