ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನೆರವೇರಿಸುವ ನಿಟ್ಟಿನಲ್ಲಿ ಹೈಕಮಾಂಡ್ ಅನುಮತಿ ಪಡೆಯಲು ಭಾರಿ ಹುಮ್ಮಸ್ಸಿನಲ್ಲಿ ದೆಹಲಿಗೆ ಪ್ರಯಾಣ ಬೆಳಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಇದೀಗ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರ ಕೊಡದೆ ಮೌನವಹಿಸುತ್ತಿದ್ದಾರೆ.
ದೆಹಲಿಯಿಂದ ಯಡಿಯೂರಪ್ಪ ವಾಪಾಸ್ ಆಗಿ ವಾರ ಕಳೆದರೂ ಇನ್ನೂ ಸಂಪುಟ ವಿಸ್ತರಣೆ ಆಗಿಲ್ಲ. ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎಂದಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ಇತ್ತ, ಇಂದು ನಗರಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ, ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನಿಸಿದ್ದಕ್ಕೆ, ನೀವೆಲ್ಲಾ ಯಾಕೆ ಇಷ್ಟೊಂದು ತರಾತುರಿಯಲ್ಲಿದ್ದೀರಿ ಎಂದು ಮರುಪ್ರಶ್ನೆ ಹಾಕಿ ಹೊರಟು ಹೋದರು.
ಈ ಮೂಲಕ, ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತಿದ್ದ ನಾಯಕರು ಈಗ U-ಟರ್ನ್ ತೆಗೆದುಕೊಂಡಿದ್ದಾರೆ. ಇದೀಗ ಎಲ್ಲರ ಗಮನ ಸಿಎಂನತ್ತ ಹರಿದಿದೆ. ಆದರೆ, ಅರುಣ್ ಸಿಂಗ್ ಹೇಳಿಕೆಯ ನಂತರವೂ ಸಿಎಂ ಯಡಿಯೂರಪ್ಪ ಮೌನಂ ಶರಣಂ ಗಚ್ಛಾಮಿ ಎಂದು ಸುಮ್ಮನಾಗಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ, ಸಚಿವ ಸಂಪುಟ ವಿಸ್ತರಣೆಯ ವಿಚಾರ ಹಲವು ಗೊಂದಲ ಸೃಷ್ಟಿಸಿದೆ. ಹಾಗಾಗಿ, ಹೈಕಮಾಂಡ್ ಮೇಲೆ ಸಿಎಂ ಬಿಎಸ್‌ವೈ ಮುನಿಸಿಕೊಂಡಿದ್ದಾರಾ ಎಂಬ ಅನುಮಾನಗಳು ಮೂಡಿವೆ.
ಸಿಎಂ ಯಡಿಯೂರಪ್ಪ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಅದಕ್ಕಾಗಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರಬಹುದು. ರಾಜ್ಯಸರ್ಕಾರ ಚೆನ್ನಾಗಿ ಕೆಲಸ ನಿರ್ವಹಿಸಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ನಾಯಕರು: ಕೋರ್ ಕಮಿಟಿ ಸಭೆ ಒಳಗೆ ನಡೆದಿದ್ದೇನು? ಇಂದಿನ ಕಾರ್ಯಕಾರಿಣಿ ಸಭೆ ಏನು ಮಾಡುತ್ತೆ?