AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿ ಮೇಲೆ ಕರಡಿ ದಾಳಿ, ಕಾಡಂಚಿನ ಜನಕ್ಕೆ ಶುರುವಾಗಿದೆ ಭಯ..

ಹಾವೇರಿ: ಗೌಳೇರದೊಡ್ಡಿ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ. ಇಲ್ಲಿ ನೂರಕ್ಕೂ ಅಧಿಕ‌ ಕುಟುಂಬಗಳು ವಾಸವಾಗಿವೆ. ಹೈನುಗಾರಿಕೆ ಬಿಟ್ಟರೆ ಇಲ್ಲಿನ ಜನರಿಗೆ ಬೇರೇನೂ ಗೊತ್ತಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಅರಣ್ಯ ಪ್ರದೇಶದಲ್ಲಿರುವ ಗೌಳೇರದೊಡ್ಡಿ ಜನರಿಗೆ ಕರಡಿಯ ಕಾಟ ಶುರುವಾಗಿದೆ. ನೆಮ್ಮದಿ ಕೆಡಿಸಿರುವ ಕರಡಿ: ಗೌಳೇರದೊಡ್ಡಿಯಲ್ಲಿನ ಜನರು ಬೆಳಗ್ಗೆ ಮುಂಡಗೋಡ ಪಟ್ಟಣಕ್ಕೆ ಹೋಗಿ ಮನೆ ಮನೆಗೆ ಹಾಲು ಹಾಕಿ ಬರುತ್ತಾರೆ. ನಂತರ ಅರಣ್ಯದಲ್ಲಿ ಎಮ್ಮೆಗಳನ್ನು […]

ವ್ಯಕ್ತಿ ಮೇಲೆ ಕರಡಿ ದಾಳಿ, ಕಾಡಂಚಿನ ಜನಕ್ಕೆ ಶುರುವಾಗಿದೆ ಭಯ..
ಆಯೇಷಾ ಬಾನು
| Edited By: |

Updated on: Oct 19, 2020 | 1:20 PM

Share

ಹಾವೇರಿ: ಗೌಳೇರದೊಡ್ಡಿ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ. ಇಲ್ಲಿ ನೂರಕ್ಕೂ ಅಧಿಕ‌ ಕುಟುಂಬಗಳು ವಾಸವಾಗಿವೆ. ಹೈನುಗಾರಿಕೆ ಬಿಟ್ಟರೆ ಇಲ್ಲಿನ ಜನರಿಗೆ ಬೇರೇನೂ ಗೊತ್ತಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಅರಣ್ಯ ಪ್ರದೇಶದಲ್ಲಿರುವ ಗೌಳೇರದೊಡ್ಡಿ ಜನರಿಗೆ ಕರಡಿಯ ಕಾಟ ಶುರುವಾಗಿದೆ.

ನೆಮ್ಮದಿ ಕೆಡಿಸಿರುವ ಕರಡಿ: ಗೌಳೇರದೊಡ್ಡಿಯಲ್ಲಿನ ಜನರು ಬೆಳಗ್ಗೆ ಮುಂಡಗೋಡ ಪಟ್ಟಣಕ್ಕೆ ಹೋಗಿ ಮನೆ ಮನೆಗೆ ಹಾಲು ಹಾಕಿ ಬರುತ್ತಾರೆ. ನಂತರ ಅರಣ್ಯದಲ್ಲಿ ಎಮ್ಮೆಗಳನ್ನು ಮೇಯಿಸಲು ಹೋಗುತ್ತಾರೆ. ಹೀಗೆ ಎಮ್ಮೆ ಮೇಯಿಸಲು ಹೋದಾಗ ಕರಡಿ ದಾಳಿ ಮಾಡುತ್ತಿದೆ. ಕಳೆದ ಕೆಲವು ದಿನಗಳ ಹಿಂದಷ್ಟೆ ಮುಂಡಗೋಡ ತಾಲೂಕಿನ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ಮಾಡಿತ್ತು.

ಈಗ ಗೌಳೇರದೊಡ್ಡಿಯ ರಾಮು ಎಡಗೆ ಎಂಬಾತನ ಮೇಲೆ ಕರಡಿ ದಾಳಿ ಮಾಡಿದೆ. ತಲೆ, ಎರಡು ಕೈ ಮತ್ತು ಕಾಲುಗಳಿಗೆ ಕಚ್ಚಿ, ಪರಚಿ ಕರಡಿ ಗಾಯಗೊಳಿಸಿದೆ. ಗಾಯಾಳುವಿಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಗೌಳೇರದೊಡ್ಡಿಯ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಕಳೆದ‌ ಕೆಲವು ದಿನಗಳಿಂದ ಕರಡಿ ಪದೇ ಪದೇ ಕಾಡಂಚಿನ ಜನರ ಮೇಲೆ ದಾಳಿ ಮಾಡುತ್ತಿದೆ. ದಾಳಿಯಿಂದ ಕಾಡಂಚಿನ ಜನರು ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಗೌಳೇರದೊಡ್ಡಿಯಲ್ಲಿನ ಜನರಿಗಂತೂ ಕರಡಿ ದಾಳಿ ಎಲ್ಲಿಲ್ಲದ ಭಯ ಸೃಷ್ಟಿಸಿದೆ.

ಅಲ್ದೆ ಗೌಳೇರದೊಡ್ಡಿ ಸಮೀಪದ ದುಂಡಸಿ, ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲೂ ಕರಡಿ ದಾಳಿಯಿಂದ ಆತಂಕದ ವಾತಾವಾರಣ ಸೃಷ್ಟಿಯಾಗಿದೆ. ಮುಂಡಗೋಡ ತಾಲೂಕಿನ ಓರ್ವ ಹಾಗೂ ಗೌಳೇರದೊಡ್ಡಿಯ ಓರ್ವನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ದಾಳಿ ಭೀತಿಗೆ ಒಳಗಾಗಿರುವ ಗೌಳೇರದೊಡ್ಡಿಯ ಜನರಲ್ಲಿನ ಆತಂಕವನ್ನು ದೂರ ಮಾಡಬೇಕಿದೆ.