ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ..ಆದರೆ ಈ ಮೂರು ಮಿಥ್ಯೆಗಳನ್ನು ನಂಬಬೇಡಿ

ವ್ಯಾಯಾಮ ಮಾಡಿ ಆದರೆ ತಪ್ಪು ಕಲ್ಪನೆಗಳಿಂದ ಹೊರಬಂದು, ಸೂಕ್ತ ರೀತಿಯಲ್ಲಿ, ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು, ಹೊಂದಿಕೊಳ್ಳುವ ವರ್ಕೌಟ್​ಗಳನ್ನು ಮಾಡಿ ಎಂದು ಯಾಸ್ಮಿನ್​ ಸಲಹೆ ನೀಡಿದ್ದಾರೆ.

ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ..ಆದರೆ ಈ ಮೂರು ಮಿಥ್ಯೆಗಳನ್ನು ನಂಬಬೇಡಿ
ಯಾಸ್ಮಿನ್ ಕರಾಚಿವಾಲಾ
Lakshmi Hegde

|

Jan 07, 2021 | 7:31 PM

ಅದೆಷ್ಟೋ ಜನರು ಫಿಟ್​ ಆಗಿರೋದಕ್ಕೆ ಕಸರತ್ತು ಮಾಡುತ್ತಲೇ ಇರುತ್ತಾರೆ. ಆ ವ್ಯಾಯಾಮ..ಈ ವರ್ಕೌಟ್​ ಅಂದುಕೊಂಡು ತಮ್ಮ ದೇಹದ ಫಿಟ್ನೆಸ್​​ಗಾಗಿ ಶ್ರಮಪಡುತ್ತಿರುತ್ತಾರೆ. ನೀವು ಫಿಟ್ನೆಸ್​ಗಾಗಿ ವರ್ಕೌಟ್​ ಮಾಡೋದು ತಪ್ಪಲ್ಲ.. ಆದರೆ ಅದರ ವಿಚಾರದಲ್ಲಿ ಕೆಲವು ತಪ್ಪು ಕಲ್ಪನೆಗಳನ್ನು ಯಾವ ಕಾರಣಕ್ಕೂ ಬೆಳೆಸಿಕೊಳ್ಳಬೇಡಿ ಎನ್ನುತ್ತಾರೆ ಸೆಲೆಬ್ರಿಟಿ ಫಿಟ್ನೆಸ್ ಟ್ರೇನರ್, ಮುಂಬೈ ಮೂಲದ​ ಯಾಸ್ಮಿನ್ ಕರಾಚಿವಾಲಾ.

ಅಷ್ಟಕ್ಕೂ ಫಿಟ್ನೆಸ್​ನೊಂದಿಗೆ, ಅದರಲ್ಲೂ ತೂಕ ಇಳಿಸಿಕೊಳ್ಳಲು ಮಾಡುವ ವ್ಯಾಯಾಮಗಳೊಂದಿಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುವ ಮಿಥ್ಯೆಗಳೇನು? ಎಂಬುದನ್ನು ಅವರೇ ವಿವರಿಸಿದ್ದಾರೆ. ಹಾಗೇ ವಾಸ್ತವ ಸಂಗತಿಯನ್ನೂ ತಿಳಿಸಿದ್ದಾರೆ.

ತಪ್ಪು ಕಲ್ಪನೆ: ವ್ಯಾಯಾಮ, ವರ್ಕೌಟ್ ಮಾಡುವಾಗ ಸಿಕ್ಕಾಪಟೆ ಬೆವರಿದರೆ ವೇಗವಾಗಿ ತೂಕ ಕಡಿಮೆಯಾಗುತ್ತದೆ.

ವಾಸ್ತವ: ವ್ಯಾಯಾಮ ಮಾಡುವಾಗ ಯಾರು ತುಂಬ ಬೆವರುತ್ತಾರೋ, ಅವರು ಬೇಗ ತೂಕ ಕಳೆದುಕೊಳ್ಳುತ್ತಾರೆ ಎಂಬುದು ಬಹುತೇಕರ ಅನಿಸಿಕೆ. ಆದರೆ ಇದು ತಪ್ಪಾದ ಅನಿಸಿಕೆ ಎನ್ನುತ್ತಾರೆ ಯಾಸ್ಮಿನ್. ಬೆವರುವುದು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಒಂದು ಸಹಜ ವಿಧಾನ. ನಮ್ಮ ದೇಹದ ತಾಪಮಾನ ಹೆಚ್ಚಾದಾಗ, ಅದಕ್ಕೆ ಜೈವಿಕ ಪ್ರತಿಕ್ರಿಯೆಯಾಗಿ ಬೆವರು ಬರುತ್ತದೆ. ಇದು ದೇಹದ ಒಳಗಿನ ಉಷ್ಣತೆ ಮತ್ತು ಚರ್ಮದ ತಾಪವನ್ನು ಕಡಿಮೆ ಮಾಡುತ್ತದೆ. ನೀವೇನಾದರೂ ಬಲವಂತವಾಗಿ ನಿಮ್ಮ ಮೈಯಿಂದ ಬೆವರು ಬರಿಸಿದರೆ ತೂಕ ಕಡಿಮೆಯಾದಂತೆ ಅನ್ನಿಸುತ್ತದೆ. ಆದರೆ ವಾಸ್ತವದಲ್ಲಿ ನಿಮ್ಮ ಮೈಯಲ್ಲಿ ಡಿಹೈಡ್ರೇಶನ್ ಆಗಿರುತ್ತದೆ. ತೂಕ ಕಡಿಮೆ ಆಗುವುದಿಲ್ಲ. ಹಾಗಾಗಿ ವ್ಯಾಯಾಮದಲ್ಲಿ ಸಿಕ್ಕಾಪಟೆ ಬೆವರುವುದು ಸುರಕ್ಷಿತವಲ್ಲ. ಹೊಸವರ್ಷದಿಂದ ಆ ದುರಭ್ಯಾಸ ಬಿಟ್ಟುಬಿಡಿ ಎಂದು ಸಲಹೆ ನೀಡಿದ್ದಾರೆ.

