AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಪೃಷ್ಯತೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿಹಾಯ್ದ ತಿಮ್ಮಾಪುರ: ತಿರುಗೇಟು ಕೊಟ್ಟ ಸಿಸಿ ಪಾಟೀಲ

ದೇಶವನ್ನು ಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್ ಪಕ್ಷ. ಅಸ್ಪೃಷ್ಯತೆ ಇದೆ ಎಂದರೆ ಕಾಂಗ್ರೆಸ್​ಗೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲಕ್ಕೆ ಈ ಪ್ರಕರಣ ಕಾರಣವಾಯಿತು..

ಅಸ್ಪೃಷ್ಯತೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿಹಾಯ್ದ ತಿಮ್ಮಾಪುರ: ತಿರುಗೇಟು ಕೊಟ್ಟ ಸಿಸಿ ಪಾಟೀಲ
ಸಚಿವ ಸಿಸಿ ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ತಿಮ್ಮಾಪುರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 16, 2022 | 3:24 PM

Share

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಅಸ್ಪೃಷ್ಯತೆ ಕುರಿತು ಬುಧವಾರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಯ ವೇಳೆ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್​ನ ವಿಧಾನ ಪರಿಷತ್ ಸದಸ್ಯ ತಿಮ್ಮಾಪುರ, ಮುತ್ತಾತರ ಕಾಲದಿಂದ ಅಸ್ಪೃಶ್ಯರೆಂದು ಹೇಳಿಕೊಳ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವ್ಯಂಗ್ಯವಾಡಿದರು. ತಿಮ್ಮಾಪುರ ಮಾತಿಗೆ ಸಚಿವ ಸಿ.ಸಿ.ಪಾಟೀಲ್ ವಿರೋಧ ವ್ಯಕ್ತಪಡಿಸಿದರು. ದೇಶವನ್ನು ಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್ ಪಕ್ಷ. ಅಸ್ಪೃಷ್ಯತೆ ಇದೆ ಎಂದರೆ ಕಾಂಗ್ರೆಸ್​ಗೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲಕ್ಕೆ ಈ ಪ್ರಕರಣ ಕಾರಣವಾಯಿತು..

ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ದಲಿತರನ್ನು ಮಾತಾಡಲು ಬಿಡುತ್ತಿಲ್ಲ. ದಲಿತರು ಮಾತನಾಡುವುದನ್ನು ಇವರು ಸಹಿಸುವುದೂ ಇಲ್ಲ. ಇವರ ಮನಸ್ಸು ಹೇಗಿದೆ ಎನ್ನುವುದಕ್ಕೆ ಇದು ಉದಾಹರಣೆ. ಅವರ ಅಭಿಪ್ರಾಯ ಹೇಳಲು ಅವರಿಗೆ ಅವಕಾಶ ಮಾಡಿಕೊಡಿ ಎಂದರು. ‘ಇದು ಇವರ ಮನುಸ್ಮೃತಿ ಮನಸ್ಥಿತಿ’ ಎಂದು ಕಾಂಗ್ರೆಸ್​ ಸದಸ್ಯ ರವಿ ಹೇಳಿದರು. ಈ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು.

ಮಾತು ಮುಂದುವರಿಸಿದ ತಿಮ್ಮಾಪುರ, ಹಿಂದೂ ಧರ್ಮದಲ್ಲಿ ನಾವು ಪಾಲುದಾರರು ಹೌದೋ ಅಲ್ಲವೋ? ಜಾತಿಗಾಗಿ ಯುವತಿಯರಿಗೆ ಬೆಂಕಿ ಹಚ್ಚಿ ಬಾವಿಗೆ ಹಾಕಿದಾಗ ಯಾರಾದರೂ ಸ್ವಾಮಿಗಳು ಮಾತಾಡಿದ್ರಾ? ಕೋಮುವಾದದ ವಿಷ ಕುಡಿದವ್ರು ಎಷ್ಟು ದಿನ ಬದುಕಲು ಸಾಧ್ಯ ಎಂದು ನೋಡಲೆಂದು ಇಲ್ಲಿಗೆ ಬಂದಿದ್ದೇವೆ ಎಂದು ಹರಿಹಾಯ್ದರು. ಈ ಮಾತಿಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಗದ್ದಲ ಮನೆಮಾಡಿತು.

