ಶಮಂತ್ ಅಲಿಯಾಸ್ ಬ್ರೋ ಗೌಡ ಅವರ ಸ್ವಾರ್ಥಕ್ಕೆ ಇಡೀ ಮನೆಯವರು ಬಲಿ ಪಶು ಆಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಬ್ರೋ ಗೌಡ ತಾನು ಸೇಫ್ ಆಗೋದಕ್ಕೆ ಎಮೋಷನಲ್ ನಾಟಕವಾಡಿದರು ಎನ್ನುವ ಮಾತು ಕೇಳಿ ಬಂದ ಬೆನ್ನಲ್ಲೇ ಇಡೀ ಮನೆಯವರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದು ಸದ್ಯದ ಕುತೂಹಲ.
ಮೈಕ್ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್ ಸಿಟ್ಟಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮೈಕ್ ನೀಡುತ್ತೇವೆ. ಆದರೆ, ಕಿವಿಯಲ್ಲಿ ಹೋಗಿ ಮಾತನಾಡುವ ಮೂಲಕ ಶಮಂತ್ ಅವರು ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದ ಸುದೀಪ್, ಇದಕ್ಕೆ ಶಿಕ್ಷೆ ನೀಡುವುದಾಗಿಯೂ ಹೇಳಿದರು.
ಬಿಗ್ ಬಾಸ್ ಮೂರನೇ ವಾರದ ಎಲಿಮಿನೇಷನ್ಗೆ ಶಮಂತ್ ನೇರವಾಗಿ ನಾಮಿನೇಟ್ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್ ಹಾಕಿದರು ಸುದೀಪ್. ಬ್ರೋ ಗೌಡ ಅವರನ್ನು ಉಳಿಸಲು ಮನೆಯಲ್ಲಿ ಕೆಲವರು ಸಮ್ಮತಿ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಶಮಂತ್ ಎಮೋಷನಲ್ ಆಗಿ ಡೈಲಾಗ್ ಹೊಡೆದರು. ನನ್ನ ಅಪ್ಪ-ಅಮ್ಮ ಉಸಿರಾಡ್ತಿರೋದು ನನ್ನ ಹೆಸರಿಂದ ಎಂದು ಹೇಳಿ ಭಾವುಕರಾದರು. ಹೀಗಾಗಿ ಮನೆಯವರೆಲ್ಲರೂ ಬೆಡ್ ರೂಂ ಬಿಡೋಕೆ ಒಪ್ಪಿಕೊಂಡರು. ಈ ಮೂಲಕ ಶಮಂತ್ ಸೇಫ್ ಆದರು.
ಶಮಂತ್ ಅವರನ್ನು ಉಳಿಸೋಕೆ ಹೋಗಿ ಈಗ ಮನೆಮಂದಿಯೆಲ್ಲ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ನಿದ್ರೆ ಕೂಡ ಬರುತ್ತಿಲ್ಲ. ಇದು ಮನೆಯವರ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ಶಮಂತ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲ ಶಮಂತ್ ಸ್ವಾರ್ಥ ಜೀವಿ ಎಂದು ಕಿಡಿಕಾರುತ್ತಿದ್ದಾರೆ.
ಇಂದು ಎಲಿಮಿನೇಷನ್ಗೆ ನಾಮಿನೇಷನ್ ಇರಲಿದೆ. ಈ ವೇಳೆ ಶಮಂತ್ ಅವರನ್ನೇ ನಾವು ನಾಮಿನೇಟ್ ಮಾಡುತ್ತೇವೆ ಎಂದು ಮನೆ ಮಂದಿ ಹೇಳುತ್ತಿದ್ದಾರೆ. ಈ ಮೂಲಕ ಈ ವಾರ ಶಮಂತ್ ನಾಮಿನೇಟ್ ಆಗುವ ಎಲ್ಲಾ ಲಕ್ಷಣ ಇದೆ. ಮೊದಲ ಎರಡು ವಾರ ಸೇಫ್ ಆಗಿದ್ದ ಶಮಂತ್ ಈ ವಾರ ನಾಮಿನೇಟ್ ಆದರೆ ಸೇಫ್ ಆಗುತ್ತಾರೆಯೇ ಎನ್ನುವುದೇ ಸದ್ಯದ ಪ್ರಶ್ನೆ.
ಇದನ್ನೂ ಓದಿ: BBK8: ಲ್ಯಾಗ್ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!