ಮೋಟಾರು ವಾಹನ ಪ್ರಮಾಣಪತ್ರಗಳ ಸಂಬಂಧ ಈ 18 ಸೇವೆಗೆ ಇನ್ನು ಆಧಾರ್ ದೃಢೀಕರಣವಷ್ಟೇ ಸಾಕು
ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ಗೆ ಸಂಬಂಧಿಸಿದ 18 ಸೇವೆಗಳಿಗೆ ಕಾಂಟ್ಯಾಕ್ಟ್ಲೆಸ್ ಆಗಿ ಸೇವೆ ಪಡೆಯುವುದಕ್ಕೆ ಆಧಾರ್ ದೃಢೀಕರಣ ಸಾಕು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಿಂದ ತಿಳಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು (MoRTH) ಅಧಿಸೂಚನೆಯೊಂದನ್ನು ಹೊರಡಿಸಿದೆ. ಅದರ ಪ್ರಕಾರ, ಲೈಸೆನ್ಸ್ಗೆ ಸಂಬಂಧಿಸಿದ 18 ಸೇವೆಗಳನ್ನು ಆಧಾರ್ ಅಥೆಂಟಿಕೇಷನ್ (ದೃಢೀಕರಣ) ಮೂಲಕ ಕಾಂಟ್ಯಾಕ್ಟ್ಲೆಸ್ ಆಗಿ ಪಡೆಯಬಹುದು. ಈ ಸೇವೆಗಳನ್ನು ಪರಿಚಯಿಸುವ ಮೂಲಕ ಜನರು ಲೈಸೆನ್ಸ್ ನವೀಕರಣಕ್ಕಾಗಿಯೋ, ವಾಹನ ನೋಂದಣಿಗೋ ಅಥವಾ ಕಲಿಕಾ ಪರವಾನಗಿ ಪಡೆಯುವುದಕ್ಕೂ ಮತ್ತು ಇಂಥ ಹಲವು ಸೇವೆಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTOs) ತೆರಳುವ ಅಗತ್ಯ ಇಲ್ಲ.
ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಯಾವುದೇ ವೈಯಕ್ತಿಕ ಅರ್ಜಿದಾರರು ಪೋರ್ಟಲ್ ಮೂಲಕ ಕಾಂಟ್ಯಾಕ್ಟ್ಲೆಸ್ ಸೇವೆ ಪಡೆಯಲು ಬಯಸಿದಲ್ಲಿ ಅಂಥವರು ಆಧಾರ್ ದೃಢೀಕರಣ ಮಾಡಬೇಕು. ಒಂದು ವೇಳೆ ಆಧಾರ್ ಇಲ್ಲದ ಪಕ್ಷದಲ್ಲಿ ನೋಂದಣಿ ಐ.ಡಿ. ಪತ್ರದ ಆಧಾರದಲ್ಲಿ ಈ ಸೇವೆಯನ್ನು ಒದಗಿಸಲಾಗುವುದು. ಅನುಕೂಲಕರ ಹಾಗೂ ಅಡೆತಡೆ ಇಲ್ಲದೆ ನಾಗರಿಕರಿಗೆ ಸೇವೆ ಒದಗಿಸಲು ಸಚಿವಾಲಯದಿಂದ ಎಲ್ಲ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ. ಮಾಧ್ಯಮಗಳ ಮೂಲಕ ಹಾಗೂ ವೈಯಕ್ತಿಕವಾಗಿ ಈ ಬಗ್ಗೆ ಜನರ ಗಮನವನ್ನು ಸೆಳೆಯಲಾಗುವುದು. ಅನುಷ್ಠಾನ ಸಂಸ್ಥೆಯ ಮೂಲಕ ಕಾಂಟ್ಯಾಕ್ಟ್ಲೆಸ್ ಸೇವೆ ಪಡೆಯುವುದಕ್ಕೆ ಆಧಾರ್ ಅಗತ್ಯದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಲಾಗಿದೆ.
ಆಧಾರ್ ದೃಢೀಕರಣದೊಂದಿಗೆ ಪಡೆಯಬಹುದಾದ ಡಿ.ಎಲ್.ಗೆ ಸಂಬಂಧಿಸಿದ 18 ಸೇವೆಗಳು: – ಕಲಿಕಾ ಪರವಾನಗಿ (ಲರ್ನರ್ ಲೈಸೆನ್ಸ್) – ಲೈಸೆನಸ್ ನವೀಕರಣ. ಇದಕ್ಕೆ ಚಾಲನೆ ಮಾಡುವ ಕ್ಷಮತೆ ಪರೀಕ್ಷೆ ಅಗತ್ಯವಿಲ್ಲ. – ಡ್ರೈವಿಂಗ್ ಲೈಸೆನ್ಸ್ ನಕಲು – ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ – ಅಂತರರಾಷ್ಟ್ರೀಯ ಚಾಲನಾ ಪರವಾನಗಿ ವಿತರಣೆ – ಲೈಸೆನ್ಸ್ನಿಂದ ವಾಹನದ ಕ್ಲಾಸ್ ಸರೆಂಡರ್ಗೆ – ಮೋಟಾರು ವಾಹನಗಳ ತಾತ್ಕಾಲಿಕ ನೋಂದಣಿ ಅರ್ಜಿಗೆ – ಪೂರ್ತಿ ಕಟ್ಟಿದ ಬಾಡಿಯ ಮೋಟಾರು ವಾಹನಗಳ ನೋಂದಣಿ ಅರ್ಜಿಗೆ – ನೋಂದಣಿ ಪ್ರಮಾಣ ಪತ್ರದ ನಕಲು ವಿತರಿಸುವುದಕ್ಕೆ ಅರ್ಜಿಗೆ – ನೋಂದಣಿ ಪ್ರಮಾಣ ಪತ್ರದ ನಿರಾಕ್ಷೇಪಣಾ ಪ್ರಮಾಣಪತ್ರದ ಅರ್ಜಿಗೆ – ಮೋಟಾರು ವಾಹನದ ಮಾಲೀಕತ್ವ ವರ್ಗಾವಣೆ ನೋಟಿಸ್ಗೆ – ಮೋಟಾರು ವಾಹನದ ಮಾಲೀಕತ್ವ ವರ್ಗಾವಣೆಗೆ – ನೋಂದಣಿ ಪ್ರಮಾಣ ಪತ್ರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಮಾಹಿತಿ ನೀಡುವುದಕ್ಕೆ – ನೋಂದಾಯಿತ ಚಾಲಕ ತರಬೇತಿ ಕೇಂದ್ರದಲ್ಲಿ ಚಾಲಕ ತರಬೇತಿಗೆ ನೋಂದಣಿ ಅರ್ಜಿಗಾಗಿ – ರಾಜತಾಂತ್ರಿಕ ಅಧಿಕಾರಿಗಳ ಮೋಟಾರು ವಾಹನಗಳ ನೋಂದಣಿ ಅರ್ಜಿಗೆ – ರಾಜತಾಂತ್ರಿಕ ಅಧಿಕಾರಿಗಳ ಮೋಟಾರು ವಾಹನಗಳ ಹೊಸದಾಗಿ ನೋಂದಣಿ ಗುರುತಿಗಾಗಿ ಅಸೈನ್ಮೆಂಟ್ ಅರ್ಜಿಗೆ – ಒಪ್ಪಂದ- ಖರೀದಿ ದೃಢೀಕರಣ – ಒಪ್ಪಂದ- ಖರೀದಿ ರದ್ದು
ಇದನ್ನೂ ಓದಿ: ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್ PVC ಕಾರ್ಡ್