ಸಭಾತ್ಯಾಗದ ಬೆದರಿಕೆ

ತಿಮ್ಮಾಪುರ ಮಾತಿಗೆ ಸ್ಪಷ್ಟನೆ ನೀಡಲು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿಗೆ ಅವಕಾಶ ನೀಡಿದ್ದನ್ನು ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್ ಒಪ್ಪಲಿಲ್ಲ. ನೀವು ಹೀಗೆ ಮಾಡಿದರೆ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು. ಆರ್​ಎಸ್​ಎಸ್​ ನಾಯಕರ ಬಗ್ಗೆ ಪ್ರಸ್ತಾಪಿಸಿದ ತಿಮ್ಮಾಪುರ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡಲು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಸಭಾಪತಿ ಪೀಠ ಅವಕಾಶ ನೀಡಿತ್ತು. ನಾವು ದಲಿತರು, ಇದೇ ಕಾರಣಕ್ಕೆ ನಮಗೆ ಸದನದಲ್ಲಿ ಮಾತನಾಡಲು ಬಿಡುತ್ತಿಲ್ಲ. ಬೇರೆಯವರಿಗೆ ಮಾತನಾಡಲು ಅವಕಾಶ ಕೊಟ್ಟರೆ ಹೇಗೆ. ಇದು ದಲಿತ ವಿರೋಧಿ ನೀತಿ. ನೀವು ಹೀಗೆ ಮಾಡಿದರೆ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಆಕ್ಷೇಪಿಸಿದರು.

ಬಿ.ಕೆ.ಹರಿಪ್ರಸಾದ್ ಮಾತಿಗೆ ಶ್ರೀನಿವಾಸ ಪೂಜಾರಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರ ಮಧ್ಯಪ್ರವೇಶಿಸಿದಾಗ ಕೇಳಬೇಕು ಎಂದು ಪೂಜಾರಿ ಹೇಳಿದರು. ನಾವು ಇದನ್ನೆಲ್ಲ ಒಪ್ಪುವುದಿಲ್ಲ ಎಂದು ವಿಪಕ್ಷ ನಾಯಕ ಹರಿಪ್ರಸಾದ್​ ಪ್ರತಿಪಾದಿಸಿದಾಗ ಸಭಾನಾಯಕ, ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿಗಳು ಸದಸ್ಯರಿಗೆ ರಕ್ಷಣೆ ಕೊಡಬೇಕು. ನೀವು ಸರ್ಕಾರದ ಜತೆ ಸೇರಿಕೊಂಡಿದ್ದೀರಿ ಎಂದು ಹರಿಪ್ರಸಾದ್ ದೂರಿದರು. ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿ ಪರಿಸ್ಥಿತಿ ತಿಳಿಗೊಳಿಸಿದರು.

ಗೋ ಸಂರಕ್ಷಣೆಗೆ 275 ಪಶು ಚಿಕಿತ್ಸಾ ವಾಹನ

ಬೆಂಗಳೂರು: ಕರ್ನಾಟಕದಲ್ಲಿ ಗೋ ಸಂರಕ್ಷಣೆಗಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸುತ್ತೇವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು. ಪ್ರಶ್ನೋತ್ತರ ಕಲಾಪದ ವೇಳೆ ಮಾಹಿತಿ ನೀಡಿದ ಅವರು, ಈಗಾಗಲೇ 15 ಅಂಬ್ಯುಲೆನ್ಸ್​ಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿರುವ ತಲಾ ಒಂದು ಲಕ್ಷ ಜಾನುವಾರುಗಳಿಗೆ ಒಂದು ಆಂಬ್ಯುಲೆನ್ಸ್ ಒದಗಿಸಲು ಯೋಜಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಈ ಕ್ರಮ ಜಾರಿ ಮಾಡಲಾಗಿದೆ ಎಂದು ಹೇಳಿದರು. ಅಂಬ್ಯುಲೆನ್ಸ್ ಮೇಲೆ‌ ನಿಮ್ಮದೊಂದು ಫೋಟೋ ಹಾಕಿಸ್ಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಮಾಡಿದರು.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆ ಸಂಬಂಧ ವಿಧಾನ ಪರಿಷತ್​ನಲ್ಲಿ ಗದ್ದಲ; ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಏಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್

ಇದನ್ನೂ ಓದಿ: ನವೀನ್ ದೇಹವನ್ನು ಬೇಗ ತರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

Published On - 3:20 pm, Wed, 16 March 22