ತಪ್ಪುಕಲ್ಪನೆ: ನೀವು ಸತತವಾಗಿ ವ್ಯಾಯಾಮ ಮಾಡುತ್ತಿದ್ದು, ಮಧ್ಯ ಸ್ವಲ್ಪ ಅವಧಿಗೆ ನಿಲ್ಲಿಸಿದರೆ ನಿಮ್ಮ ಸ್ನಾಯುಗಳು ಕೊಬ್ಬಾಗಿ ಬದಲಾಗುತ್ತವೆ

ವಾಸ್ತವ: ಇದೂ ಸಹ ಖಂಡಿತ ತಪ್ಪಾದ ಭಾವನೆ. ಕೊಬ್ಬು ಮತ್ತು ಸ್ನಾಯುಗಳು ವಿಭಿನ್ನ ರಚನೆಗಳಲ್ಲಿ ಇರುತ್ತವೆ. ಇವೆಂದೂ ತಮ್ಮ ಸ್ವರೂಪವನ್ನು ಪರಸ್ಪರ ಬದಲಿಸಿಕೊಳ್ಳುವುದಿಲ್ಲ. ನೀವು ವ್ಯಾಯಾಮ, ವರ್ಕೌಟ್​ಗಳನ್ನು ಮಾಡಿದಾಗ ಸ್ನಾಯು ಜೀವಕೋಶಗಳು ದೊಡ್ಡದಾಗುತ್ತವೆ. ಹಾಗೇ ನೀವು ದೇಹದಂಡನೆ ಬಿಟ್ಟಾಗ ಅವು ಮತ್ತೆ ಸಣ್ಣದಾಗುತ್ತವೆ. ಆದರೆ ಯಾವ ಕಾರಣಕ್ಕೂ ಕೊಬ್ಬಾಗಿ ಮಾರ್ಪಾಡಾಗುವುದಿಲ್ಲ ಎಂದು ಕರಾಚಿವಾಲಾ ವಿವರಿಸಿದ್ದಾರೆ. ಹಾಗೇ, ನಿಮ್ಮ ದೇಹಕ್ಕೆ ಅಗತ್ಯ ಇರುವುದಕ್ಕಿಂತ ಜಾಸ್ತಿ ತಿಂದು, ದೇಹ ದಂಡನೆ ಮಾಡದೆ ಇದ್ದರೆ ಖಂಡಿತ ಫ್ಯಾಟ್ ಬೆಳೆಯುತ್ತದೆ ಎಂಬುದರ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.

ತಪ್ಪು ಕಲ್ಪನೆ: ಸ್ಪಾಟ್​ ರಿಡಕ್ಷನ್​ನಿಂದ ಕೊಬ್ಬು ಕರಗಿಸಲು ಸಾಧ್ಯ

ವಾಸ್ತವ:ಸ್ಪಾಟ್ ರಿಡಕ್ಷನ್​ಎಂದರೆ ದೇಹದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು, ಒಂದು ನಿರ್ದಿಷ್ಟ ವ್ಯಾಯಾಮ ರೂಢಿಸಿಕೊಂಡು ಅದನ್ನು ಮಾಡುವುದು. ಉದಾಹರಣೆಗೆ ಸೊಂಟದ ಬಳಿ ಕೊಬ್ಬು ಇದ್ದರೆ, ಅದಕ್ಕೆಂದೇ ಒಂದು ವ್ಯಾಯಾಮವನ್ನು ಮಾಡುವುದು. ಈ ಪದ್ಧತಿಯನ್ನು ಅನೇಕರು ಅಳವಡಿಸಿಕೊಳ್ಳುತ್ತಾರೆ. ಆದರೆ ಅದರಿಂದ ಅಲ್ಲಿರುವ ಕೊಬ್ಬು ಕರಗಿ, ಸಹಜಸ್ಥಿತಿಗೆ ಬರುತ್ತದೆ ಎಂಬುದು ಮಿಥ್ಯ. ಹೀಗೆ ಒಂದು ಭಾಗದಲ್ಲಿ ಕೊಬ್ಬು ಸಂಗ್ರಹ ಆಗುವುದು ಅವರ ಲಿಂಗ ಮತ್ತು ಅನುವಂಶಿಕತೆಗೆ ಸಂಬಂಧಪಟ್ಟಿರುತ್ತದೆ ಎಂದೂ ತಿಳಿಸಿದ್ದಾರೆ.

ಹಾಗೇ, ವ್ಯಾಯಾಮ ಮಾಡಿ ಆದರೆ ತಪ್ಪು ಕಲ್ಪನೆಗಳಿಂದ ಹೊರಬಂದು, ಸೂಕ್ತ ರೀತಿಯಲ್ಲಿ, ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು, ಹೊಂದಿಕೊಳ್ಳುವ ವರ್ಕೌಟ್​ಗಳನ್ನು ಮಾಡಿ ಎಂದು ಸಲಹೆಯನ್ನೂ ನೀಡಿದ್ದಾರೆ.

ಅಬ್ಬಬ್ಬಾ ಚಳಿ..! ನೀವು ಸಾಕಿದ ಮುದ್ದಿನ ನಾಯಿಯ ಆರೋಗ್ಯ ನಿಮ್ಮ ಕೈಯಲ್ಲಿದೆ, ಮಕ್ಕಳಂತೆ ಆರೈಕೆ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada