ಪಂತ್ ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್ ​ಕೀಪರ್: ರಿಕ್ಕಿ ಪಾಂಟಿಂಗ್

ಈವರೆಗೆ ಆಡಿರುವ 14 ಟೆಸ್ಟ್​ಗಳಲ್ಲಿ ಪಂತ್ 65 ಆಹುತಿಗಳನ್ನು ಪಡೆದಿದ್ದರೂ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಬಹಳ ಸುಧಾರಿಸಬೇಕಿದೆ, ಅವರ ಬ್ಯಾಟಿಂಗ್ ಕುರಿತು ಕಾಮೆಂಟ್​ ಮಾಡಲಾರೆ ಆದರೆ  ಗ್ಲೋವ್ ವರ್ಕ್ ಬಹಳಷ್ಟು ಉತ್ತಮಗೊಳ್ಳಬೇಕಿದೆ ಎಂದು ಪಾಂಟಿಂಗ್ ಹೇಳುತ್ತಾರೆ.

  • TV9 Web Team
  • Published On - 19:41 PM, 7 Jan 2021
ಪಂತ್ ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್ ​ಕೀಪರ್: ರಿಕ್ಕಿ ಪಾಂಟಿಂಗ್
ಕ್ಯಾಚ್ ನೆಲಸಮಗೊಳಿಸುತ್ತಿರುವ ಪಂತ್

ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ ಎರಡು ಕ್ಯಾಚ್​ಗಳನ್ನು ಡ್ರಾಪ್ ಮಾಡಿದ ರಿಷಭ್ ಪಂತ್ ಅವರನ್ನು ಭಾರತೀಯರಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಾಡುವ ಡೆಲ್ಲಿ ಕ್ಯಾಪಿಟಲ್ಸ್ ಟೀಮಿನ ಮೆಂಟರ್ ರಿಕ್ಕಿ ಪಾಂಟಿಂಗ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂತ್ ಕ್ಯಾಚಿಂಗ್ ಪ್ರಯತ್ನಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಂಟಿಂಗ್, ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್​ಕೀಪರ್ ಅಂದರೆ ಪಂತ್ ಎಂದು ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭಗೊಂಡ ಮೂರನೆ ಟೆಸ್ಟ್​ನಲ್ಲಿ ಪಂತ್, ಕೇವಲ ಮೂರು ಓವರ್​ಗಳ ಅಂತರದಲ್ಲಿ ಎರಡು ಬಾರಿ ಆಸ್ಟ್ರೇಲಿಯಾದ ಆರಂಭ ಆಟಗಾರ ಮತ್ತು ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಿಲ್ ಪುಕೊವ್​ಸ್ಕಿ ನೀಡಿದ ಕ್ಯಾಚ್​ಗಳನ್ನು ಕೈಚೆಲ್ಲಿದರು. ಮೊದಲಿಗೆ, ರವಿಚಂದ್ರನ್ ಓವರ್​ನಲ್ಲಿ ಪುಕೊವ್​ಸ್ಕಿ ಬ್ಯಾಟಿನ ಅಂಚು ಸವರಿ ತಮ್ಮ ಕೈಗೆ ಬಂದ ಚೆಂಡನ್ನು ಪಂತ್ ನೆಲಕ್ಕೆ ಬೀಳಿಸಿದರು. ಆದಾದ ನಂತರ ಮೊಹಮ್ಮದ್ ಸಿರಾಜ್ ಎಸೆತವೊಂದನ್ನು ಪುಕೊವ್​ಸ್ಕಿ ಪುಲ್ ಮಾಡುವ ಪ್ರಯತ್ನ ಮಾಡಿದಾಗ ಬಾಲು ಅವರ ಬ್ಯಾಟಿಗೆ ಸಿಗದೆ ಗ್ಲೌವ್​ಗೆ ತಗುಲಿ ಮೇಲಕ್ಕೆ ಹಾರಿತು. ಹಿಂದೆ ಓಡಿ ಅದನ್ನು ಪಂತ್ ಹಿಡಿದರಾದರೂ ಕ್ಯಾಚ್ ಸಂಪೂರ್ಣಗೊಳ್ಳುವ ಮೊದಲೇ ನೆಲಕ್ಕೆ ಹಾಕಿದರು.

‘ಸರಳವಾದ ಪದಗಳಲ್ಲಿ ಹೇಳಬೇಕೆಂದರೆ, ಪಂತ್ ಎರಡು ಕ್ಯಾಚ್​ಗಳನ್ನು ನೆಲಸಮಗೊಳಿಸಿದರು. ಅವರು ಬಿಟ್ಟ ಕ್ಯಾಚ್​ಗಳು ಹಿಡಿಯಲಾಗದಷ್ಟು ಕಠಿಣವೇನೂ ಆಗಿರಲಿಲ್ಲ. ಪಂತ್​ರ ಅದೃಷ್ಟವೆಂದರೆ, ಪುಕೊವ್​ಸ್ಕಿ ದೊಡ್ಡ ಸ್ಕೋರ್ ಗಳಿಸಲಿಲ್ಲ. ಒಂದು ಪಕ್ಷ ಅವರು ಶತಕವೋ, ದ್ವಿಶತಕವೋ ಬಾರಿಸಿದ್ದರೆ, ಪಂತ್ ತಮ್ಮನ್ನು ತಾವು ಹಳಿದುಕೊಳ್ಳಬೇಕಾಗುತಿತ್ತು. ನನಗೆ ಸಿಡ್ನಿ ಮೈದಾನ ಬ್ಯಾಟಿಂಗ್​ಗೆ ಅನುಕೂಲಕರವಾಗಿ ಕಾಣುತ್ತಿದೆ,’ ಎಂದು ಕ್ರಿಕೆಟ್​ ವೆಬ್​ಸೈಟಿನೊಂದಿಗೆ ಮಾತಾಡುವಾಗ ಪಾಂಟಿಂಗ್ ಹೇಳಿದರು.

ರಿಕ್ಕಿ ಪಾಂಟಿಂಗ್ ಮತ್ತು ರಿಷಭ್ ಪಂತ್

ಈವರೆಗೆ ಆಡಿರುವ 14 ಟೆಸ್ಟ್​ಗಳಲ್ಲಿ ಪಂತ್ 65 ಆಹುತಿಗಳನ್ನು ಪಡೆದಿದ್ದರೂ ಅವರ ವಿಕೆಟ್ ಕೀಪಿಂಗ್ ಬಹಳ ಸುಧಾರಿಸಬೇಕಿದೆ ಎಂದು ಪಾಂಟಿಂಗ್ ಹೇಳುತ್ತಾರೆ. ಮೆಲ್ಬರ್ನ್ ಟೆಸ್ಟ್​ನಲ್ಲೂ ಅವರು ಪ್ಯಾಟ್ ಕಮ್ಮಿನ್ಸ್ ನೀಡಿದ ಕ್ಯಾಚನ್ನು ಬಿಟ್ಟಿದ್ದರು.

‘ಕ್ಯಾಚ್​ಗಳನ್ನು ಡ್ರಾಪ್ ಮಾಡಿದ ನಂತರ ಇವು ನನಗೆ ಬಹಳ ದುಬಾರಿಯಾಗಲಿವೆ ಮತ್ತು ಪುಕೊವ್​ಸ್ಕಿ ಅದಕ್ಕಾಗಿ ನಾನು ಪರಿತಪಿಸುವಂತೆ ಮಾಡುತ್ತಾರೆ ಅಂತ ಪಂತ್ ಖಂಡಿತವಾಗಿಯೂ ಅಂದುಕೊಂಡಿರುತ್ತಾರೆ. ನಾನಂದುಕೊಳ್ಳುವ ಹಾಗೆ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ನಂತರ ಅವರು ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ನೆಲಸಮಗೊಳಿಸಿರುವ ವಿಕೆಟ್​ಕೀಪರ್ ಆಗಿದ್ದಾರೆ. ಅವರ ಬ್ಯಾಟಿಂಗ್ ಕುರಿತು ನಾನು ಮಾತಾಡುವುದಿಲ್ಲ ಆದರೆ ಗ್ಲೋವ್ ವರ್ಕ್ ಬಹಳ ಸುಧಾರಿಸಬೇಕಿದೆ,’ ಎಂದು ಹೇಳಿದರು.

ಗ್ಲೋವ್ ವರ್ಕ್ ಒಂದರೆಡು ದಿನಗಳಲ್ಲಿ ಸುಧಾರಿಸುವಂಥ ಕೆಲಸವಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಹಾಗಾಗಿ, ನಾಳೆಯಿಂದಲೇ ವಿಕೆಟ್​ಗಳ ಹಿಂದೆ ಪಂತ್​ರಿಂದ ಸುಧಾರಿತ ಪ್ರದರ್ಶನ ಬಂದೀತು ಎನ್ನುವ ನಿರೀಕ್ಷೆ ಸುಳ್ಳು.

 

India vs Australia Test Series| ಮಳೆ ಕಾಟದ ನಡುವೆ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